ಭಾನುವಾರ, ಡಿಸೆಂಬರ್ 8, 2019
25 °C

ಯಡಿಯೂರಪ್ಪ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡಿಯೂರಪ್ಪ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ

ಶಿವಮೊಗ್ಗ/ ಶಿಕಾರಿಪುರ: ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಶಿವಮೊಗ್ಗ ಮನೆಗೆ ಹಾಗೂ ತಾಲ್ಲೂಕು ಕಾಂಗ್ರೆಸ್‌ ಮುಖಂಡರು ಶಿಕಾರಿಪುರದ ಮನೆಗೆ ಭಾನುವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮೊದಲು ಒಳ್ಳೆಯ ದಿನಗಳ ನಿರೀಕ್ಷೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದರೂ  ದೇಶಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಅಗತ್ಯ ಪದಾರ್ಥಗಳ ದರ ಏರಿಕೆಯಾಗುತ್ತಲೇ ಇದೆ. ಮಹದಾಯಿ ನದಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಕಡಿಮೆಯಾಗಿದ್ದರೂ, ಅನಿಲ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ರೈತನ ಸರಣಿ ಆತ್ಮಹತ್ಯೆ, ಕೃಷಿ ಸಾಮಗ್ರಿ, ಬೀಜ, ಗೊಬ್ಬರಗಳ ಬೆಲೆ ಏರಿಕೆಯಾಗಿವೆ. ಪ್ರಕೃತಿ ವಿಕೋಪ, ಬ್ಯಾಂಕ್ ಸಾಲಗಳಿಂದ ರೈತರು ಕಂಗೆಟ್ಟಿದ್ದಾರೆ. ಆದರೂ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲಿಲ್ಲ. ಈ ಎಲ್ಲಾ ಸಮಸ್ಯೆ ಬಗೆ ಹರಿಸಲು ಪ್ರಧಾನಿ ಮೋದಿ ಮಧ್ಯ ಪ್ರವೇಶಿಸುವಂತೆ ಒತ್ತಡ ತರಬೇಕು ಎಂದು ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

ಶಿಕಾರಿಪುರ ವರದಿ: ರಾಜ್ಯದ ರೈತರ ಸಾಲ ಮನ್ನಾ ಮಾಡಿಸದ, ಮಹದಾಯಿ ರೈತರ ಹೋರಾಟಕ್ಕೆ ಸ್ಪಂದಿಸದ ಸಂಸದ ಯಡಿಯೂರಪ್ಪ ನಕಲಿ ರೈತ ನಾಯಕ. ಅವರು ನಿಜವಾದ ರೈತ ನಾಯಕ ಆಗಿದ್ದರೆ ನರೇಂದ್ರ ಮೋದಿಗೆ ಹೇಳಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಕಾಂಗ್ರೆಸ್‌ ಮುಖಂಡರು ಸವಾಲು ಹಾಕಿದರು.

ಯಡಿಯೂರಪ್ಪ ಅವರು ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲಿಲ್ಲ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಿಲ್ಲ.

ಇಂತಹ ರೈತ ವಿರೋಧಿ ನಾಯರು ಯಾವ ಪುರುಷಾರ್ಥಕ್ಕಾಗಿ ಬೆಂಗಳೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಆಯೋಜಿಸಿದ್ದಾರೆ ಎಂದು ಪ್ರಶ್ನಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಣಿ ಮಾಲತೇಶ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಉಳ್ಳಿ ದರ್ಶನ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಈಸೂರು ಜಯಣ್ಣ, ಮುಖಂಡರಾದ ಅಂಬಾರಗೊಪ್ಪ ರಾಜಪ್ಪ, ಗಾಮ ದಯಾನಂದ್‌, ಬಡಗಿ ಫಾಲಾಕ್ಷ, ಉಮೇಶ್‌ ಮಾರವಳ್ಳಿ, ಸುರೇಶ್‌ ಧಾರಾವಾಡ, ರೇಣುಕಾಸ್ವಾಮಿ, ರಾಜು ಉಡುಗಣಿ, ಮುಕ್ತಿಯಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಳ್ಳಾಟ: ಹಲವರಿಗೆ ಗಾಯ

ಶಿವಮೊಗ್ಗ ವಿನೋಬನಗರದಲ್ಲಿರುವ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಬಂದಾಗ ನಡೆದ ತಳ್ಳಾಟದಲ್ಲಿ  ಕೆಲವರಿಗೆ ಗಾಯಗಳಾದವು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ. ಪ್ರವೀಣ್ ಕುಮಾರ್, ಎಚ್.ಪಿ. ಗೀರೀಶ್, ಆರ್.ಕಿರಣ್, ಪ್ರದೀಪ್‌ ಅವರ ಕುತ್ತಿಗೆ , ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಅವರಿಗೆ ಮೆಗ್ಗಾನ್‌ ಆಸ್ಪತಯಲ್ಲಿ ಚಿಕಿತ್ಸೆ ನೀಡಲಾಯಿತು.

ಪ್ರತಿಕ್ರಿಯಿಸಿ (+)