ಬುಧವಾರ, ಡಿಸೆಂಬರ್ 11, 2019
26 °C

ನಿರುದ್ಯೋಗಿಗಳ ಆಶಾಕಿರಣ

Published:
Updated:
ನಿರುದ್ಯೋಗಿಗಳ ಆಶಾಕಿರಣ

ವಿಜಯಪುರದ ಭಾರತಿ ಹಡಪದ ಕಡು ಬಡತನ ಕುಟುಂಬಕ್ಕೆ ಸೇರಿದವರು. ತಂದೆ ಹಾಗೂ ಗಂಡನ ಅಕಾಲಿಕ ಮರಣ ಅವರ ಪಾಲಿಗೆ ಬರಸಿಡಿಲಿನಂತೆ ಎರಗಿದ್ದವು. ಒಂಬತ್ತು ತಿಂಗಳ ಹಸುಗೂಸಿನೊಂದಿಗೆ ಬೇರೆಯವರ ಭೂಮಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಜತೆಗೆ, ಕಟ್ಟಡ ನಿರ್ಮಾಣಕಾರರ ಕೈಯಲ್ಲಿ ಕೆಲಸ, ತರಕಾರಿ ಮಾರಾಟ, ಬಟ್ಟೆ ವ್ಯಾಪಾರ…. ಹೀಗೇ ಒಂದೇ ಎರಡೇ ಗೇಣು ಹೊಟ್ಟೆ ತುಂಬಿಸಿಕೊಳ್ಳಲು ಹತ್ತಾರು ಕೆಲಸಗಳನ್ನು ಮಾಡುತ್ತಿದ್ದರು. ಇಂತಹ ಬದುಕಿನ ಹೋರಾಟದ ಸಂದರ್ಭದಲ್ಲೇ ವಿಜಯಪುರದ ರುಡ್‌ಸೆಟ್ ( ಗ್ರಾಮೀಣಾಭಿವೃದ್ಧಿ ಸ್ವ ಉದ್ಯೋಗ ತರಬೇತಿ ಸಂಸ್ಥೆ) ಸಂಸ್ಥೆಯ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿ ತರಬೇತಿ ಪಡೆದು ಇಂದು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಈ ಸಂಸ್ಥೆಯ ಪ್ರೇರಣೆಯೇ ಮುಖ್ಯ ಕಾರಣ ಎಂದು  ಭಾರತಿ ಹೇಳುತ್ತಾರೆ.

ಇದು ಕೇವಲ ಒಬ್ಬ ಮಹಿಳೆಯ ಯಶಸ್ವಿನ ಕಥೆಯಲ್ಲ. 1992 ಏಪ್ರಿಲ್‌ ತಿಂಗಳಲ್ಲಿ ವಿಜಯಪುರದ ವಿವೇಕ ನಗರದಲ್ಲಿ ಕೇವಲ ಎರಡು ಕೋಣೆಗಳ ಪುಟ್ಟ ಬಾಡಿಗೆ ಮನೆಯಲ್ಲಿ ಪ್ರಾರಂಭಗೊಂಡ ಸಂಸ್ಥೆ ಇಂದು   ರಾಘವೇಂದ್ರ ಕಾಲೋನಿಯಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂಸ್ಥೆಗೆ ಇತ್ತೀಚೆಗೆ ರಾಷ್ಟ ಪ್ರಶಸ್ತಿ ಲಭಿಸಿದೆ.  25 ವರ್ಷಗಳಿಂದ ಹಲವಾರು ನಿರುದ್ಯೋಗಿ ಯುವಕ ಯವತಿಯರಿಗೆ ಉದ್ಯೋಗ ಮಾರ್ಗದರ್ಶನ ನೀಡುತ್ತಿರುವ ಸಂಸ್ಥೆಯ ಕೆಲಸಕ್ಕೆ ಈ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮುಂದಾಳತ್ವದಲ್ಲಿನ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಮಾಜಮುಖಿ ಕೆಲಸಗಳು ರಾಜ್ಯದಲ್ಲಿ ಅನೇಕ ಬಾಳಿಗೆ ಆಶಾಕಿರಣಗಳಾಗಿವೆ. ಧರ್ಮಸ್ಥಳದ ಗ್ರಾಮಿಣಾಭಿವೃದ್ದಿ ಸ್ವ ಉದ್ಯೋಗ ತರಬೇತಿ ಸಂಸ್ಥೆ   ಹೆಸರಿನಲ್ಲಿ ಗ್ರಾಮೀಣ ಯುವಕರಿಗೆ ತರಬೇತಿ ನೀಡುವ ಯೋಜನೆಯಿಂದ ಅನೇಕ ನಿರುದ್ಯೋಗಿಗಳಿಗೆ ಸ್ವಾವಲಂಬನೆಯ ಜೀವನ ನಡೆಸುವುದು ಸಾಧ್ಯವಾಗಿದೆ. ಅವರೆಲ್ಲರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ.

ಸರ್ಕಾರದ ಯೋಜನೆಗಳ ಮೇಲಿನ ಅವಲಂಬನೆ ಕೂಡ ಕಡಿಮೆಯಾಗತೊಡಗಿದೆ. ರುಡ್‍ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದ ಹಲವಾರು ಜನ ನಿರುದ್ಯೋಗಿಗಳು ಸ್ವ ಉದ್ಯೋಗ ಕೈಗೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅನೇಕರು ಬದುಕಿನಲ್ಲಿ ನೆಲೆ ನಿಂತಿದ್ದಾರೆ.

ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಲ್ಲಿ ಹಲವಾರು ಜನರು ಸ್ವ- ಉದ್ಯೋಗಗಳನ್ನು ಪ್ರಾರಂಭಿಸಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ರುಡ್‍ಸೆಟ್ ಸಂಸ್ಥೆ ಕೇವಲ ತರಬೇತಿ ನೀಡಿ ಕೈತೊಳೆದುಕೊಳ್ಳುವುದಿಲ್ಲ. ಬದಲಿಗೆ ಆ ಶಿಬಿರಾರ್ಥಿಗೆ ಸ್ವ-ಉದ್ಯೋಗ ಪ್ರಾರಂಭಿಸಲು ಬ್ಯಾಂಕ್‍ಗಳ ಮೂಲಕ ಆರ್ಥಿಕ ಸಹಾಯವನ್ನು ಸಹ ಕಲ್ಪಿಸುತ್ತಿದೆ.

14 ವಿಧದ ತರಬೇತಿಗಳು

ಈ ಸಂಸ್ಥೆಯಲ್ಲಿ 14 ವಿಧದ ತರಬೇತಿ ನೀಡಲಾಗುತ್ತಿದೆ. ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಬೀದರ ಹಾಗೂ ಯಾದಗಿರ ಜಿಲ್ಲೆಗಳ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಸಮಯದಲ್ಲಿ ಉಚಿತ ವಸತಿ, ಊಟ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಸುಸಜ್ಜಿತವಾದ ವಸತಿ ನಿಲಯವನ್ನು ಪ್ರಾರಂಭಿಸಲಾಗಿದೆ. 18 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕರು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಗ್ರಾಮೀಣ ಜನರಿಗೆ ವಿವಿಧ ಅವಶ್ಯಕತೆಗಳಿಗೆ ಸುಲಭ ಕಂತುಗಳಲ್ಲಿ ಪಾವತಿಸಬಹುದಾದ ಹಣಕಾಸಿನ ನೆರವು ನೀಡಲಾಗುತ್ತಿದೆ.

ಛಾಯಾಗ್ರಹಣ ಮತ್ತು ವಿಡಿಯೊ, ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಕೋಳಿ ಸಾಕಾಣಿಕೆ, ಕುರಿ ಮತ್ತು ಆಡು ಸಾಕಾಣಿಕೆ, ಮಹಿಳೆ ಮತ್ತು ಪುರುಷರಿಗಾಗಿ ಸೌಂದರ್ಯ ವರ್ಧಕ ಕಲೆ (ಬ್ಯೂಟಿ ಪಾರ್ಲರ್), ಸಿದ್ಧ ಉಡುಪು ತಯಾರಿಕೆ (ಮಹಿಳೆ ಮತ್ತು ಪುರುಷರಿಗೆ), ವಿದ್ಯುತ್‌ ಉಪಕರಣಗಳ ದುರಸ್ತಿ, ಮೋಟರ್ ರಿವೈಂಡಿಂಗ್ ಮತ್ತು ಪಂಪಸೆಟ್ ದುರಸ್ತಿ, ದ್ವಿಚಕ್ರ ವಾಹನಗಳ ದುರಸ್ತಿ, ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲೆ ಪೌಡರ್ ತಯಾರಿಕೆ, ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿ, ರೆಫ್ರೀಜರೇಟರ್‌ ಮತ್ತು ಏರ್ ಕಂಡಿಷನಿಂಗ್‌ ತರಬೇತಿ ಸೌಲಭ್ಯ ಇಲ್ಲಿದೆ. ಅಂಗವಿಕಲರಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಸೇರಿದಂತೆ 14 ವಿಧದ ತರಬೇತಿಗಳನ್ನು ಒಂದು ಬಾರಿಗೆ  25 ರಿಂದ 30 ಜನರ ತಂಡಕ್ಕೆ ನೀಡಲಾಗುತ್ತಿದೆ.

ತರಬೇತಿ ಪೂರ್ಣಗೊಳಿಸಿದ ನಂತರ ಪ್ರಮಾಣಪತ್ರಗಳ ಜೊತೆಗೆ ವಿವಿಧ ಆರ್ಥಿಕ ಸಂಸ್ಥೆಗಳ ನೆರವಿನಿಂದ ಉದ್ಯೋಗ ಪ್ರಾರಂಭಿಸಲು ಸಾಲದ ಸೌಲಭ್ಯಗಳನ್ನು  ಸಂಸ್ಥೆ ಕಲ್ಪಿಸುತ್ತಿದೆ.

1992 ರಿಂದ ಇಲ್ಲಿಯವರೆಗೆ 28,994 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. 21,000 ಜನ ಉದ್ಯೋಗದಲ್ಲಿದ್ದಾರೆ. 2016 ರಲ್ಲಿ 1788 ಜನರಿಗೆ ತರಬೇತಿ ನೀಡಿದ್ದು. 1081 ಅಭ್ಯರ್ಥಿಗಳು ಸ್ವ-ಉದ್ಯೋಗ ಪ್ರಾರಂಭಿಸಿದ್ದಾರೆ. ಇನ್ನೂ ಕೆಲವರು ಸ್ವಂತ ಖರ್ಚಿನಿಂದ ಸ್ವ-ಉದ್ಯೋಗವನ್ನು ಪ್ರಾರಂಭಿಸುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಗುಣಮಟ್ಟದ ತರಬೇತಿ ನೀಡಿ ಅವರನ್ನು ಸ್ವ-ಉದ್ಯೋಗಕ್ಕೆ ಸಂಸ್ಥೆ ಅಣಿಗೊಳಿಸುತ್ತಿದೆ. ಜಿಲ್ಲೆಯ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಲವಾರು ಶಿಬಿರಗಳನ್ನು ಸಂಘಟಿಸಲಾಗಿದೆ.

‘ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉದ್ಯಮಶೀಲತಾ ಜಾಗೃತಿ ಶಿಬಿರಗಳನ್ನು ಏರ್ಪಡಿಸಿ  ಉದ್ಯೋಗದ ಮಾಹಿತಿ ಸಹ ಒದಗಿಸಲಾಗಿದೆ’ ಎಂದು   ರುಡ್‍ಸೆಟ್‌ನ ನಿರ್ದೇಶಕ ಆರ್.ಟಿ. ಉತ್ತರಕರ ಹೇಳುತ್ತಾರೆ.

ಈ ಸಂಸ್ಥೆಯ ಸೇವೆ ಗುರುತಿಸಿ 2012 ರಲ್ಲಿ ರಾಷ್ಟೀಯ ಉತ್ತಮ ರುಡ್‍ಸೆಟ್ ಸಂಸ್ಥೆ, 2013ರಲ್ಲಿ ರಾಷ್ಠ ಮಟ್ಟದಲ್ಲಿ ಮೂರನೇ ಉತ್ತಮ ರುಡ್‌ಸೆಟ್‌, 2014 ರಲ್ಲಿ ರಾಷ್ಠ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಹಾಗೂ ಧರ್ಮಸ್ಥಳ ಸಂಸ್ಥೆ ನೀಡುವ ಪ್ರಶಸ್ತಿಗೂ ಈ ಸಂಸ್ಥೆ ಭಾಜನವಾಗಿದೆ.

ದೇಶದ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಯುವಕರಿಗೆ ಹಾಗೂ ಯುವತಿಯರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡುವುದರ ಮೂಲಕ ಹಗಲಿರುಳು ಶ್ರಮಿಸುತ್ತಿರುವ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಗ್ರಾಮಿಣಾಭಿವೃದ್ದಿ  ಸಚಿವಾಲಯದಿಂದ ನೀಡುವ ರಾಷ್ಠ ಮಟ್ಟದ ಪ್ರಥಮ ಅತ್ಯತ್ತಮ ರುಡ್‍ಸೆಟ್ ಪ್ರಶಸ್ತಿಯೂ ಇದಕ್ಕೆ ಲಭಿಸಿರುವುದು ಸಂಸ್ಥೆಯ ಸಿಬ್ಬಂದಿ ಹೆಮ್ಮೆ ಹೆಚ್ಚಿಸಿದೆ.

 

ಪ್ರತಿಕ್ರಿಯಿಸಿ (+)