ಮರಳಿ ಜೀವನ ಪಡೆದ ಜಯಂತ್

7

ಮರಳಿ ಜೀವನ ಪಡೆದ ಜಯಂತ್

Published:
Updated:

ಮಂಗಳೂರು: ಎಂಟು ವರ್ಷಗಳಿಂದ ಹಾಸಿಗೆಯ ಮೇಲೆಯೇ ಮಲಗಿದ್ದ ಯುವಕನಿಗೆ ಪೃಷ್ಟದ ಚಿಪ್ಪಿನ ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವ ಇಲ್ಲಿನ ಯೇನೆಪೋಯ ಆಸ್ಪತ್ರೆಯ ವೈದ್ಯರು, ಇದೀಗ ಯುವಕ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡಿದ್ದಾರೆ.

ಕಡಬದ ಜಯಂತ್ (28) ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿ. ಪ್ರಥಮ ಪಿಯುಸಿ ಇರುವಾಗಲೇ ಜಯಂತ್‌ ಕಾಲಿನಲ್ಲಿ ನೋವು ಆರಂಭವಾಯಿತು. ದ್ವಿತೀಯ ಪಿಯುಸಿ ಇದ್ದಾಗ, ನಡೆದಾ ಡಲೂ ಆಗದ ಸ್ಥಿತಿ ನಿರ್ಮಾಣವಾಯಿತು. ಎಂಟು ವರ್ಷ ಹಾಸಿಗೆಯಲ್ಲಿಯೇ ಮಲಗಿದ್ದರು. 5 ತಿಂಗಳ ಹಿಂದೆ ಇಲ್ಲಿನ ಯೇನೆಪೋಯ ಆಸ್ಪತ್ರೆಯಲ್ಲಿ ಎಲುಬು–ಕೀಲು ಶಸ್ತ್ರಚಿಕಿತ್ಸಕ ಡಾ. ದೀಪಕ್‌ ರೈ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು, ಇದೀಗ ಸಾಮಾನ್ಯರಂತೆ ನಡೆದಾಡಲು ಆರಂಭಿಸಿದ್ದಾರೆ.

‘ಇದೊಂದು ಅತಿವಿರಳ ಆಂಕಿಲೂಸಿಂಗ್‌ ಸ್ಪಾಂಡಿಲಿಟಿಸ್‌ ಕಾಯಿಲೆಯಾಗಿದ್ದು, ಶೇ 0.1ರಿಂದ 0.5 ಜನರಲ್ಲಿ ಮಾತ್ರ ಕಂಡು ಬರುತ್ತದೆ. ಮುಖ್ಯವಾಗಿ ವರ್ಣತಂತುವಿಗೆ ಸಂಬಂಧಿಸಿದ ಸಮಸ್ಯೆ ಇದಾಗಿದೆ. ಕಡಬ ಪರಿಸರದಲ್ಲಿ ಎಂಡೋಸಲ್ಫಾನ್‌ನ ಪರಿಣಾಮವಿದ್ದು, ಇದೂ ಜಯಂತ್ ಕಾಯಿಲೆಗೆ ಕಾರಣವಾಗಿರಬಹುದು’ ಎಂದು ಡಾ. ದೀಪಕ್‌ ರೈ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂಕಿಲೂಸಿಂಗ್ ಸ್ಪಾಂಡಿಲಿಟಿಸ್‌ ಸಾಮಾನ್ಯವಾಗಿ ಕೆಳಭಾಗದ ಬೆನ್ನುಹುರಿ, ಪೃಷ್ಠ, ಸೊಂಟ, ಒಂದು ಅಥವಾ ಎರಡೂ ಕಡೆಯ ತೊಡೆ ಸಂದಿಗಳಲ್ಲಿ ತೀವ್ರ ನೋವಿನಿಂದ ಆರಂಭವಾಗುತ್ತದೆ. ಸಮಯ ಕಳೆದಂತೆ ರೋಗಿಯ ಸ್ಥಿತಿ ಉಲ್ಬಣಿಸುತ್ತದೆ. ಆರೋಗ್ಯವಂತ ಬೆನ್ನು ಹುರಿ ಇದ್ದವರು, ತಮ್ಮ ಇಚ್ಛೆಯಂತೆ ಯಾವ ದಿಕ್ಕಿಗಾದರೂ ತಿರುಗಬಹುದು. ಆದರೆ, ಈ ಪ್ರಕರಣದಲ್ಲಿ ರೋಗಿಯು ಬೆನ್ನನ್ನು ತಿರುಗಿಸುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ ಎಂದು ವಿವರಿಸಿದರು.

ಜಯಂತ್ ಪ್ರಕರಣದಲ್ಲಿ ಸೊಂಟದ ಜಾಯಿಂಟ್‌ಗಳು ನಡೆದಾಡಲೂ ಸಾಧ್ಯವಾಗದಂತೆ ಸೆಟೆದು ಕೊಂಡಿದ್ದವು. ಪೃಷ್ಠದ ಎರಡೂ ಕಡೆ ಗಳಲ್ಲಿ ಅಸಾಧ್ಯ ನೋವಿತ್ತು. ತಮ್ಮ ದೈನಂದಿನ ಚಟುವಟಿಕೆಗೆ ಕುಟುಂಬದ ಸದಸ್ಯರನ್ನು ಅವಲಂಬಿಸಿದ್ದರು. ಅವರು ಮತ್ತೆ ನಡೆದಾಡಬೇಕಿದ್ದರೆ, ಪೃಷ್ಠದ ಮೂಳೆಗಳ ಬದಲಾವಣೆ ಅನಿವಾರ್ಯ ವಾಗಿತ್ತು ಎಂದು ತಿಳಿಸಿದರು.

ಮೂಳೆ ಸಂದಿಯ ಸಮಸ್ಯೆ ಉಲ್ಬಣಗೊಂಡಾಗ ಮೂಳೆ ಸಂದಿ ಯ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡುವುದೇ ಏಕೈಕ ಮಾರ್ಗ. ಬದಲಾ ಗುತ್ತಿರುವ ತಂತ್ರಜ್ಞಾನದಿಂದಾಗಿ ಈ ಶಸ್ತ್ರಚಿಕಿತ್ಸೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ಎನಿಸಿದೆ ಎಂದು ಹೇಳಿದರು. ಆಸ್ಪತ್ರೆಯ ವೈದ್ಯ ಕೀಯ ನಿರ್ದೇಶಕ ಡಾ. ಮುಹಮ್ಮದ್‌ ತಾಹೀರ್‌, ಜಯಂತ್ ಸಹೋದರ ಗಂಗಾಧರ್‌ ಇದ್ದರು.

ಏನಿದು ಶಸ್ತ್ರಚಿಕಿತ್ಸೆ

ತೀವ್ರ ನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಅದರಿಂದ ಬಿಡುಗಡೆ ಮಾಡಿ, ಚಲನೆಯನ್ನು ಸುಲಲಿತಗೊಳಿಸುವಂತೆ ಡುಯೆಲ್‌ ಮೊಬಿಲಿಟಿ ಹಿಪ್‌ ಸಿಸ್ಟಮ್‌ ಅನ್ನು ಅಭಿವೃದ್ಧಿ ಪಡಿಸಲಾಗಿದ್ದು, ಜಯಂತ್‌ ಪ್ರಕರಣದಲ್ಲಿ ಇದೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಡಾ. ದೀಪಕ್‌ ರೈ ತಿಳಿಸಿದರು.

ಕೃತಕ ಹಿಪ್‌ನಲ್ಲಿ ಎರಡು ಅರ್ಟಿಕ್ಯುಲೇಟಿಂಗ್‌ ಮೇಲ್ಮೈಇರುವುದರಿಂದ ಸಹಜ ಸೊಂಟದ ಚಲನೆಯಂತೆ ಯಾವ ದಿಕ್ಕಿಗಾದರೂ ಅದನ್ನು ಚಲಿಸುವ ಅವಕಾಶವಿದೆ. ಅತ್ಯಂತ ಸುಧಾರಿಸಿದ ಶಸ್ತ್ರಚಿಕಿತ್ಸೆ ಇದಾಗಿದ್ದು, ರೋಗಿಗಳ ಚಲನೆಯನ್ನು ಸುಲಲಿತಗೊಳಿಸುತ್ತದೆ. ಅಲ್ಲದೇ ವಿಶಿಷ್ಟ ವಿನ್ಯಾಸದಿಂದಾಗಿ ಇದು ಹೆಚ್ಚು ಸ್ಥಿರತೆಯನ್ನು ಕೊಡುತ್ತದೆ. ಹೆಚ್ಚು ಬಾಳಿಕೆ ಬರುತ್ತದೆ ಎಂದು ಹೇಳಿದರು.

ಹಿಪ್‌ ಸಿಸ್ಟಮ್‌ ಅನ್ನು ಪೇಟೆಂಟ್‌ಯುಕ್ತ ಎಕ್ಸ್‌ 3 ತಂತ್ರಜ್ಞಾನದ ಮೂಲಕ ರೂಪಿಸಲಾಗಿದ್ದು, 40–50 ವರ್ಷ ಬದುಕಬಲ್ಲ ಯುವ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ ಎಂದರು.

* * 

ಆಂಕಿಲೂಸಿಂಗ್ ಸ್ಪಾಂಡಿಲಿಟಿಸ್‌ ಅನ್ನು ದೈಹಿಕ ಪರೀಕ್ಷೆ, ಬೆನ್ನು, ಸೊಂಟದ ಮೂಳೆಯ ಎಕ್ಸ್‌ರೇ ಮತ್ತು ಪ್ರಯೋಗಾಲಯ ಪರೀಕ್ಷೆಗಳಿಂದ ಪತ್ತೆ ಮಾಡಬಹುದು.

ಡಾ. ದೀಪಕ್‌ ರೈ ಶಸ್ತ್ರಚಿಕಿತ್ಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry