ತಲೆ ಚಿಪ್ಪು ತೆಗೆದು ಕಸದಬುಟ್ಟಿಗೆ ಎಸೆದರು!

7

ತಲೆ ಚಿಪ್ಪು ತೆಗೆದು ಕಸದಬುಟ್ಟಿಗೆ ಎಸೆದರು!

Published:
Updated:

ಬೆಂಗಳೂರು: ‘ತಲೆನೋವು ಅಂದಿದ್ದಕ್ಕೆ ಮಗನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದ ವೈದೇಹಿ ಆಸ್ಪತ್ರೆಯ ವೈದ್ಯರು, ಆತನ ತಲೆಯ ಸ್ವಲ್ಪ ಭಾಗದ ಚಿಪ್ಪು ಹೊರತೆಗೆದು ಕಸದ ಬುಟ್ಟಿಗೆ ಎಸೆದಿದ್ದಾರೆ’ ಎಂದು ಆರೋಪಿಸಿ ಚಿಕ್ಕಮಗಳೂರಿನ ರುಕ್ಮಿಣಿಯಮ್ಮ ಎಂಬುವರು ವೈಟ್‌ಫೀಲ್ಡ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಆಸ್ಪತ್ರೆ ವೈದ್ಯರಾದ ಡಾ. ಗುರುಪ್ರಸಾದ್‌ ಹಾಗೂ ಡಾ. ರಾಜೇಶ್‌ ವಿರುದ್ಧ ನಿರ್ಲಕ್ಷ್ಯ (ಐಪಿಸಿ 338) ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣದ ವಿವರ: ಮಂಜುನಾಥ್‌ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. 2017ರ ಫೆ. 2ರಂದು ಆರೋಗ್ಯ ತಪಾಸಣೆ ನಡೆಸಿದ್ದ ವೈದೇಹಿ ಆಸ್ಪತ್ರೆಯ ವೈದ್ಯರು, ‘ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ. ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು. ಇಲ್ಲದಿದ್ದರೆ, ಪ್ರಾಣಕ್ಕೆ ಅಪಾಯವಿದೆ’ ಎಂದಿದ್ದರು. ಶಸ್ತ್ರಚಿಕಿತ್ಸೆ ಸಮಯದಲ್ಲಿ ವೈದ್ಯರು, ಮಗನ ತಲೆಯ ಸ್ವಲ್ಪ ಭಾಗದ ಚಿಪ್ಪು ಹೊರಗೆ ತೆಗೆದಿದ್ದರು ಎಂದು ರುಕ್ಮಿಣಿಯಮ್ಮ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದರು.

ವಾರದ ಬಳಿಕ ಮಂಜುನಾಥ್‌ ಅವರನ್ನು ವೈದ್ಯರು ಮನೆಗೆ ಕಳುಹಿಸಿದ್ದರು. ಕೆಲ ತಿಂಗಳ ಬಳಿಕ ಪುನಃ ತಲೆನೋವು ಕಾಣಿಸಿಕೊಂಡಿತ್ತು. ಹೀಗಾಗಿ, ಚಿಕ್ಕಮಗಳೂರಿನ ಸ್ಥಳೀಯ ವೈದ್ಯರ ಬಳಿಯೇ ಪರೀಕ್ಷೆ ಮಾಡಿಸಲಾಗಿತ್ತು. ಆ ವೈದ್ಯರು, ‘ಮಂಜುನಾಥ್‌ ತಲೆಯ ಸ್ವಲ್ಪ ಭಾಗದಲ್ಲಿ ಚಿಪ್ಪು ಇಲ್ಲ. ಚರ್ಮವನ್ನಷ್ಟೇ ಹೊದಿಸಿ ಹೊಲಿಗೆ ಹಾಕಿದ್ದಾರೆ. ಇದರಿಂದ ಮಿದುಳಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ’ ಎಂದು ಹೇಳಿದ್ದರು.

ಗಾಬರಿಗೊಂಡ ರುಕ್ಮಿಣಿಯಮ್ಮ, ಮಗನನ್ನು ಕರೆದುಕೊಂಡು ಜ. 26 ರಂದು ವೈದೇಹಿ ಆಸ್ಪತ್ರೆಗೆ ಬಂದಿದ್ದರು. ಮಗನ ತಲೆಯ ಚಿಪ್ಪು ವಾಪಸ್‌ ಜೋಡಿಸುವಂತೆ ಮನವಿ ಮಾಡಿದ್ದರು. ಅದನ್ನು ನಿರಾಕರಿಸಿದ್ದ ವೈದ್ಯರು, ’ಅದನ್ನು ಎಲ್ಲೋ ಕಸದ ಬುಟ್ಟಿಯಲ್ಲಿ ಬಿಸಾಡಿದ್ದೇವೆ. ಈಗ ಅದು ಎಲ್ಲಿದೆಯೋ ಗೊತ್ತಿಲ್ಲ’ ಎಂದು ಬೆದರಿಸಿ ವಾಪಸ್‌ ಕಳುಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯೆ ಪಡೆಯಲು ವೈದೇಹಿ ಆಸ್ಪತ್ರೆಯ ವೈದ್ಯರು ಸಂಪರ್ಕಕ್ಕೆ ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry