ಶುಕ್ರವಾರ, ಮೇ 29, 2020
27 °C

ಸಾಕಿದರೆ ಚೆನ್ನ ‘ನಾರಿ ಸುವರ್ಣ’

ಪ.ನಾ.ಹಳ್ಳಿ.ಹರೀಶ್ ಕುಮಾರ್ Updated:

ಅಕ್ಷರ ಗಾತ್ರ : | |

ಸಾಕಿದರೆ ಚೆನ್ನ ‘ನಾರಿ ಸುವರ್ಣ’

ಕುರಿ ಸಾಕಾಣೆ, ಮೊಲ ಸಾಕಾಣೆ, ಹಂದಿ ಸಾಕಾಣೆ ಮತ್ತು ಕೋಳಿ ಸಾಕಾಣೆ ಮಾಡುವುದು ಮಾಂಸ ಉತ್ಪಾದಿಸಿ ಲಾಭ ಗಳಿಸುವ ಉದ್ದೇಶದಿಂದ. ಆದರೆ ಅದಕ್ಕೆ ಅಪವಾದ ಸರ್ತಾಜ್ ಅಹಮದ್. ಇವರು ಕುರಿಗಳನ್ನು ಸಾಕಾಣೆ ಮಾಡುತ್ತಿರುವುದು ಮಾಂಸಕ್ಕಾಗಿ ಅಲ್ಲ, ಬದಲಿಗೆ ಅವುಗಳ ಸಂತಾನೋತ್ಪತ್ತಿಗಾಗಿ..!

ಆಶ್ಚರ್ಯವಾಗುವುದಲ್ಲವೇ? ಹೌದು. ಶಿರಾ-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಿದರೆ ಶಿರಾದಿಂದ ಸುಮಾರು 20 ಕಿ.ಮೀಗಳಷ್ಟು ದೂರದಲ್ಲಿರುವ ವಡ್ಡನಹಳ್ಳಿ ಬಳಿಯಿರುವ ತಮ್ಮ ತೋಟದಲ್ಲಿ ನಾರಿಸುವರ್ಣ ತಳಿಯ ಸುಮಾರು 100 ಕುರಿಗಳನ್ನು ಸಾಕುತ್ತಿದ್ದಾರೆ ಸರ್ತಾಜ್.

ಆದರೆ ಅವುಗಳನ್ನು ಕೇವಲ ತಳಿ ಸಂರಕ್ಷಣೆ ದೃಷ್ಟಿ ಯಿಂದಲೇ ಸಾಕುತ್ತಿರುವುದು ವಿಶೇಷ. ಮೂರು ವರ್ಷದ ಹಿಂದೆ ಸಾರಿಗೆ ವ್ಯವಹಾರ ಮಾಡುತ್ತಿದ್ದರು ಸರ್ತಾಜ್. ಲಕ್ಷಲಕ್ಷ ಆದಾಯ ಬರುತ್ತಿದ್ದರೂ ಕೈಯಲ್ಲಿ ನಯಾಪೈಸೆ ಉಳಿಯುತ್ತಿರಲಿಲ್ಲ. ನಷ್ಟ ರೂಢಿಯಾಯಿತು. ಆ ಹಾದಿ ತನಗಲ್ಲ ಎಂದು ಬೇರೆ ಏನನ್ನಾದರೂ ಮಾಡಬೇಕೆಂದು ಯೋಚಿಸುತ್ತಿದ್ದಾಗ ಕೈ ಹಿಡಿದಿದ್ದೇ ಕುರಿ ಸಾಕಾಣೆಯ ಆಲೋಚನೆ.

ತುಮಕೂರಿನ ಪಶುಸಂಗೋಪನಾ ಇಲಾಖೆ ಮುಖ್ಯಸ್ಥ ಗೋ.ಮು.ನಾಗರಾಜ್ ಎಂಬುವವರು ಮಹಾರಾಷ್ಟ್ರ ದಲ್ಲಿ ಸಿಗುವ ‘ನಾರಿ ಸುವರ್ಣ’ ತಳಿಯ ಕುರಿಗಳನ್ನು ತಂದು ಪೋಷಣೆ ಮಾಡುವಂತೆ ನೀಡಿದ್ದ ಸಲಹೆ ಕೈಗೆಟುಕಿತು.

ಅಲ್ಲಿನ ನಿಂಬಕರ್ ಅಗ್ರಿಕಲ್ಚರ್ ರಿಸರ್ಚ್‌ ಸೆಂಟರ್‌ನಲ್ಲಿ ಕಂಡುಕೊಂಡ, ಮಹಾರಾಷ್ಟ್ರದ ಡೆಕ್ಕನಿ ಮತ್ತು ಪಶ್ಚಿಮ ಬಂಗಾಳದ ಗರೋಳೆ ತಳಿಯ ಮಿಶ್ರ –‘ನಾರಿಸುವರ್ಣ ತಳಿ’ಯ ಸುಮಾರು 20 ಕುರಿಗಳನ್ನು ತಂದು ತಮ್ಮ ತೋಟದಲ್ಲಿಯೇ ಶೆಡ್ ನಿರ್ಮಿಸಿ ಸಾಕಲು ಆರಂಭಿಸಿದರು.

ಪ್ರತ್ಯೇಕ ಶೆಡ್‌ಗಳು: ಸಾಕಷ್ಟು ಮುತುವರ್ಜಿಯಿಂದ ಕುರಿಗಳನ್ನು ಪೋಷಿಸುವ ಸರ್ತಾಜ್, ಗಂಡು ಕುರಿಗಳು, ಹೆಣ್ಣು ಕುರಿಗಳು, ಮರಿಗಳು ಹಾಗೂ ಗರ್ಭಧರಿಸಿದ ಕುರಿಗಳಿಗಾಗಿಯೇ ಪ್ರತ್ಯೇಕ ಶೆಡ್‍ಗಳನ್ನು ನಿರ್ಮಿಸಿದ್ದಾರೆ. ಅವುಗಳ ಸ್ವಚ್ಛತೆ ಹಾಗೂ ಮೇವು ವಿತರಣೆಗಾಗಿ ಒಬ್ಬ ಕೆಲಸಗಾರನನ್ನು ನೇಮಿಸಿಕೊಂಡಿದ್ದಾರೆ. ಇವುಗಳ ಪೋಷಣೆಯು ನಾಟಿ ಕುರಿಗಳ ಸಾಕಾಣೆಗಿಂತಲೂ ಸರಳ. ಪ್ರತೀ ದಿನ ಕುರಿವೊಂದಕ್ಕೆ ಎರಡು ಕಿಲೋಗ್ರಾಂನಷ್ಟು ಹಸಿ ಹುಲ್ಲಿನ ಅವಶ್ಯವಿದೆಯಷ್ಟೆ.

ಕುರಿಗಳಿಗಾಗಿಯೇ ಸೆಡೆ, ಸೆಪ್ಪೆ, ರಾಗಿಹುಲ್ಲನ್ನು ಬೆಳೆದಿದ್ದಾರೆ. ಶೇಂಗಾ ಹಾಗೂ ಇನ್ನಿತರೆ ಬಗೆಯ ಮೇವನ್ನು ಹೊರಗಿನಿಂದ ಕೊಂಡುಕೊಳ್ಳುತ್ತಾರೆ. ಇದರ ಜೊತೆಗೆ ಹಿಂಡಿ, ಬೂಸಾ ನೀಡುತ್ತಾರೆ. ಕೊಳವೆ ಬಾಯಿಯಲ್ಲಿ ಸಾಕಷ್ಟು ನೀರಿನ ಸೌಲಭ್ಯವಿರುವುದರಿಂದ ಪ್ರತ್ಯೇಕ ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಹಾಲು ಉತ್ತಮವಾಗಿರುತ್ತದೆಯಾದರೂ ಮರಿಗಳ ಸಂಖ್ಯೆ ಅಧಿಕವಾಗಿರುವುದರಿಂದ ಹಾಲನ್ನು ಹಿಂಡದೇ ಸಂಪೂರ್ಣವಾಗಿ ಮರಿಗಳಿಗೇ ಬಿಡುತ್ತಾರೆ. ಮೊದಲ ಒಂದೂವರೆ ತಿಂಗಳು ಮಾತ್ರ ಮರಿಗಳನ್ನು ಹಾಲು ಕುಡಿಯಲು ಬಿಟ್ಟು, ನಂತರ ತಾಯಿ ಹಾಗೂ ಮರಿ ಯನ್ನೂ ಪ್ರತ್ಯೇಕ ಶೆಡ್‍ಗಳಲ್ಲಿ ಬಿಡುತ್ತಾರೆ. ಈ ಕುರಿಗಳ ರೋಗನಿರೋಧಕ ಶಕ್ತಿಯು ಅಧಿಕವಾಗಿದ್ದು, ರೋಗಬಾಧೆಗೆ ಒಳಗಾಗುವುದು ಅಪರೂಪ.

₹25–35 ಸಾವಿರದವರೆಗೂ ಬೆಲೆ: ವರ್ಷಕ್ಕೆ ಎರಡು ಬಾರಿ ಮರಿ ಹಾಕುವ ನಾರಿ ಸುವರ್ಣ ತಳಿಯ ಕುರಿಗಳಲ್ಲಿ ಎರಡು ಬಗೆಯಿದೆ. ಒಂದು ‘ಹೋಮೋಜೈಗಸ್’– ಈ ಬಗೆಯ ಕುರಿಗಳು ಒಂದು ಬಾರಿಗೆ ಎರಡರಿಂದ ಮೂರು ಮರಿಗಳನ್ನು ಹಾಕುತ್ತವೆ. ಮತ್ತೊಂದು ‘ಹೆಟ್ರೋಜೈಗಸ್’ ಕುರಿಗಳು– ಒಂದು ಬಾರಿಗೆ ಒಂದು ಅಥವಾ ಎರಡು ಮರಿಗಳನ್ನು ಮಾತ್ರ ಹಾಕುತ್ತವೆ. ಹೋಮೋಜೈಗಸ್ ಕುರಿಮರಿಗೆ ಅವುಗಳ ವಯಸ್ಸು ಮತ್ತು ತೂಕಕ್ಕನುಗುಣವಾಗಿ ₹30–35 ಸಾವಿರದಷ್ಟು ಬೆಲೆಯಿದ್ದರೆ, ಹೆಟ್ರೋಜೈಗಸ್ ಕುರಿಮರಿಯೊಂದಕ್ಕೆ ₹25–30 ಸಾವಿರದಷ್ಟು ಬೆಲೆಯಿದೆ. ಮರಿಗಳೂ ಕೇವಲ 5 ತಿಂಗಳಾಗುವಷ್ಟರಲ್ಲಿ ಮರಿಗಳನ್ನು ಹಾಕಲು ಸಿದ್ಧವಾಗುತ್ತವೆ. ಆದ್ದರಿಂದ ಈ ಕುರಿ ಸಾಕಾಣೆಯು ಲಾಭದಾಯಕ ಉದ್ಯಮವಾಗಿ ಬದಲಾಗಿದೆ.

ಇಲಾಖೆಯೇ ಖರೀದಿಸುತ್ತದೆ: ಮರಿಯು ಹೆಣ್ಣಾದರೆ ಅದನ್ನು ಸಾಕುವ ಸರ್ತಾಜ್, ಸಾಕುವ ಆಸಕ್ತಿಯುಳ್ಳವರು ಇಚ್ಛಿಸಿದರೆ ಅವರಿಗೆ ನಿಗದಿತ ಬೆಲೆಗೆ ಮಾರಾಟಮಾಡುತ್ತಾರೆ. ಒಂದು ವೇಳೆ ಗಂಡಾದರೆ ಅದನ್ನು ಕೆಲಕಾಲ ಸಾಕಿ, ತದ ನಂತರ ಪಶು ಇಲಾಖೆಗೆ 25 ಸಾವಿರಕ್ಕೆ ಮಾರುತ್ತಾರೆ. ಪಶು ಇಲಾಖೆಯವರು ಸರ್ಕಾರದ ಭೂಸಮೃದ್ಧಿ ಯೋಜನೆ ಯಂತೆ ಕುರಿಗಾಹಿಗಳಿಗೆ ಸಾಕಲು ಕೊಡುತ್ತಾರೆ. ಕುರಿಗೆ ಜೀವವಿಮೆಯನ್ನೂ ಮಾಡಿಸುತ್ತಾರೆ. ಒಂದು ವೇಳೆ ಯಾವುದಾದರೂ ಅವಘಡದಲ್ಲಿ ಕುರಿಯು ಸತ್ತರೆ, ರೈತರಿಗೆ ಸರ್ಕಾರವು ವಿಮಾ ಪರಿಹಾರ ನೀಡುತ್ತದೆ.

ಅವರ ಬಳಿಯಿರುವ ಪ್ರತೀ ಹೆಣ್ಣು ಕುರಿಯೂ ವರ್ಷಕ್ಕೆ ₹75–80 ಸಾವಿರದಷ್ಟು ಆದಾಯ ತಂದುಕೊಡುತ್ತದೆ. ಸದ್ಯ ಇವರ ಬಳಿ ನೂರಕ್ಕೂ ಅಧಿಕ ಕುರಿಗಳಿದ್ದು, ಅವುಗಳಲ್ಲಿ 40 ಹೆಣ್ಣು ಕುರಿಗಳಿದ್ದರೆ ಅವುಗಳ ಅರ್ಧದಷ್ಟು ಗಂಡು ಕುರಿಗಳಿವೆ. 40ಕ್ಕೂ ಅಧಿಕ ಮರಿಗಳಿವೆ. ಪ್ರತೀ ವರ್ಷ ಅಂದಾಜು 80–100 ಮರಿಗಳನ್ನು ಮಾರಾಟಮಾಡುತ್ತಾರೆ. ಇಲ್ಲಿಯವರೆಗೂ ಆಂಧ್ರಪ್ರದೇಶ, ತಮಿಳುನಾಡಿಗೂ ಕುರಿಮರಿ ಗಳನ್ನು ಮಾರಾಟ ಮಾಡಿದ್ದಾರೆ.

ಕುರಿ ಸಾಕಾಣೆಯಲ್ಲಷ್ಟೇ ಸಮಯ ಕಳೆಯದ ಸರ್ತಾಜ್‍, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಡೆಯುವ ಪಶುಮೇಳ ಹಾಗೂ ಕೃಷಿ ವಸ್ತುಪ್ರದರ್ಶನಗಳಿಗೆ ಹೋಗಿ ತಮ್ಮ ಬಳಿಯಿರುವ ವಿಶೇಷ ತಳಿಯ ಕುರಿಯ ಸಾಕಾಣೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಕುರಿಗಳ ಸಾಕಾಣೆಯಿಂದ ಆರ್ಥಿಕವಾಗಿ ಸ್ವಾವಲಂಬಿಯಾಗುವ ಮಾರ್ಗದ ಕುರಿತೂ ಉತ್ತೇಜಿಸುತ್ತಿದ್ದಾರೆ.

ಸುಮಾರು 300ರಷ್ಟು ಅಡಿಕೆ ಗಿಡಗಳನ್ನು ಹಾಗೂ 100 ತೆಂಗಿನ ಗಿಡಗಳನ್ನು ಪೋಷಿಸುತ್ತಿದ್ದು, ಇವುಗಳಿಂದಲೇ ವಾರ್ಷಿಕ ಎರಡು ಲಕ್ಷರೂಪಾಯಿಗಳಷ್ಟು ಆದಾಯ ಗಳಿಸುತ್ತಿದ್ದಾರೆ. ರಾಗಿ, ಮೆಕ್ಕೆಜೋಳ ಹಾಗೂ ಸಾಮೆಯನ್ನೂ ಬೆಳೆಯುತ್ತಿದ್ದಾರೆ. 

ಗೊತ್ತೇ ನಾರಿ ಸುವರ್ಣ ತಳಿಯ ವೈಶಿಷ್ಟ್ಯ?
ನಾರಿ ಸುವರ್ಣ ಒಂದು ವಿಶೇಷ ತಳಿಯಾಗಿದ್ದು, ಪಶ್ಚಿಮ ಬಂಗಾಳದ ಅವಳಿ ಮರಿ ನೀಡುವ ಗೆರೋಲ್ ತಳಿ ಕುರಿಗಳನ್ನು ಡೆಕ್ಕನಿ ತಳಿಯ ಕುರಿಗಳೊಂದಿಗೆ ಸಂಕರಣ ಮಾಡಿ ಫಲ್ಟಾನಿನ ನಿಂಬಕರ್ ಅಗ್ರಿಕಲ್ಚರ್ ರೀಸರ್ಚ ಸೆಂಟರ್‌ನಲ್ಲಿ ಅಭಿವೃದ್ಧಿಪಡಿಸಿದ್ದು.

ಇವುಗಳು ಕಂದು ಅಥವಾ ಬಿಳಿ ಬಣ್ಣದಿಂದ ಕೂಡಿದ್ದು ಸರಾಸರಿ 25 ರಿಂದ 30 ಕಿಲೋ ಗ್ರಾಂ ತೂಕವಿರುತ್ತವೆ. ಹುಟ್ಟಿದ ಟಗರುಗಳಲ್ಲಿ ಹೊಮೋಜೈಗಸ್ ಜೀನ್ಸ್‌ಗಳಿದ್ದರೆ ಎರಡರಿಂದ ಮೂರು ಮರಿಗಳಾಗುವ ಸಂಭವ ಹೆಚ್ಚು. 2005ರಲ್ಲಿ ಈ ಮಿಶ್ರತಳಿಯ ಅಭಿವೃದ್ಧಿಯಲ್ಲಿ ಯಶಸ್ಸು ಸಿಕ್ಕಿದೆ. ಐದು ವರ್ಷಗಳಿಂದೀಚೆಗೆ ಕರ್ನಾಟಕದಲ್ಲಿ ಇದರ ಸಾಕಾಣೆ ಪ್ರಾರಂಭವಾಗಿದೆ.

ಸರ್ತಾಜ್ ಅಹಮದ್ ಅವರ ಸಂಪರ್ಕಕ್ಕೆ: 9880540277.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು