ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ: ಮಂಜುನಾಥ್‌ಗೌಡ ಕಿಡಿ

7

ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ: ಮಂಜುನಾಥ್‌ಗೌಡ ಕಿಡಿ

Published:
Updated:

ಕೋಲಾರ: ‘ತಾಲ್ಲೂಕಿನಲ್ಲಿ ಅರಣ್ಯ ಮತ್ತು ಗೋಮಾಳದ ಭೂಮಿ ಒತ್ತುವರಿಯಾಗಿರುವ ಬಗ್ಗೆ ದಾಖಲೆ ಸಮೇತ ದೂರು ನೀಡಿದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿ ಜನರಿಗೆ ನ್ಯಾಯ ದೊರಕಿಸಿ ಕೊಡುತ್ತೇನೆ’ ಎಂದು ಮಾಲೂರು ಶಾಸಕ ಕೆ.ಎಸ್.ಮಂಜುನಾಥ್‌ಗೌಡ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರದ ಲಾಬಿಯಲ್ಲಿ ಸರ್ಕಾರ ನಡೆಯುತ್ತಿದೆ. ಯಾರೇ ಮರ ಕಡಿದರೂ ಪ್ರಕರಣ ದಾಖಲಾಗುತ್ತದೆ. ಆದರೆ, 37 ಎಕರೆ ಪ್ರದೇಶದಲ್ಲಿ ಕಾಡನ್ನು ಸರ್ವನಾಶ ಮಾಡಿ ಆ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.

43 ಎಕರೆ ಗೋಮಾಳದ ಜಮೀನು ಒತ್ತುವರಿಯಾಗಿರುವ ಬಗ್ಗೆ ನಕ್ಷೆ ಹಾಗೂ ದಾಖಲೆಪತ್ರ ಸಮೇತ ಹಿಂದಿನ ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಅವರಿಗೆ ದೂರು ನೀಡಿದ್ದೆ. ನಂತರ ಒಂದು ವಾರದಲ್ಲಿ ಅವರ ವರ್ಗಾವಣೆ ಆಯಿತು. ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದ ಇನ್‌ಸ್ಪೆಕ್ಟರ್, ಎಸ್‍ಐ ಸಹ ವರ್ಗಾವಣೆಯಾದರು. ಈ ಸರ್ಕಾರ ಏನೂ ಮಾಡುವುದಿಲ್ಲ. ಆದ ಕಾರಣ ನ್ಯಾಯಾಲಯದ ಮೆಟ್ಟಿಲೇರುತ್ತೇನೆ. ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಮನೆಗೆ ಕಳುಹಿಸುತ್ತೇನೆ ಎಂದು ಗುಡುಗಿದರು.

ಸರ್ಕಾರ ಶಾಮೀಲು: ಭ್ರಷ್ಟಾಚಾರ ತಡೆಗೆ ಸದಾ ಸಿದ್ಧ ಎಂದು ಸರ್ಕಾರ ಹೇಳುತ್ತದೆ. ಸರ್ಕಾರದ ಮಾತು ಕೇಳಿಲ್ಲ, ಭ್ರಷ್ಟಾಚಾರದ ಜತೆ ಕೈ ಜೋಡಿಸಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಭ್ರಷ್ಟಾಚಾರಕ್ಕಾ ಸರ್ಕಾರ ಸಿದ್ಧವಿರುವುದು ಎಂದು ಪ್ರಶ್ನಿಸಿದರು.

ಭೂಮಿ ಒತ್ತುವರಿ ಸಂಬಂಧ ತಾನು 3 ವರ್ಷದಿಂದ ಹೋರಾಟ ಮಾಡುತ್ತಿದ್ದೇನೆ. ತಹಶೀಲ್ದಾರ್ ಪ್ರಕರಣ ದಾಖಲಿಸಿದ್ದು, ನಂತರ ಪೊಲೀಸರು ಬಿ ವರದಿ ಸಲ್ಲಿಸಿದ್ದನ್ನು ಎಲ್ಲರೂ ನೋಡಿದ್ದಾರೆ. ಈ ಅಕ್ರಮದಲ್ಲಿ ಸರ್ಕಾರವೂ ಶಾಮೀಲಾಗಿದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ದಾಖಲಿಸಿದ್ದ ಪ್ರಕರಣದಲ್ಲಿ ಬಿ ವರದಿ ಸಲ್ಲಿಕೆಯಾಗುತ್ತದೆ ಎಂದರೆ ಬೇಲಿನೇ ಎದ್ದು ಹೊಲ ಮೇಯ್ದಂತೆ. ಇನ್ನು ಯಾರನ್ನು ಕೇಳಬೇಕು. ಶಾಸಕರಿಗಿಂತ ತಹಶೀಲ್ದಾರ್‌ ದೊಡ್ಡವರು. ಅವರಿಗೇ ಬೆಲೆ ಇಲ್ಲವೆಂದರೆ ತನ್ನ ಗತಿ ಏನು. ರಮೇಶ್‌ಕುಮಾರ್‌ ಜವಾಬ್ದಾರಿ ತೆಗೆದುಕೊಂಡಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ, ಅವರಿಗೆ 2 ತಿಂಗಳು ಮಾತ್ರ ಅಧಿಕಾರವಿದೆ ಎಂದರು.

ಬೆಸ್ಕಾಂ ಅಧಿಕಾರಿಗಳು ಕ್ರಷರ್‌ಗಳ ಮೇಲೆ ದಾಳಿ ನಡೆಸಿ ₹ 3 ಕೋಟಿ ದಂಡ ವಿಧಿಸಿದ್ದಾರೆ. ಆದರೆ, ದುಡ್ಡು ಕಟ್ಟಿಸಿಕೊಂಡಿಲ್ಲ. ರಾಜಾರೋಷವಾಗಿ ಕೆಲಸ ನಡೆಯುತ್ತಿದೆ. ಬಡವರಿಗೆ, ಶ್ರೀಮಂತರಿಗೆ ಒಂದೇ ಕಾನೂನು. ಆದರೆ, ಕ್ಷೇತ್ರದಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದೆ ಎಂದು ಕಿಡಿಕಾರಿದರು.

ಅಧಿಕಾರಿಗಳಿಗೆ ತರಾಟೆ: ಇದಕ್ಕೂ ಮುನ್ನ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲೂ ಭೂ ಒತ್ತುವರಿ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ಶಾಸಕರು, ‘ಅಧಿಕಾರಿಗಳಿಗೆ ಸರ್ಕಾರ ನೀಡಿರುವ ಅಧಿಕಾರವನ್ನು ನನಗೆ ಕೇವಲ 3 ದಿನ ಕೊಟ್ಟರೆ ಸಾಕು ಶಕ್ತಿ ತೋರಿಸುತ್ತೇನೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ನೀವು ಎಂದಾದರೂ ಕಾಡಿಗೆ ಹೋಗಿದ್ದೀರಾ, ಪ್ರಾಣಿಗಳನ್ನು ಕಂಡಿದ್ದೀರಾ. ನಾವು 224 ಮಂದಿ ಶಾಸಕರಿದ್ದು, ಮನುಷ್ಯರಿಗಾಗಿ ಕಿತ್ತಾಡುತ್ತೇವೆ. ಆದರೆ, ಮರ, ಗಿಡ ರಕ್ಷಿಸಲು ಇಲಾಖೆಗೆ ಮಾತ್ರ ಅಧಿಕಾರವಿದೆ. ಕೆಲಸ ಮಾಡಿ, ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ’ ಎಂದು ಗುಡುಗಿದರು.

ಮನೆ ಹಾಳಾಗಲಿ: ‘ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ, ಹಾರೋಹಳ್ಳಿ ಮಾರ್ಗದಲ್ಲಿನ 6 ಗ್ರಾಮಗಳ ಮತದಾರರು ರಸ್ತೆ ಸೌಲಭ್ಯಕ್ಕೆ ಆಗ್ರಹಿಸಿ ವಿಧಾನಸಭೆ ಚುನಾವಣೆ ಬಹಿಷ್ಕರಿಸವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಆದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಮಾಲೂರು ಶಾಸಕರ ಮಾತು ಕೇಳಬೇಡಿ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದ ದಾಖಲೆಪತ್ರಗಳು ನನ್ನ ಬಳಿ ಇವೆ. ತೋರಿಸಬೇಕಾ’ ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮೇಶ್‌ಕುಮಾರ್‌, ‘ಹಾಗೆಲ್ಲಾ ನಡೆಯಲು ಸಾಧ್ಯವಿಲ್ಲ. ನಾನು ಏನೂ ಮಾಡುತ್ತಿಲ್ಲಪ್ಪಾ. ನೀನು ಟೆಂಡರ್ ನಂತರ ಪೂಜೆಗೆ ಕರೆದರೆ ಬರುತ್ತೇನೆ. ನಾನು ಪಕ್ಷಾತೀತ, ಜಾತ್ಯಾತೀತ ರಾಜಕಾರಣಿ. ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವಷ್ಟು ಚಿಲ್ಲರೆ ರಾಜಕಾರಣಿಯಲ್ಲ. ಸಮಾಜದಲ್ಲಿ ಮಾನ, ಮರ್ಯಾದೆ ಮತ್ತು ಗೌರವದಿಂದ ಬಾಳುವಷ್ಟು ಬುದ್ಧಿಯನ್ನು ಗುರು ಹಿರಿಯರು ಕಲಿಸಿದ್ದಾರೆ’ ಎಂದರು.

ಅದಕ್ಕೆ ಶಾಸಕರು, ‘ಹಾಗಾದರೆ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವವರ ಮನೆ ಹಾಳಾಗಲಿ ಎಂದು ನೀವೇ ಹೇಳಿಬಿಡಿ’ ಎಂದು ಪಟ್ಟು ಹಿಡಿದರು. ಇದರಿಂದ ಸಭೆಯಲ್ಲಿ ನಗೆಯ ಅಲೆ ಎದ್ದಿತ್ತು.

* * 

ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಸರ್ಕಾರಕ್ಕೆ ಬುದ್ಧಿ ಕಲಿಸುತ್ತೇನೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಅಧಿಕಾರಿಗಳ ವರ್ಗಾವಣೆ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ.

ಕೆ.ಎಸ್‌.ಮಂಜುನಾಥ್‌ಗೌಡ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry