ಶುಕ್ರವಾರ, ಜೂಲೈ 10, 2020
22 °C

ಬೆಳ್ಳಿತೆರೆಯೇ ನನಗೆ ಖುಷಿ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ಬೆಳ್ಳಿತೆರೆಯೇ ನನಗೆ ಖುಷಿ

ಸಂದರ್ಶನ...

* ‘ಸ್ಪಾಟ್‌ಲೈಟ್‌–2’ ಅನುಭವ...

ನನ್ನನ್ನು ನಾನು ಒಬ್ಬ ಉತ್ತಮ ನಟ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಸಿಕ್ಕ ಅಪೂರ್ವ ಅವಕಾಶ ‘ಸ್ಪಾಟ್‌ಲೈಟ್ 2’. ಇದರಲ್ಲಿ ನನ್ನದು ರಾಕ್‌ಸ್ಟಾರ್ ಪಾತ್ರ. ನಟನೆಯಲ್ಲಿ ಇದುವರೆಗಿನ ನನ್ನ ಅಸ್ಮಿತೆಯನ್ನು ಬದಲಾಯಿಸಿಕೊಳ್ಳಲು ಇದು ನೆರವಾಯಿತು. ಗೆಲುವಿನ ಉತ್ತುಂಗ ತಲುಪಿ ಅದನ್ನು ನಿರ್ವಹಿಸಲು ಅಸಮರ್ಥನಾದಾಗ ಹೇಗೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ, ಮಾದಕ ವ್ಯಸನಿಯಾಗುತ್ತಾನೆ ಎಂಬ ಕಥಾಹಂದರವನ್ನು ಇದು ಹೊಂದಿದೆ.

* ಸಂಗೀತದ ಬಗ್ಗೆ ಮೊದಲೇ ಒಲವಿತ್ತೆ?

ಸ್ಪಾಟ್‌ಲೈಟ್‌ ಧಾರಾವಾಹಿ ಚಿತ್ರೀಕರಣ ಆರಂಭವಾಗುವವರೆಗೆ ನಾನೊಬ್ಬ ಕೇಳುಗನಾಗಿದ್ದೆ. ಈ ಧಾರಾವಾಹಿಗಾಗಿ ಗಿಟಾರ್ ಮತ್ತು ಕೀಬೋರ್ಡ್‌ಗಳನ್ನು ಕಲಿತುಕೊಂಡೆ. ಈಗ ಇತರ ಸಂಗೀತ ವಾದ್ಯಗಳನ್ನು ಕಲಿಯುವ ಆಸಕ್ತಿ ಮೊಳೆಯುತ್ತಿದೆ. ಮೊದಲಿಗಿಂತಲೂ ಭಿನ್ನವಾಗಿ ಸಂಗೀತವನ್ನು ಆನಂದಿಸುತ್ತೇನೆ.

* ಈ ಧಾರಾವಾಹಿಯಲ್ಲಿದ್ದ ಉತ್ತಮ ಅಂಶಗಳೇನು?

ಸಂಗೀತ ಕುರಿತು ಹೊಸ ಒಳನೋಟವನ್ನು ಪ್ರೇಕ್ಷಕರಲ್ಲಿ ಬಿತ್ತುತ್ತದೆ. ರಾಕ್ ಸಂಗೀತದ ಮೇಲೆ ಪ್ರೀತಿ, ಆಸಕ್ತಿ ಹುಟ್ಟಿಸುತ್ತದೆ. ನಿರೂಪಣಾ ಶೈಲಿ ಸಹ ವಿಶಿಷ್ಟವಾಗಿದೆ.

* ವೀಕ್ಷಕರ ಪ್ರತಿಕ್ರಿಯೆ ಹೇಗಿದೆ?

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳಷ್ಟು ಜನರು ‘ಆಶಿಕಿ–2’ ಚಿತ್ರದಷ್ಟೇ ಆಪ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ನಟನೆಯನ್ನು ಇಷ್ಟಪಟ್ಟಿದ್ದಾರೆ.

* ಸಹನಟಿ ಅದಿತಿ ಆರ್ಯಾ ಮತ್ತು ರೂಹಿ ಸಿಂಗ್ ಅವರ ಬಗ್ಗೆ...

ಅದಿತಿ ಆರ್ಯಾ ಅದ್ಬುತ ನಟಿ. ಚಿತ್ರೀಕರಣದ ಸಂದರ್ಭದಲ್ಲಿ ನನಗವರು ಪರಿಚಯವಾಗಿದ್ದು, ಈಗ ಉತ್ತಮ ಸ್ನೇಹಿತೆಯಾಗಿದ್ದಾರೆ. ಚಿತ್ರೀಕರಣದ ಪ್ರತಿಕ್ಷಣವನ್ನು ಸಂಭ್ರಮಿಸುತ್ತಿದ್ದೆವು. ರೂಹಿ ಸಿಂಗ್‌ ಅವರ ನಟನೆಯನ್ನು ತೆರೆಯ ಮೇಲೆ ನೋಡಿ ಸಂತೋಷವಾಯಿತು. ನಮ್ಮೆಲ್ಲರನ್ನೂ ಒಗ್ಗೂಡಿಸಿದ್ದಕ್ಕೆ ನಿರ್ಮಾಪಕ ವಿಕ್ರಮ್‌ ಭಟ್‌ ಅವರನ್ನು ಅಭಿನಂದಿಸುತ್ತೇನೆ.

* ನಿಮ್ಮ ಕನಸು...

‘ಸಾವಿರ ಮೈಲಿಯ ಪಯಣವೇ ಆದರೂ ಮೊದಲ ಹೆಜ್ಜೆಯಿಂದಲೇ ಆರಂಭ’ ಎಂಬುದನ್ನು ನಂಬಿದವನು ನಾನು. ಹಾಗಾಗಿ ಪುಟ್ಟಪುಟ್ಟ ಕನಸುಗಳು ಹಾಗೂ ಅಲ್ಪಾವಧಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಗಮನ ನೀಡುತ್ತೇನೆ. ಸದ್ಯಕ್ಕೆ ವೆಬ್ ಧಾರವಾಹಿಯಲ್ಲಿಯೇ ವಿಶಿಷ್ಟ ನಟನಾ ಛಾಪು ಮೂಡಿಸುವ ಆಸೆ ಇದೆ.

* ನೀವು ನಟಿಸಬಯಸುವ ಸಾರ್ವಕಾಲಿಕ ನೆಚ್ಚಿನ ಪಾತ್ರ..

ನನಗೆ ಚಿಕ್ಕಂದಿನಿಂದಲೂ ಸೂಪರ್‌ ಮ್ಯಾನ್ ನಂತಹ ಪಾತ್ರಗಳಲ್ಲಿ ಆಸಕ್ತಿ. ಇಂದಿಗೂ ಆ ಆಸಕ್ತಿ ಹಾಗೆಯೇ ಮುಂದುವರೆದಿದೆ. ಅವಕಾಶ ದೊರೆತರೆ ಸೂಪರ್ ಮ್ಯಾನ್‌ ಪಾತ್ರದಲ್ಲಿ ನಟಿಸುತ್ತೇನೆ.

* ಕನ್ನಡ ಚಿತ್ರಗಳನ್ನು ನೋಡ್ತೀರಾ?

ಕನ್ನಡ ನಟ ದಿಗಂತ್‌ ಮತ್ತು ಐಂದ್ರಿತಾ ರೇ ನನ್ನ ಆಪ್ತ ಸ್ನೇಹಿತರು. ಅವರು ಭೇಟಿಯಾದಾಗೆಲ್ಲಾ ಕನ್ನಡದ ಕೆಲ ಚಿತ್ರಗಳನ್ನು ತೋರಿಸುತ್ತಾರೆ. ಅವರೊಟ್ಟಿಗೆ ಒಂದೆರಡು ಕನ್ನಡ ಚಿತ್ರಗಳನ್ನು ವೀಕ್ಷಿಸಿದ್ದೇನೆ. ಆದರೆ, ಚಿತ್ರದ ಹೆಸರು ನೆನಪಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚು ಕನ್ನಡ ಚಿತ್ರಗಳನ್ನು ವೀಕ್ಷಿಸುತ್ತೇನೆ.

* ಕಿರುತೆರೆ, ಬೆಳ್ಳಿತೆರೆ ಹಾಗೂ ವೆಬ್‌ ಮೂರರ ನಡುವಿನ ವ್ಯತ್ಯಾಸಗಳೇನು?

ನಟನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಮೂರು ಮಾಧ್ಯಮಗಳ ಪ್ರೇಕ್ಷಕರು ಬೇರೆಬೇರೆ. ಕಿರುತೆರೆಯ ಮೂಲಕ ಪ್ರತಿ ಮನೆಮನವನ್ನು ಪ್ರವೇಶಿಸುವ ಅವಕಾಶ ಸಿಗುತ್ತದೆ. ಬೆಳ್ಳಿತೆರೆಯಲ್ಲಿ ನಟಿಸಿದರೆ ಸ್ಟಾರ್ ಪಟ್ಟ ಸಿಗಬಹುದು. ವೆಬ್‌ ಮಾಧ್ಯಮದ ಮೂಲಕ ಹೊಸ ತಲೆಮಾರಿನ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲುಪಬಹುದು. ನನಗೆ ಬೆಳ್ಳಿತೆರೆ ಹೆಚ್ಚು ಖುಷಿಕೊಡುತ್ತದೆ.

* ಮುಂದಿನ ಯೋಜನೆಗಳೇನು?

ಮತ್ತೊಂದು ವೆಬ್‌ ಧಾರವಾಹಿಯಲ್ಲಿ ನಟಿಸುತ್ತಿದ್ದೇನೆ. ಅದರ ಹೆಸರನ್ನು ಈಗಲೇ ಬಹಿರಂಗಗೊಳಿಸುವುದಿಲ್ಲ. ಉಳಿದಂತೆ ಚಲನಚಿತ್ರ ಹಾಗೂ ಟಿ.ವಿ. ಧಾರಾವಾಹಿಗಳಲ್ಲಿ ಕೆಲ ಆಫರ್‌ಗಳಿವೆ. ಚಿತ್ರಕತೆಯನ್ನು ಕೇಳಿದ ನಂತರವಷ್ಟೇ ಚಿತ್ರಗಳಲ್ಲಿ ನಟನೆಗೆ ಒಪ್ಪಿಕೊಳ್ಳುತ್ತೇನೆ.

* ಫಿಟ್‌ನೆಸ್‌ ಗುಟ್ಟು...

ನಿತ್ಯ ಜಿಮ್‌ನಲ್ಲಿ ಒಂದು ಗಂಟೆ ವ್ಯಾಯಾಮ ಮಾಡುತ್ತೇನೆ. ಒಂದು ದಿನಕ್ಕೆ 4ರಿಂದ 5 ಲೀಟರ್ ನೀರು ಕುಡಿಯುತ್ತೇನೆ. ಡಯೆಟ್‌ ಅಂತ ಹುಚ್ಚಾಪಟ್ಟೆ ಉಪವಾಸ ಮಾಡುವುದಿಲ್ಲ. ಇಷ್ಟವಾಗುವ ಎಲ್ಲ ಬಗೆಯ ತಿನಿಸುಗಳನ್ನು ತಿನ್ನುತ್ತೇನೆ. ಆದರೆ ಸಕ್ಕರೆ ಹಾಗೂ ಮೈದಾ ಹಾಕಿರುವ ಪದಾರ್ಥಗಳನ್ನು ಹೆಚ್ಚು ತಿನ್ನುವುದಿಲ್ಲ. ವಿದೇಶ ಪ್ರವಾಸ ನನ್ನ ನೆಚ್ಚಿನ ಹವ್ಯಾಸ. ಬಿಡುವಿನ ಸಮಯದಲ್ಲಿ ಸಂಗೀತ ಕೇಳುತ್ತೇನೆ. ಇವು ನನ್ನನ್ನು ಖಿನ್ನತೆಯಿಂದ ಕಾಪಾಡುತ್ತವೆ ಎಂದು ನಂಬಿದ್ದೇನೆ. ಒಳ್ಳೆಯ ಆಲೋಚನೆಯೇ ಮಾನಸಿಕ ಆರೋಗ್ಯದ ಗುಟ್ಟು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.