ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಸಮಸ್ಯೆ ಬಗೆಹರಿಯದ ಹೊರತು ಶಾಂತಿ ನೆಲೆಸುವುದು ಅಸಾಧ್ಯ: ಪಾಕಿಸ್ತಾನ

Last Updated 5 ಫೆಬ್ರುವರಿ 2018, 20:00 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಯದೆ ಪ್ರಾದೇಶಿಕವಾಗಿ ಶಾಂತಿ ಮತ್ತು ಸಮೃದ್ಧಿ ನೆಲಸಬೇಕು ಎನ್ನುವ ಕನಸು ಈಡೇರುವುದು ಕಷ್ಟ ಎಂದು ಪಾಕಿಸ್ತಾನ ಸೋಮವಾರ ಹೇಳಿದೆ.

ಕಾಶ್ಮೀರ ಏಕತಾ ದಿನ ಆಚರಣೆ ವೇಳೆ ಈ ವಿಷಯ ಕುರಿತು ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೇನ್ ಹಾಗೂ ಪ್ರಧಾನಿ ಶಾಹಿದ್ ಖಕಾನ್ ಅಬ್ಬಾಸಿ ಅವರು ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದಾರೆ.

ಕಾಶ್ಮೀರವು ಪಾಕಿಸ್ತಾನದ ಭಾಗವಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ.

‘ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಸಾರವಾಗಿ ಕಣಿವೆಯ ಜನರು ತಮ್ಮ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ರಾಜಕೀಯ, ನೈತಿಕ ಹಾಗೂ ರಾಜತಾಂತ್ರಿಕ ಬೆಂಬಲ ನೀಡುವುದಾಗಿ ಪಾಕಿಸ್ತಾನ ಪುನರುಚ್ಚರಿಸುತ್ತದೆ’ ಎಂದು ಅಧ್ಯಕ್ಷ ಹುಸೇನ್ ಅವರು ತಿಳಿಸಿದ್ದಾರೆ.

‘ವಿಶ್ವಸಂಸ್ಥೆಯ ನಿರ್ಣಯಗಳು ಅಂಗೀಕಾರವಾಗಿ ಏಳು ದಶಕಗಳು ಕಳೆದರೂ ಕಾಶ್ಮೀರದ ಜನತೆ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ’ ಎಂದು ಪ್ರಧಾನಿ ಅಬ್ಬಾಸಿ ಹೇಳಿದ್ದಾರೆ.

ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ ಹಾಗೂ ಕಾಶ್ಮೀರದ ಮುಸ್ಲಿಂ ಒಕ್ಕೂಟದ ಮಾನವ ಹಕ್ಕುಗಳ ಕಾಯಂ ನಿಯೋಗದ ಸದಸ್ಯರು ಕಾಶ್ಮೀರಕ್ಕೆ ಭೇಟಿ ನೀಡಲು ಭಾರತದ ಪ್ರಧಾನಿ ಅವಕಾಶ ನೀಡಲಿಲ್ಲ. ಈ ಮೂಲಕ ಕಾಶ್ಮೀರದ ಪರಿಸ್ಥಿತಿಯನ್ನು ಅರಿಯಲು ಅಂತರರಾಷ್ಟ್ರೀಯ ಸಮುದಾಯಕ್ಕೆ ಅವಕಾಶ ನಿರಾಕರಿಸಲಾಯಿತು ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಸೋಮವಾರ ಅಧಿಕೃತ ರಜೆ ಘೋಷಿಸಿತ್ತು.

ಕಾಶ್ಮೀರ ಸಮಸ್ಯೆ ಕುರಿತು ಗಮನ ಸೆಳೆಯಲು ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ರ‍್ಯಾಲಿ ಆಯೋಜಿಸಿದ್ದವು.

**

‘ಸಿಪಿಇಸಿ ಮೇಲೆ ಭಾರತ ದಾಳಿ ಶಂಕೆ’

ಇಸ್ಲಾಮಾಬಾದ್: ಬಹುಕೋಟಿ ವೆಚ್ಚದ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಮಾರ್ಗದ ಮೇಲೆ ಭಾರತ ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಶಂಕೆ ವ್ಯಕ್ತಪಡಿಸಿದ್ದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಕರಕೋರಂ ಹೆದ್ದಾರಿ ಮೇಲೆ ಭಾರತ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗಿಲ್ಗಿಟ್–ಬಾಲ್ಟಿಸ್ತಾನ ಗೃಹ ಇಲಾಖೆಗೆ ಸಚಿವಾಲಯ ಪತ್ರ ಬರೆದಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲು ಸಂಪೂರ್ಣ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಪತ್ರದಲ್ಲಿ ಸೂಚಿಸಲಾಗಿದೆ. ಹೆಸರು ಬಹಿರಂಗಪಡಿಸದ ಇಲಾಖೆಯ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಚಿವಾಲಯದ ಸೂಚನೆ ಬಳಿಕ, 12 ಸೇತುವೆಗಳನ್ನು ಒಳಗೊಂಡಿರುವ ಸಿಪಿಇಸಿ ಮಾರ್ಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಗಿಲ್ಗಿಟ್–ಬಾಲ್ಟಿಸ್ತಾನದ ಗೃಹಕಾರ್ಯದರ್ಶಿ ಜಾವೆದ್ ಅಕ್ರಂ ಅವರು ಪೊಲೀಸರು ಹಾಗೂ ಗುಪ್ತಚರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಭದ್ರತೆಯ ಪರಿಶೀಲನೆ ನಡೆಸಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT