ಶುಕ್ರವಾರ, ಡಿಸೆಂಬರ್ 6, 2019
24 °C

ಕೌದಿಗಳ ದೊರೆಸಾನಿ!

Published:
Updated:
ಕೌದಿಗಳ ದೊರೆಸಾನಿ!

‘ಆಗೆಲ್ಲಾ ಪ್ರತಿ ಮನ್ಯಾಗೂ ಕೌದಿ ಇರೋದ್ರೀ, ಹೊಲದ ಕೆಲಸ್ದಂಗss ನಮ್ಮನೀಗೆ ಬಂದು ಪಕ್ಕದೋರು, ಪಕ್ಕದೋರ ಮನೀಗೆ ಹೋಗಿ ನಾವು ಕೌದಿ ಹೊಲೀತಿದ್ವಿ. ದೊಡ್ಡ ಸೂಜ್ಯಾಗ ದಾರ ಪೋಣಿಸಿ ಪದ ಹೇಳ್ತಾ ಎಲ್ಲರ ನೆಪ್ಪು ಮಾಡ್ಕೊಂತ ಕೌದಿ ಹೊಲೀತಿದ್ರ ವ್ಯಾಳ್ಯಾ ಹೋಗಿದ್ದss ಗೊತ್ತಾಗ್ತಿರ್ಲಿಲ್ಲ ನೋಡ್ರಿ...’ –ಬಣ್ಣದ ಬಟ್ಟೆಗಳ ಅಂದದ ಕೊಲಾಜ್‌ನೊಳಗೆ ಸೂಜಿ ಚುಚ್ಚುತ್ತಲೇ ನೆನಪಿನ ಬುತ್ತಿ ಬಿಚ್ಚಿದರು ಗಂಗೂಬಾಯಿ ದೇಸಾಯಿ. ಹಾಸನದ ಈ ಕಲಾವಿದೆಯನ್ನು ಗುರುತಿಸುವುದೇ ಬಣ್ಣ ಬಣ್ಣದ ಮನ ಮೋಹಕ ಕೌದಿಗಳಿಂದ. ಈಗಿನ ಆಬ್‌ಸ್ಟ್ರ್ಯಾಕ್ಟ್‌, ಸಮಕಾಲೀನ ಎಂದು ಕರೆಸಿಕೊಳ್ಳುವ ಕಲಾ ಪ್ರಕಾರಗಳೆಲ್ಲವನ್ನೂ ಅರಿವಿಲ್ಲದೇ ಆಗಿನ ಕಾಲಕ್ಕೇ ಕೌದಿಯಲ್ಲಿ ಮೂಡಿಸಿದ್ದವರು ಅವರು.

‘ನಮ್ಮೀ ಕೌದಿ ಹಾಸೋಕೂ ಬರ್ತೈತಿ, ಹೊದಿಯೋಕೂ ಬರ್ತೈತಿ. ಚಳಿಗಾಲದೊಳಗ ಬೆಚ್ಚಗಿಟ್ಟರೆ, ಬ್ಯಾಸಗಿಯೊಳಗ ತಂಪು ಮಾಡ್ತೈತಿ. ಬ್ಯಾರೆ ಯಾವ ಚಾದರ–ರಗ್ಗಿಗೆ ಇಂಥ ಶಕ್ತಿ ಐತಿ ಹೇಳ್ರಿ’ ಎಂಬ ಪ್ರಶ್ನೆಯನ್ನೂ ಗಂಗೂಬಾಯಿ ಮುಂದಿಟ್ಟರು.

ಪರಿಸರಸ್ನೇಹಿಯಾದ ಹಾಸಿಗೆಗಳಲ್ಲಿ ಕೌದಿಗೇ ಅಗ್ರಸ್ಥಾನ. ಪರಿಸರ ಸಂರಕ್ಷಣೆಯಲ್ಲಿ ಬಳಸಿದ ವಸ್ತುಗಳ ಮರುಬಳಕೆ (recycle, reuse) ಮೂಲಮಂತ್ರವಲ್ಲವೆ? ಮೊದಲ ಬಾರಿ ತೊಟ್ಟ ಲಂಗ ದಾವಣಿ, ತವರು ಮನೆಯಿಂದ ಮಡಿಲು ತುಂಬಿದ ಸೀರೆ, ಅಣ್ಣ ಕೊಡಿಸಿದ್ದ ಕೆಂಪುಬಣ್ಣದ ಚೂಡಿದಾರು, ಅಪ್ಪನ ಜುಬ್ಬಾ ಇವೆಲ್ಲವೂ ಕಾಲದ ಜೊತೆ ಸವೆದು ಹೋಗುವಂಥವೇ. ಆದರೆ ಅದನ್ನು ಬೆಚ್ಚನೆಯ ನೆನಪಾಗಿಸುವ ಕಲೆ ಕೌದಿಗಿದೆ. ಆದ್ದರಿಂದಲೇ ಹಿಂದೆ ಹಳ್ಳಿಗಳಿಗೆ ಪಾತ್ರೆ ಮಾರಲು ಬರುತ್ತಿದ್ದವರು ಹಳೆಯ ಹತ್ತಿ ಬಟ್ಟೆಗಳಿಗೂ ಪಾತ್ರೆ ಕೊಡುತ್ತಿದ್ದರು. ಹೀಗೆ ಮನೆ–ಮನೆಯ ಹಳೆಯ ಬಟ್ಟೆಗಳು ಕೌದಿ ಹೊಲಿಯುವ ಕುಶಲಕರ್ಮಿಗಳ ಕೈ ಸೇರುತ್ತಿದ್ದವು.

ಹಳೆ ಬಟ್ಟೆಗಳ ಕೂಡಿಸಿ ಹೊಲಿಯುತ್ತಿದ್ದ ‘ಕೌದಿ’ ಸಾಂಪ್ರದಾಯಿಕ ಕುಶಲ ಕಲೆ ಎನಿಸಿದ್ದರೂ ಕಾಲ ಜಾರಿದಂತೆ ಅದೂ ಮರೆವಿನ ಹಾದಿ ಹಿಡಿದಿತ್ತು. ಆದರೆ ಕೌದಿಯನ್ನು ಮತ್ತೆ ಮುನ್ನೆಲೆಗೆ ತಂದು ಆಧುನಿಕ ಅವಶ್ಯಕತೆ ಗಳಿಗೆ ಒಗ್ಗಿಸಿಕೊಂಡು ಸಮಕಾಲೀನ ಮಾಡಿದ್ದಾರೆ ಇವರು.

ಇವರ ಮನೆಯೂ ಕೌದಿಮಯ. ಒಳಗೆ ಕಾಲಿಡುತ್ತಿದ್ದಂತೆ ಕಾಣುವ ಕಾಲೊರೆಸಿನಿಂದ ಹಿಡಿದು ಟಿ.ವಿ. ಕವರ್, ಮಿಕ್ಸಿ ಕವರ್, ದಿಂಬು, ಹಾಸಿಗೆ ಕವರ್, ತೊಟ್ಟಿಲ ಹಾಸು, ಕಿಟಕಿ ಪರದೆ ಎಲ್ಲದರಲ್ಲೂ ಇವರ ಕೈಚಳಕ ಮತ್ತೆ ಮತ್ತೆ ನೋಡುವಂತೆ ಪ್ರೇರೇಪಿಸುತ್ತವೆ. ಹೌದು, ಅವರ ಮನೆಯಲ್ಲಿ ಕಂಡ ಹಸುಗೂಸಿನ ತಲೆ ಏರಿದ ಕುಂಚಿಗೆ ಸಹ ಕೌದಿಯ ಮೊಮ್ಮಗನಂತೆ ಗೋಚರಿಸುತ್ತಿತ್ತು! ಕಾಲದೊಂದಿಗೆ ನಾವೂ ಬೆಳೀಬೇಕು ಎನ್ನುತ್ತಲೇ ಕೌದಿಗಳಲ್ಲೂ ಹೊಸ ಮಾರ್ಗಗಳನ್ನು ಹುಡುಕುತ್ತ ಸಮಕಾಲೀನ ಗೊಳ್ಳುತ್ತಿರುವುದು ಅವರ ಗುರುತಿಸಿಕೊಳ್ಳುವಿಕೆಗೆ ಮುಖ್ಯ ಕಾರಣ.

ಗಂಗೂಬಾಯಿ ಅವರಿಗೆ ಕೌದಿಯ ನಂಟು ಹತ್ತಿದ್ದು ಹದಿಮೂರನೇ ವಯಸ್ಸಿನಲ್ಲಿ. ಕೆಲಸಕ್ಕೆಂದು ಎಲ್ಲಿಂದಲೋ ವಿಜಯಪುರಕ್ಕೆ ಬಂದಿದ್ದ ಅಜ್ಜಿಯೊಬ್ಬರು ಇವರಿಗೆ ಪ್ರೀತಿಯಿಂದ ಕೌದಿ ಕಲೆಯನ್ನು ಧಾರೆ ಎರೆದಿದ್ದರು. ಬಹು ಆಸಕ್ತಿ, ಆಸ್ಥೆಯಿಂದ ಕಲಿತುಕೊಂಡ ಅವರಿಗೆ ತಮ್ಮ ಬದುಕಿನ ಕಲೆ ಕಂಡಿದ್ದೂ ಅದರಲ್ಲೇ. ಪೊಲಿಯೊದಿಂದಾಗಿ ಕಾಲು ಎತ್ತಿಡಲೂ ಕಷ್ಟಪಡಬೇಕಾದ ಸ್ಥಿತಿ ಶಾಲೆ ಬಾಗಿಲನ್ನೂ ಕಾಣದಂತೆ ಮಾಡಿತ್ತು. ಇದ್ದುದರಲ್ಲೇ ಏನಾದರೂ ಕಲಿಯುವ ಅವರ ಆಸೆಗೆ ಕೌದಿ ಜೊತೆಯಾಗಿತ್ತು. ಅವರಿಗೆ ನಡೆಯಲು ಆಗದಿದ್ದರೂ ಅವರ ಕೈಚಳಕದಲ್ಲಿ ಅರಳಿದ ಕೌದಿಗಳು ಮಾತ್ರ ದೇಶ–ವಿದೇಶ ಯಾತ್ರೆ ಮಾಡಿವೆ.

ಇದುವರೆಗೂ ಸುಮಾರು 500 ಕೌದಿಗಳನ್ನು ಸಿದ್ಧಪಡಿಸಿದ್ದಾರೆ 71 ವರ್ಷದ ಗಂಗೂಬಾಯಿ. ಅವರಿಗೆ ಜೊತೆಯಾಗಿ ನಿಂತಿದ್ದು ಪತಿ ಸಂಗಪ್ಪನವರ ಬೆಂಬಲ. ಶಿವಮೊಗ್ಗ, ಬೆಂಗಳೂರು, ಮಂಗಳೂರು, ಧಾರವಾಡ ಹಲವು ಕಡೆಗಳಿಂದ ಇವರ ಬಳಿ ಕೌದಿ ಕಲಿಯಲು ಬಂದಿದ್ದಾರೆ. ಬಂದವರಿಗೆಲ್ಲಾ ಕೌದಿ ಕಲೆಯನ್ನು ಬಿತ್ತರಿಸುತ್ತಿದ್ದಾರೆ.

ಕಣ್ಣಳತೆಯೇ ಮುಖ್ಯ: ಇಷ್ಟು ದೊಡ್ಡ ಕೌದಿಗಳನ್ನು ಹೇಗೆ ಹೊಲಿಯುತ್ತೀರಿ ಎಂದರೆ, ‘ನನಗೆ ಅಳತೆ ಕೋಲು ಹಿಡಿಯಾಕ್ ಬರಲ್ರೀ’ ಎಂದು ನಕ್ಕರು ಈ ಅಜ್ಜಿ. ಯಾವ ಅಳತೆಗೆ ಎಷ್ಟು ಬಟ್ಟೆ ಬೇಕು ಎಂಬುದನ್ನು ಕಣ್ಣಳತೆಯಲ್ಲೇ ಕಂಡುಕೊಳ್ಳುತ್ತಾರೆ. ವಿನ್ಯಾಸವೂ ಆಗಿಂದಾಗ್ಗೇ ಹೊಳೆಯುತ್ತದೆ. ಬಣ್ಣಗಳ ಹೊಂದಾಣಿಕೆಗೂ ಇದೇ ನಿಯಮ ಅನ್ವಯ. ಪೂರ್ವ ಸಿದ್ಧತೆ ಎಂದೇನಿಲ್ಲ. ದೊಡ್ಡ ಕೌದಿ ಸಿದ್ಧಗೊಳ್ಳಲು ಮೂರು ತಿಂಗಳಾದರೂ ಬೇಕು. ಚಿಕ್ಕದು 15 ದಿನ, ಒಂದು ತಿಂಗಳಾದರೆ ಸಾಕು. ಒಂದು ಕೌದಿ ಸಿದ್ಧಗೊಳ್ಳಲು ಇಬ್ಬರ ಅವಶ್ಯಕತೆಯಿರುತ್ತದೆ. ಇವರ ಸೊಸೆ ಸಹ ಕೌದಿ ಹೊಲಿಯಲು ಜೊತೆಯಾಗುತ್ತಾರೆ. ಐದರ ಪಗಡಿ, ನಾಲ್ಕರ ಪಗಡಿ ಹೀಗೆ ಹಲವು ವಿನ್ಯಾಸಕ್ಕೆ ತಕ್ಕಂತೆ ಚೆಂದದ ಕೌದಿ ಸಿದ್ಧಗೊಳ್ಳುತ್ತದೆ.

ಮನೆಗೆ ಬರುತ್ತಿದ್ದ ಕಲಾವಿದರೆಲ್ಲಾ ಇವರ ಕೌದಿ ಕಂಡು ಬೆರಗಾದ ವರೇ. ಇನ್ನಷ್ಟು ದೊಡ್ಡದು ಹೊಲಿಯಿರಿ ಎಂದು ಪ್ರೇರೇಪಿಸಿದರು. ಆಗ ಸಿದ್ಧಗೊಂಡಿದ್ದೇ 6 ಅಡಿ ಕೌದಿ. ಈ ಕೌದಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌’ನಲ್ಲಿ ದಾಖಲಾಗಿದೆ. ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ ಹಾಗೂ ಪ್ರವಾಸಿ ಮಹಿಳಾ ಜಾನಪದ ಲೋಕೋತ್ಸವ ಪುರಸ್ಕಾರ ಕೂಡ ಲಭಿಸಿದೆ.

ಬೆಂಗಳೂರು, ಮಂಗಳೂರು, ಹಾಸನ ಹೀಗೆ ಹಲವು ಕಡೆ ಕೌದಿಗಳ ಪ್ರದರ್ಶನವನ್ನೂ ಮಾಡಿದ್ದಾರೆ. ಜನಪದ ಲೋಕದಂಥ ಕಡೆಗಳಲ್ಲಿ ಶಿಬಿರವನ್ನೂ ನಡೆಸಿದ್ದಾರೆ. ವಿದೇಶಿಗರಂತೂ ಇವರ ಕಲೆಯನ್ನು ಮೆಚ್ಚಿ ತಮ್ಮ ದೇಶಕ್ಕೂ ಕೌದಿಯನ್ನು ತೆಗೆದುಕೊಂಡು ಹೋಗಿದ್ದಾರೆ.

‘ಅವ್ವನ ಕೈಯಿಂದ ಮೂಡುತ್ತಿದ್ದ ಕೌದಿಗಳನ್ನು ನೋಡುತ್ತಲೇ, ಅದನ್ನು ಹೊದೆಯುತ್ತಲೇ ಬೆಳೆದವರು ನಾವು. ಅದರಲ್ಲಿನ ಬಣ್ಣ ಬಣ್ಣದ ಪಟ್ಟಿಗಳು, ಬಟ್ಟೆಯ ತುಣುಕುಗಳು ಬಣ್ಣದ ಲೋಕ ಪರಿಚಯಿಸಿದ್ದವು. ಅವುಗಳೇ ನನ್ನ ಕಲೆಗೂ ಪ್ರೇರಣೆ ನೀಡಿದವು. ನನ್ನ ಕಲಾ ಪ್ರಕಾರವೂ ಅವರಿಂದಲೇ ಬಂದ ಬಳುವಳಿ’ ಎಂದರು ಮಗ, ಕಲಾವಿದ ಬಿ.ಎಸ್. ದೇಸಾಯಿ.

ಬರೀ ಹೊದೆಯಲು ಈ ಕೌದಿಗಳ ಬಳಕೆ ಸೀಮಿತವಾಗಿಲ್ಲ. ಈಗೀಗ ವಾಲ್‌ಪೇಂಟಿಂಗ್ ರೀತಿಯೂ ಚಿತ್ತಾಕರ್ಷಕ ಕೌದಿಗಳನ್ನು ಸಿಂಗಾರಗೊಳಿಸುತ್ತಿದ್ದಾರೆ. ಹೀಗಾಗಿ ಅವುಗಳಿಗೆ ಎಲ್ಲಿಲ್ಲದ ಬೇಡಿಕೆ. ಆದರೆ, ಬೇಡಿಕೆ ಬಂದಷ್ಟೇ ದಿಢೀರ್‌ ಆಗಿ ಕೌದಿಗಳು ರೂಪುಗೊಳ್ಳುವುದಿಲ್ಲ. ಈಗೀಗ ಯಂತ್ರಗಳಲ್ಲೂ ಕೌದಿ ಹೊಲಿಯುವ ಪರಿಪಾಠ ಶುರುವಾಗಿದೆ. ಆದರೆ, ಹಾಸನದ ಈ ಅಜ್ಜಿ ಕರಕುಶಲ ಕಲೆಯನ್ನು ಯಂತ್ರದ ಪಾಲಾಗಲು ಬಿಟ್ಟಿಲ್ಲ.

‘ಜರ್ಮನಿ ಸಾಹೇಬ್ರು ನನ್ನ ಕೌದಿ ಮೆಚ್ಚಿಕೊಂಡಾರಿ’ ಎಂದು ಜರ್ಮನಿಯ ಮಾನವಶಾಸ್ತ್ರ ಸಂಶೋಧಕ ಹ್ಯಾನ್ ಜೇಕೋವ್ಸ್‌ಕಿ ಕೌದಿ ಕಲೆಗೆ ಮಾರು ಹೋಗಿದ್ದರ ಬಗ್ಗೆ ಸಂತಸದಿಂದ ಹೇಳಿದರು ಗಂಗೂಬಾಯಿ. ಹೌದು, ಮತ್ತೊಂದು ಪ್ರದರ್ಶನಕ್ಕಾಗಿ ಅವರ ಮನೆ ಸಜ್ಜಾಗುತ್ತಿತ್ತು. ಹೊರಗೆ ಟೆರೇಸ್‌ ಮೇಲಿನಿಂದ ತೂಗಿಬಿಟ್ಟ ಉದ್ದನೆಯ ಕೌದಿಯೊಂದು ಗಾಳಿಗೆ ಬಣ್ಣಗಳ ಅಲೆಯೆಬ್ಬಿಸುತ್ತಾ ತಾನೇರಿದ ಎತ್ತರವನ್ನು ಸಾರುತ್ತಿತ್ತು.

ಪ್ರತಿಕ್ರಿಯಿಸಿ (+)