ಮಂಗಳವಾರ, ಡಿಸೆಂಬರ್ 10, 2019
23 °C

ಶಿಕ್ಷಣದ ಜತೆ ಸಾಹಿತ್ಯದ ಅಭಿರುಚಿ ಬೆಳೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಣದ ಜತೆ ಸಾಹಿತ್ಯದ ಅಭಿರುಚಿ ಬೆಳೆಸಿ

ಕೋಲಾರ: ‘ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಸಾಹಿತ್ಯದ ಅಭಿರುಚಿ ಬೆಳೆಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿ, ಸಾಹಿತ್ಯ ಓದಿನಿಂದ ಜ್ಞಾನ ಸಂಪತ್ತು ವಿಸ್ತಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕವಿಗಳಿಗೆ ಕೊರತೆಯಿಲ್ಲ. ಆದರೆ, ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇರುವುದರಿಂದ ಪರಿಷತ್ ವತಿಯಿಂದ ಎರಡು ದಿನಗಳ ಕಾವ್ಯಕಮ್ಮಟ ಅಥವಾ ತರಬೇತಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಕಥೆ, ಕಾದಂಬರಿ, ಕವನ, ನಾಟಕ ಸೇರಿದಂತೆ ಯಾವುದೇ ಸಾಹಿತ್ಯ ಪ್ರಕಾರ ತಳಮಟ್ಟದಿಂದ ಬಂದಾಗ ಅದಕ್ಕೆ ಶಕ್ತಿ ಜಾಸ್ತಿ ಎಂದರು.

ಬರೆದದ್ದೆಲ್ಲಾ ಕವನ, ಸಾಹಿತ್ಯವೆಂಬ ಭಾವನೆ ಬೇಡ. ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನ ಪಡೆದು ತಪ್ಪುಗಳಿದ್ದಲ್ಲಿ ತಿದ್ದಿಕೊಂಡು ಬರವಣಿಗೆ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೇಖನಿಯು ಖಡ್ಗಕ್ಕಿಂತ ಹರಿತ ವಾದದ್ದು. ಸಾಹಿತ್ಯ ಸೃಷ್ಟಿಸುವ ಚಿತ್ತ ಸಂವೇದನಾಶೀಲವಾಗಿರಬೇಕು. ಸೃಜನ ಶೀಲ ಸಾಹಿತ್ಯ ರಚನೆಯು ಸಮಾಜದ ಬೆಳವಣಿಗೆಗೆ ಪೂರಕವಾಗಿರಲಿ. ಅಂಕುಡೊಂಕು ತಿದ್ದಿ ಉತ್ತಮಪಡಿಸುವ, ಕ್ರಾಂತಿ ಮೂಡಿಸುವ ಕೆಲಸ ಆಗಬೇಕು. ಚಿರಕಾಲ ಉಳಿಯುವ ಸಾಹಿತ್ಯ ರಚನೆ ಯಾಗಬೇಕಾಗಿದೆ ಎಂದು ಆಶಿಸಿದರು.

ಜಾರಿಯಾಗಿಲ್ಲ: ‘ನಾಡಗೀತೆಗೆ ದೊಡ್ಡ ಚರಿತ್ರೆ ಇದೆ. ನಾಡಗೀತೆ ಹಾಡುವ ದಾಟಿ ಅಧಿಕೃತಗೊಳಿಸಲು ಸಾಹಿತಿ ಶಿವರುದ್ರಪ್ಪ, ವಸಂತ ಕನಕಾಪುರ ಹಾಗೂ ಚನ್ನವೀರ ಕಣವಿ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ವರದಿ ಇನ್ನೂ ಜಾರಿಯಾಗಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ತರಬೇತಿ ಮತ್ತು ಸಂಶೋಧನೆ ವಿಭಾಗದ ಸಂಚಾಲಕ ರಾಜಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಹತ್ತನೇ ಚಾಮರಾಜ ಒಡೆಯರ್ ತಮ್ಮ ಆಸ್ಥಾನ ವಿದ್ವಾಂಸ ಬಸವಪ್ಪ ಶಾಸ್ತ್ರಿ ಅವರಿಂದ ಬರೆ ಸಿದ ನಾಡಗೀತೆ ಸಂಸ್ಕೃತದಲ್ಲಿತ್ತು. ವೀಣೆ ಶೇಷಣ್ಣ ಅದಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಬೇರೆ ಬೇರೆ ರಾಜ್ಯಗಳು ಹುಟ್ಟಿದ ದಿನದಿಂದಲೇ ನಾಡಗೀತೆ ಜಾರಿಗೆ ತಂದಿದ್ದವು. 1956ರಲ್ಲಿ ಕರ್ನಾಟಕ ಏಕೀಕರಣಗೊಂಡಿತು. ರಾಜ್ಯ ಸರ್ಕಾರ 2003ರಲ್ಲಿ ಅಧಿಕೃತವಾಗಿ ಕುವೆಂಪು ರಚನೆಯ 44 ಸಾಲುಗಳ ಜೈ ಭಾರತ ಜನನಿಯ ತನುಜಾತೆ ಎಂಬ ಹಾಡನ್ನು ನಾಡಗೀತೆಯಾಗಿ ಸ್ವೀಕರಿಸಿತು ಎಂದು ವಿವರಿಸಿದರು. ಕರ್ನಾಟಕದಲ್ಲಿ ಮಾತ್ರ ಕಾವ್ಯದ ಜತೆ ಗಮಕ ಪರಂಪರೆಯಿದೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವು ಕನ್ನಡದ ಆಸ್ಮಿತೆಗಳು ಎಂದು ಅಭಿಪ್ರಾಯಪಟ್ಟರು.

ಭಾಷೆಯ ಕಗ್ಗೊಲೆ: ‘ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಭಾಷೆಯ ಕಗ್ಗೊಲೆ ಆಗುತ್ತಿದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸ್ವೇಚ್ಛಾಚಾರದಿಂದ ಬಳಸಲಾಗುತ್ತಿದೆ. ಕನ್ನಡದ ವಿಚಾರದಲ್ಲಿ ಸ್ಪಷ್ಟವಾಗಿ ಬರೆದರಷ್ಟೇ ಅದಕ್ಕೊಂದು ಅರ್ಥ ಬರುವುದು. ಕನ್ನಡವು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಅದನ್ನು ಕೊಲ್ಲುವುದು ಸಾಧ್ಯವಿಲ್ಲ’ ಎಂದು ಎಸ್‌ಡಿಸಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಉಷಾ ಗಂಗಾಧರ್ ಹೇಳಿದರು.

ಸಾಹಿತಿ ಆರ್.ವಿಜಯರಾಘವನ್, ಕವಿ ಆರ್.ಚೌಡರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ರವಿಕುಮಾರ್, ಎಸ್‌ಡಿಸಿ ಕಾಲೇಜು ಪ್ರಾಂಶುಪಾಲೆ ಪುಷ್ಪಲತಾ ಪಾಲ್ಗೊಂಡಿದ್ದರು.

* * 

ಕನ್ನಡದಲ್ಲಿ ವರ್ಷಕ್ಕೆ ಸುಮಾರು 7000 ಕೃತಿಗಳು ಪ್ರಕಟವಾಗುತ್ತಿವೆ. ಗಟ್ಟಿ, ಜೊಳ್ಳು ಯಾವುದು ಎಂಬುದನ್ನು ಓರೆಗೆ ಹಚ್ಚುವ ಕೆಲಸ ನಡೆಯಲಿ

ರಾಜಕುಮಾರ್, ಸಂಚಾಲಕ ಕಸಾಪ ತರಬೇತಿ ಮತ್ತು ಸಂಶೋಧನೆ ವಿಭಾಗ

ಪ್ರತಿಕ್ರಿಯಿಸಿ (+)