ಶುಕ್ರವಾರ, ಡಿಸೆಂಬರ್ 13, 2019
27 °C

ನಗರದಲ್ಲಿ ಚುರುಕುಗೊಂಡ ‘ಕಲ್ಲಂಗಡಿ’ ವ್ಯಾಪಾರ

ಕೆಂಪೇಗೌಡ ಎನ್. ವೆಂಕಟೇನಹಳ್ಳಿ Updated:

ಅಕ್ಷರ ಗಾತ್ರ : | |

ನಗರದಲ್ಲಿ ಚುರುಕುಗೊಂಡ ‘ಕಲ್ಲಂಗಡಿ’ ವ್ಯಾಪಾರ

ಚಿಕ್ಕಬಳ್ಳಾಪುರ: ತಲೆ ಸುಡುವ ಬಿಸಿಲು ಕಾಣಿಸಿಕೊಳ್ಳುವ ಮುನ್ನವೇ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಉದರ ತಂಪಾಗಿಸುವ ಕಲ್ಲಂಗಡಿ, ಎಳನೀರು ವ್ಯಾಪಾರ ದಿನೇ ದಿನೇ ಚುರುಕು ಪಡೆಯುತ್ತಿದೆ.

ಈಗಾಗಲೇ ನಗರದಾದ್ಯಂತ ಆರೇಳು ಕಡೆಗಳಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಳಿಗೆಗಳು ಮತ್ತು ಏಳೆಂಟು ಕಡೆಗಳಲ್ಲಿ ಎಳೆ ನೀರು ಅಂಗಡಿಗಳ ಜತೆಗೆ ಅಲ್ಲಲ್ಲಿ ಕಬ್ಬಿನ ಹಾಲಿನ ಮಾರಾಟ ಮಾಡುವವರು ಗೋಚರಿಸುತ್ತಿದ್ದಾರೆ. ರಸ್ತೆ ಬದಿಯ ಕಲ್ಲಂಗಡಿ ಹಣ್ಣು ಮಾರಾಟ ಮಳಿಗೆಗಳು ಜನರನ್ನು ಆಕರ್ಷಣೆಯ ಕೇಂದ್ರಗಳಾಗಿವೆ.

ನಗರದ ಪ್ರಮುಖ ರಸ್ತೆಗಳಾದ ಬಿ.ಬಿ.ರಸ್ತೆ, ಎಂ.ಜಿ ರಸ್ತೆಗಳಲ್ಲಿ ಟನ್‌ಗಟ್ಟಲೇ ಮಾರಾಟ ಮಾಡುತ್ತಿರುವ ದೃಶ್ಯ ಬೇಸಿಗೆಯನ್ನು ನೆನಪಿಸುತ್ತಿವೆ. ಕಳೆದ 20 ದಿನಗಳಿಂದ ನಗರದಲ್ಲಿ ಕಲ್ಲಂಗಡಿ ಹಣ್ಣು ಮಾರಾಟದ ವ್ಯಾಪಾರ ಚುರುಕುಗೊಂಡಿದೆ. ಸದ್ಯ ದಿನಕ್ಕೆ ಒಂದರಿಂದ ಎರಡು ಟನ್‌ ಅಧಿಕ ಕಲ್ಲಂಗಡಿ ಹಣ್ಣುಗಳು ಮಾರಾಟವಾಗುತ್ತಿದೆ.

ಇಲ್ಲಿನ ಕಲ್ಲಂಗಡಿ ವ್ಯಾಪಾರಿಗಳು ಮೂರು ದಿನಕ್ಕೊಮ್ಮೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪುಲಿವೆಂದಲು, ನಾಯಡ್‌ ಪೆಟ್ಟು, ಮಲ್ಕರ್‌ ಚೆರವು ಈ ಭಾಗಗಳಲ್ಲಿನ ತೋಟಗಳಲ್ಲಿ ಹಣ್ಣು ಖರೀದಿಸಿ ತರುತ್ತಾರೆ. ಅಲ್ಲಿ ಪ್ರತಿ ಕೆ.ಜಿಗೆ ₹ 12ರಂತೆ ಖರೀದಿಸಿ ಒಂದು ಬಾರಿಗೆ ಸುಮಾರು 10 ಟನ್‌ ಕಲ್ಲಂಗಡಿ ಹಣ್ಣನ್ನು ಲಾರಿಗೆ ತುಂಬಿ ನಗರಕ್ಕೆ ತರುತ್ತಿದ್ದಾರೆ.

ಒಂದು ಲಾರಿ ಹಣ್ಣುಗಳನ್ನು ನಾಲ್ಕಾರು ವ್ಯಾಪಾರಿಗಳು ಕೂಡಿ ಖರೀದಿಸಿ ಹಂಚಿಕೊಂಡು, ನಗರದ ವಿವಿಧೆಡೆ ಮಾರಾಟ ಮಾಡುತ್ತಾರೆ. ಈಗಾಗಲೇ ಎಂ.ಜಿ.ರಸ್ತೆಯಲ್ಲಿ ತಲಾ ನಾಲ್ಕು ಕಡೆ, ಬಿ.ಬಿ.ರಸ್ತೆಯಲ್ಲಿ ಎರಡು ಕಡೆ ಜಿಲ್ಲಾಡಳಿತ ಭವನದ ಸಮೀಪದಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳನ್ನು ಕಾಣಬಹುದಾಗಿದೆ.

‘ 3 ಕೆ.ಜಿ ಯಿಂದ 10 ಕೆ.ಜಿ ತೂಗುವ ಹಣ್ಣುಗಳು ದೊರೆಯುತ್ತವೆ. ಹಣ್ಣನ್ನು ಹೋಳುಗಳನ್ನಾಗಿ ಮಾಡಿ ಒಂದಕ್ಕೆ ₹ 10ರಂತೆ ಮಾರುತ್ತೇವೆ. ಕೆ.ಜಿಗಟ್ಟಲೆ ತೆಗೆದುಕೊಂಡರೆ ಒಂದು ಕೆ.ಜಿ ₹ 20ರಂತೆ ಮಾರಾಟ ಮಾಡುತ್ತೇವೆ’ ಎಂದು ಎಂ.ಜಿ.ರಸ್ತೆಯಲ್ಲಿ ಕಲ್ಲಂಗಡಿ ಹಣ್ಣಿನ ಮಳಿಗೆ ತೆರೆದಿರುವ ಚಿಕ್ಕಬಳ್ಳಾಪುರ ನಿವಾಸಿ ಜಿಲಾನ್‌ ಹೇಳಿದರು. ಸ್ಥಳೀಯ ರೈತರು ಕಲ್ಲಂಗಡಿ ಹಣ್ಣನ್ನು ಬೆಳೆದಿಲ್ಲ. ಆದ್ದರಿಂದ  ಆಂಧ್ರದಿಂದ ಹಣ್ಣನ್ನು ತರಿಸಿ ವ್ಯಾಪಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.

‘ಕಲ್ಲಂಗಡಿ ಮಾರಾಟದ ಸೀಜನ್‌ ಈಗಷ್ಟೇ ಆರಂಭವಾಗಿದೆ. ಈಗೇನಿದ್ದರೂ ಆಸೆಪಟ್ಟು ತಿನ್ನುವವರು ಮಾತ್ರ ಖರೀದಿಸುತ್ತಾರೆ. ಬಿಸಿಲು ಹೆಚ್ಚಾದರೆ ಹೊಟ್ಟೆ ತಂಪಾಗಿಸಲು ಹಣ್ಣು ತಿನ್ನಲು ಬರುವವರು ಹೆಚ್ಚುತ್ತಾರೆ. ಮಾರ್ಚ್‌ ವರೆಗೂ ನಾವು ಇಲ್ಲಿಯೇ ವ್ಯಾಪಾರ ನಡೆಸುತ್ತೇವೆ. ಸದ್ಯ ನಿತ್ಯ ನಮ್ಮ ಅಂಗಡಿಯಿಂದ 100 ರಿಂದ 200 ಕೆ.ಜಿ ಹಣ್ಣು ಮಾರಾಟವಾಗುತ್ತಿದೆ. ಸದ್ಯ ದಿನಕ್ಕೆ ₹ 1ರಿಂದ ಒಂದೂವರೆ ಸಾವಿರದವರೆಗೆ ಸಂಪಾದನೆಯಾಗುತ್ತಿದೆ’ ಎಂದು ಎಂ.ಜಿ.ರಸ್ತೆಯಲ್ಲಿ ಕಲ್ಲಂಗಡಿ ಹಣ್ಣು ಮಾರುತ್ತಿದ್ದ ಸೈಯದ್‌ ಇರ್‌ಶಾದ್‌ ಹೇಳುತ್ತಾರೆ.

‘ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಮತ್ತಿತರ ಹಣ್ಣಿನ ಅಂಗಡಿಗಳು ರಸ್ತೆ ಬದಿಗೆ ತಲೆ ಎತ್ತುವುದು ರೂಢಿ. ಕೈಗೆಟಕುವ ದರದಲ್ಲಿ ಸಿಗುವ ಎಳನೀರು ಕುಡಿಯುವುದು ಆರೋಗ್ಯ ದೃಷ್ಟಿಯಿಂದ ಬಹಳ ಉಪಯುಕ್ತ. ರಾಸಾಯನಿಕಯುಕ್ತ ಪಾನೀಯಗಳಿಗೆ ಮೊರೆ ಹೋಗುವ ಬದಲು ತಾಜಾ ಎಳೆನೀರಿನ ಸೇವನೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಜನರು ಇದೀಗ ಬೇಡಿಕೆ ಕೂಡ ಹೆಚ್ಚಿರುವುದರಿಂದ ಒಂದು ಎಳೆನೀರು ₹ 20 ರಿಂದ ₹ 25ಕ್ಕೆ ಮಾರಾಟ ಮಾಡುತ್ತಿದ್ದೇನೆ’ ಎಂದು ಜಿಲ್ಲಾ ಆಸ್ಪತ್ರೆ ಮುಂಭಾಗ ಎಳೆನೀರು ಮಾರಾಟ ಮಾಡುತ್ತಿದ್ದ ವ್ಯಾಪಾರಿ ಮಂಜುನಾಥ್‌ ತಿಳಿಸಿದರು.

* *

ಇದೀಗ ದಿನಾಲೂ ಕನಿಷ್ಠ ₹ 1,000 ವ್ಯಾಪಾರಕ್ಕೆ ಮೋಸವಿಲ್ಲ. ದಿನೇ ದಿನೇ ಬಿಸಿಲು ಹೆಚ್ಚಾದಂತೆ ಮುಂದಿನ ದಿನಗಳಲ್ಲಿ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಲಿದೆ

ಜಿಲಾನ್‌, ಕಲ್ಲಂಗಡಿ ವ್ಯಾಪಾರಿ

 

ಪ್ರತಿಕ್ರಿಯಿಸಿ (+)