ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಕೌಶಲ ಕಲಿಸುವ ಕಲಾವಿದೆ

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಲೆ ಸೋಮಾರಿತನವನ್ನು ನೀಗುತ್ತದೆ. ನಿತ್ಯ ಜೀವನದಲ್ಲಿ ಎದುರಾಗುವ ಮಾನಸಿಕ ಒತ್ತಡಕ್ಕೂ ಮದ್ದಾಗುತ್ತದೆ ಎಂದು ನಂಬಿದವರು ಪೂರ್ಣಿಮಾ ಕುಲಕರ್ಣಿ. ತನಗೊಲಿದ ಕಲಾಕೌಶಲ ಪ್ರವೃತ್ತಿಯನ್ನೇ ಅವರು ವೃತ್ತಿಯಾಗಿಸಿಕೊಂಡಿದ್ದಾರೆ. ಟೆರ್ರಾಕೋಟ, ರೇಷ್ಮೆ ಎಳೆ ಹಾಗೂ ತಂಜಾವೂರು ವರ್ಣಚಿತ್ರ ತರಬೇತಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದಾರೆ.

ಬೆಳಗಾವಿ ಮೂಲದ ಪೂರ್ಣಿಮಾ ಪ್ರಸ್ತುತ, ಮಹಾಲಕ್ಷ್ಮಿ ಲೇಔಟ್‌ ನಿವಾಸಿ. ಚಿಕ್ಕವಯಸ್ಸಿನಿಂದಲೂ ಅವರಿಗೆ ಕಲೆಯಲ್ಲಿ ಆಸಕ್ತಿ. ಅವರ ಕಲಾಸಕ್ತಿಯನ್ನು ಗುರುತಿಸಿದ ಪೋಷಕರು ಹುಬ್ಬಳಿಯ ಕಲಿಕಾ ಕೇಂದ್ರಕ್ಕೆ ಸೇರಿಸಿ ಪ್ರೋತ್ಸಾಹಿಸಿದರು. ಆದರೆ ನಂತರ ಅದನ್ನೇ ವೃತ್ತಿಯಾಗಿ ಆಯ್ದುಕೊಳ್ಳಲು ಕೆಲ ಕೌಟುಂಬಿಕ ಸಮಸ್ಯೆಗಳು ತೊಡಕಾದವು. ಬಿಕಾಂ ಪೂರೈಸಿದ ಅವರಿಗೆ ನಿರುದ್ಯೋಗ ಸಮಸ್ಯೆ ಕಾಡತೊಡಗಿತು. ಮಾನಸಿಕ, ದೈಹಿಕ ಒತ್ತಡ ಕಾಡಿದಾಗ ಅವರಿಗೆ ನೆರವಾಗಿದ್ದು ಅದುವರೆಗೂ ಪ್ರವೃತ್ತಿಯಾಗಿದ್ದ ಅವರ ಕಲಾಕೌಶಲ.

ಮದುವೆಯ ನಂತರ ನಗರಕ್ಕೆ ಬಂದ ಅವರಿಗೆ ನೆಚ್ಚಿನ ಪ್ರವೃತ್ತಿಯನ್ನೇ ವೃತ್ತಿಯಾಗಿ ಆಯ್ಕೆಮಾಡಿಕೊಳ್ಳುವ ಅವಕಾಶವೂ ದೊರೆಯಿತು. ಮನೆಯಿಂದ ಹೊರಗೆ ಹೋಗಿ ಬೇರೆ ಉದ್ಯೋಗಕ್ಕೆ ಸೇರಿದರೆ ಮಕ್ಕಳ ಪಾಲನೆಗೆ ಕಷ್ಟವಾಗುತ್ತದೆ. ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗುವುದಿಲ್ಲ ಎಂಬ ಭಯ ಕಾಡಿತು. ಮನೆಯಲ್ಲಿಯೇ ಆಭರಣ ತಯಾರಿಸುವ ಕೌಶಲ ಅವರಿಗೆ ವರವಾಗಿ ಒದಗಿಬಂತು. ಬಹುವಿನ್ಯಾಸದ ವರ್ಣಚಿತ್ರ, ಆಭರಣ ತಯಾರಿಕೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರು.

ತನಗೆ ಒಲಿದ ಕಲಾ ಕೌಶಲವನ್ನು ಇತರ ಮಹಿಳೆಯರಿಗೂ ಕಲಿಸುವ ಉದ್ದೇಶದಿಂದ ಪೂರ್ಣಿಮಾ ಅವರು ತಮ್ಮ ಮನೆಯಲ್ಲಿಯೇ, ಟೆರ್ರಾಕೂಟ, ರೇಷ್ಮೆ ಎಳೆ ಹಾಗೂ ವರ್ಣಚಿತ್ರಗಳ ತರಬೇತಿ ಕೇಂದ್ರ ಆರಂಭಿಸಿದರು. ಇದೀಗ ಗೃಹಿಣಿಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ. ಕಲೆಯುವ ಗೃಹಿಣಿಯರಿಗೆ ಸ್ವಾವಲಂಬನೆ ಸಾಧಿಸಲು ಕಲೆ ನೆರವಾದರೆ, ಉದ್ಯೋಗಸ್ಥ ಮಹಿಳೆಯರಲ್ಲಿ ಮಾನಸಿಕ ಒತ್ತಡ ದೂರ ಮಾಡುತ್ತದೆ ಎಂಬುದು ಅವರ ವಿಶ್ವಾಸ.

ಬೇಡಿಕೆಗೆ ಅನುಗುಣವಾಗಿ ವಿವಿಧ ಆಭರಣಗಳು ಹಾಗೂ ಕಲಾಕೃತಿಗಳನ್ನು ರಚಿಸುವ ಅವರು ಹಲವು ಶೈಲಿಯ ಆಭರಣ ವಿನ್ಯಾಸವನ್ನು ಕರಗತ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 11.30ರಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಆಸಕ್ತರಿಗೆ ತರಬೇತಿ ನೀಡುತ್ತಾರೆ. ಟೆರ್ರಾಕೂಟ ಆಭರಣ ತಯಾರಿಕೆಗೆ 20 ದಿನದ ತರಬೇತಿ, ರೇಷ್ಮೆ ಎಳೆ ಆಭರಣಕ್ಕೆ 10 ದಿನ ಹಾಗೂ ವರ್ಣಚಿತ್ರ ತಯಾರಿಕೆಗೆ 45 ದಿನಗಳ ತರಬೇತಿ ನೀಡುತ್ತಾರೆ. ಒಬ್ಬರಿಗೆ ₹2,500 ತರಬೇತಿ ಶುಲ್ಕ ನಿಗದಿಪಡಿಸಿದ್ದಾರೆ.

‘ಒಂದು ಟೆರ್ರಾಕೂಟ ಆಭರಣ ತಯಾರಿಕೆಗೆ ಕನಿಷ್ಠ 1 ವಾರ ಬೇಕಾಗುತ್ತದೆ. ಮೊದಲು ಮಣ್ಣನ್ನು ಹದಮಾಡಿ ವಿನ್ಯಾಸ ರಚಿಸಿ ಒಣಗಿಸಬೇಕು, ನಂತರ ಇದ್ದಿಲು ಬಳಸಿ ಬೇಯಿಸಿ, ತೊಳೆದು ಬಣ್ಣಹಚ್ಚಬೇಕು. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಆಭರಣಗಳು ವರ್ಣಚಿತ್ರಗಳಿಗೆ ಬೇಡಿಕೆ ಹೆಚ್ಚಿದೆ. ಮದುವೆ ಸಮಾರಂಭಗಳಲ್ಲಿ, ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ನಾನು ರಚಿಸಿದ ಕಲಾಕೃತಿಗಳನ್ನು ಇಷ್ಟಪಡುತ್ತಾರೆ. ಹಿಂದೆ ಆನ್‌ಲೈನ್ ಮಾರಾಟ ಮಾಡುತ್ತಿದ್ದೆ. ಸದ್ಯ ಆರೋಗ್ಯದ ಸಮಸ್ಯೆಯಿಂದಾಗಿ ಬೇಡಿಕೆಗೆ ತಕ್ಕಷ್ಟು ಆಭರಣಗಳನ್ನು ಸಿದ್ಧಪಡಿಸಲು ಆಗುತ್ತಿಲ್ಲ. ಹೀಗಾಗಿ ಆನ್‌ಲೈನ್‌ ಮಾರಾಟ ನಿಲ್ಲಿಸಿದ್ದೇನೆ. ಮನೆಯಲ್ಲಿಯೇ ನೇರವಾಗಿ ಮಾರಾಟ ಮಾಡುತ್ತಿದ್ದೇನೆ’ ಎನ್ನುತ್ತಾರೆ ಪೂರ್ಣಿಮಾ.

‘ನಾನು ತಯಾರಿಸುವ ಆಭರಣಗಳಿಗೆ ಅಕ್ರಿಲಿಕ್ ಬಣ್ಣಗಳನ್ನು ಹೆಚ್ಚಾಗಿ ಬಳಸುತ್ತೇನೆ. ತಯಾರಿಸಲು ತೆಗೆದುಕೊಂಡ ಸಮಯ ಹಾಗೂ ಕಚ್ಚಾ ವಸ್ತುಗಳ ಬೆಲೆಗೆ ಅನುಗುಣವಾಗಿ ಆಭರಣಗಳ ದರ ನಿಗದಿಪಡಿಸುತ್ತೇನೆ. ಕಿವಿಯೋಲೆಯೊಂದಿಗೆ ‍ಪದಕವೊಂದರ ಕನಿಷ್ಠ ಬೆಲೆ ₹600 ರಿಂದ ₹1,500 ರವರೆಗೆ ಇದೆ’ ಎನ್ನುತ್ತಾರೆ ಪೂರ್ಣಿಮಾ. ಸಂಪರ್ಕ:080 39510190

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT