ಬುಧವಾರ, ಡಿಸೆಂಬರ್ 11, 2019
23 °C

ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸಲು ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸಲು ನಿರ್ಣಯ

ಬೆಳಗಾವಿ: ಇಲ್ಲಿನ ಆರ್‌ಟಿಒ ಸಮೀಪದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಲಾರಿ ಡಿಕ್ಕಿಯಾಗಿ ದ್ವಿಚಕ್ರವಾಹನ ಸವಾರ ಮೃತಪಟ್ಟ ವಿಷಯ ನಗರಪಾಲಿಕೆ ಪರಿಷತ್ ಸಭೆಯಲ್ಲಿ ಪ್ರತಿಧ್ವನಿಸಿತು.

‘ಕೇಬಲ್ ಹಾಕುವುದಕ್ಕಾಗಿ ರಸ್ತೆ ಅಗೆದಿದ್ದವರು ಸರಿಯಾಗಿ ಅದನ್ನು ಮುಚ್ಚಿರಲಿಲ್ಲ. ರಸ್ತೆಯ ಅಂಚಿನಲ್ಲಿ ಮಣ್ಣಿನ ಗುಡ್ಡೆ ಇತ್ತು. ಇದನ್ನು ತಪ್ಪಿಸುವ ಭರದಲ್ಲಿ ದ್ವಿಚಕ್ರವಾಹನ ಸವಾರ ಅಪಘಾತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಕಾಮಗಾರಿ ಕೈಗೊಂಡ ಕಂಪನಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಮೆಕಾನಿಕ್ ಆಗಿದ್ದ ಯುವಕನ ಕುಟುಂಬ ಬೀದಿಗೆ ಬಿದ್ದಿದೆ. ಆ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು’ ಎಂದು ಮಂಗಳವಾರ ನಡೆದ ಪಾಲಿಕೆ ಪರಿಷತ್ ಸಭೆಯಲ್ಲಿ ನಿರ್ಣಯಿಸಲಾಯಿತು.

ಅಪಘಾತದಲ್ಲಿ ಇನಾಯತ್ ಬಶೀರ್‌ ಅಹಮದ್‌ ಷೇಕ್‌ ಎನ್ನುವ ಯುವಕ ಮೃತಪಟ್ಟಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಸಾರ್ವಜನಿಕರು ಲಾರಿಗೆ ಬೆಂಕಿ ಹಚ್ಚಿದ್ದರು. ಈ ವಿಷಯವನ್ನು ಸದಸ್ಯ ಮತಿನ್‌ ಷೇಕ್‌ ಅಲಿ ಪ್ರಸ್ತಾಪಿಸಿದರು.‌

ಮಿತಿ ಬೇಡವೇ?: ಶಾಸಕ ಫಿರೋಜ್‌ಸೇಠ್ ಮಾತನಾಡಿ, ‘ವರಮಾನ ಸಂಗ್ರಹದಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿದ್ದೀರಿ. ನಗರದ ಬಹುತೇಕ ಕಡೆಗಳಲ್ಲಿ ವಿವಿಧ ಕಾರಣಗಳಿಗಾಗಿ ಭೂಮಿ ಅಗೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ತೆರಿಗೆ ಪಡೆದಿದ್ದೀರಾ, ಇಲ್ಲವಾದರೆ ಯಾವ ಸ್ನೇಹದ ಮೇಲೆ ಉಚಿತವಾಗಿ ಅಳವಡಿಸಿಕೊಳ್ಳಲು ಬಿಟ್ಟಿದ್ದೀರಿ? ನಗರದ ಯಾವುದೇ ಜಾಗದಲ್ಲಿ ಯಾರು ಬೇಕಾದರೂ ಬೋರ್ಡ್ ಹಾಕಿಕೊಳ್ಳಬಹುದು ಎನ್ನುವಂತಾಗಿದೆ. ಇದಕ್ಕೊಂದು ಮಿತಿ ಬೇಡವೇ’ ಎಂದು ಪ್ರಶ್ನಿಸಿದರು.

ಈ ಸಂದರ್ಭ ಆಡಳಿತ ಗುಂಪಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸದಸ್ಯರಾದ ಕಿರಣ ಸಾಯನಾಕ, ಪಂಡರಿ ಪರಬ್ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು.

‘ಬಾಡಿಗೆ ಅಥವಾ ತೆರಿಗೆ ಪಾವತಿಸದ ಹೋರ್ಡಿಂಗ್‌ಗಳನ್ನು ಕೂಡಲೇ ತೆರವುಗೊಳಿಸಬೇಕು. ಪಾಲಿಕೆಯಲ್ಲಿ ನಿರ್ಣಯಗಳ ತಿಜೋರಿ ತುಂಬುತ್ತಿದೆಯೇ ಹೊರತು, ಸಂಪನ್ಮೂಲ ಪ್ರಮಾಣ ಹೆಚ್ಚಾಗುತ್ತಿಲ್ಲ’ ಎಂದು ಶಾಸಕರು ತಿರುಗೇಟು ನೀಡಿದರು.

ಎಚ್ಚರಿಕೆ ನೀಡಲಾಗಿದೆ: ಆಯುಕ್ತ ಶಶಿಧರ ಕುರೇರ ಮಾತನಾಡಿ, ‘ಭೂಗತ ಎಚ್‌ಟಿ ಕೇಬಲ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಹೆಸ್ಕಾಂನವರು ಕೈಗೊಳ್ಳುತ್ತಿದ್ದಾರೆ. ನಗರದಲ್ಲಿ 980 ಕಿ.ಮೀ.ನಷ್ಟು ಉದ್ದದ ಕೇಬಲ್ ಅಳವಡಿಕೆಗೆ ₹380 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್‌ಟಿ ಕೇಬಲ್ ಅಳವಡಿಕೆಗೆ ₹ 168 ಕೋಟಿ ವೆಚ್ಚದ ಯೋಜನೆಗೂ ಚಾಲನೆ ನೀಡಲಾಗಿದೆ. ಕೇಬಲ್ ಅಳವಡಿಕೆಗೆ ಬಳಸಲಾಗುವ ಜಾಗದ ಶುಲ್ಕವನ್ನು ಹೆಸ್ಕಾಂ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳು ಪಾವತಿಸಬೇಕಾಗುತ್ತದೆ. ಬೇಡಿಕೆ ನೋಟಿಸ್ ಕೊಟ್ಟು ತೆರಿಗೆ ಸಂಗ್ರಹಿಸಲಾಗುವುದು’ ಎಂದು ತಿಳಿಸಿದರು.

‘ಮೀಟರ್‌ಗೆ ₹ 180ರಂತೆ ಶುಲ್ಕ ನಿಗದಿಪಡಿಸಲಾಗಿದೆ. ಇದರಂತೆ ಹೆಸ್ಕಾಂನವರು ಪಾಲಿಕೆಗೆ ₹17.81 ಕೋಟಿ ಭರಿಸಬೇಕಾಗುತ್ತದೆ. ದರ ನಿಗದಿ ಸಂಬಂಧಿಸಿದ ಪ್ರಸ್ತಾವಕ್ಕೆ ಅನುಮೋದನೆ ನೀಡಿದರೆ ಮುಂದುವರಿಯಬಹುದು’ ಎಂದು ಹೇಳಿದರು.

‘ಯಾರಿಗೂ ಉಚಿತವಾಗಿ ನೀಡುವ ಪ್ರಶ್ನೆಯೇ ಇಲ್ಲ. ನಿಗದಿತ ಶುಲ್ಕ ವಿಧಿಸಲಾಗುತ್ತಿದೆ. ರಸ್ತೆ ಅಗೆದ ನಂತರ ಅದನ್ನು ಸಮರ್ಪಕವಾಗಿ ಪುನರ್ ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದರೆ ಅದಕ್ಕೆ ತಗಲುವಷ್ಟು ಹಣವನ್ನು ಆಯಾ ಕಂಪನಿಯೇ ಭರಿಸಬೇಕು. ಹೆಸ್ಕಾಂನಿಂದ ಈಗ ಕೆಲವೆಡೆ ಮಾಡಿರುವ ಪುನರ್ ನಿರ್ಮಾಣ ಕಾಮಗಾರಿ ಕಳಪೆ ಆಗಿರುವುದನ್ನು ಗಮನಿಸಿದ್ದೇವೆ. ಸಂಬಂಧಿಸಿದವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ನಾವು ಶಾಪ ಹಾಕಿಸಿಕೊಳ್ಳುತ್ತಿದ್ದೇವೆ: ಸದಸ್ಯ ಕಿರಣ ಸಾಯನಾಕ ಮಾತನಾಡಿ, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೆಯೇ ಅನುಮೋದನೆ ನೀಡಲಾಗಿದೆ. ಅದನ್ನು ಅನುಷ್ಠಾನ ಮಾಡಬೇಕು’ ಎಂದು ಸೂಚಿಸಿದರು. ‘ಆಗ ಕಡಿಮೆ ಶುಲ್ಕ ನಿಗದಿಪಡಿಸಲಾಗಿತ್ತು. ಈಗ ಪರಿಷ್ಕರಿಸಲಾಗಿದೆ. ಇದರಿಂದ, ವರಮಾನ ಹೆಚ್ಚಲಿದೆ’ ಎಂದು ಮುಖ್ಯ ಎಂಜಿನಿಯರ್ ಆರ್.ಎಸ್. ನಾಯಕ ಸ್ಪಷ್ಟಪಡಿಸಿದರು.

ವಿರೋಧಪಕ್ಷದ ನಾಯಕ ದೀಪಕ ಜಮಖಂಡಿ ಮಾತನಾಡಿ,‌ ‘ಹೆಸ್ಕಾಂನವರು ಕೇಬಲ್ ಹಾಕಲು, ಅಡುಗೆ ಅನಿಲ ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಗೆಯಲಾಗುತ್ತಿದೆ. ಆದರೆ, ಸರಿಯಾಗಿ ಮುಚ್ಚುತ್ತಿಲ್ಲ. ಇದರಿಂದಾಗಿ ಜನಪ್ರತಿನಿಧಿಗಳು ಜನರಿಂದ ಶಾಪ ಹಾಕಿಸಿಕೊಳ್ಳುವಂತಾಗಿದೆ. ಸಂಬಂಧಿಸಿದ ಕಂಪನಿಯಿಂದ ನಿಗದಿತ ಶುಲ್ಕವನ್ನು ಸಮರ್ಪಕವಾಗಿ ಪಡೆಯಬೇಕು. ಪುನರ್ ನಿರ್ಮಾಣ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಿಸಬೇಕು. ಸಾರ್ವಜನಿಕರ ಕೆಲಸವನ್ನು ಹೆಸ್ಕಾಂನವರು ಉಚಿತವಾಗಿ ಮಾಡಿಕೊಡಬೇಕು ಎಂದು ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತುಂಡು ನಿವೇಶನ ಮಾರಾಟಕ್ಕೆ ಅಸ್ತು

ಮಾಳಮಾರುತಿ ಬಡಾವಣೆಯಲ್ಲಿರುವ 143 ತುಂಡು ನಿವೇಶನಗಳನ್ನು ಮಾರುಕಟ್ಟೆ ದರದಲ್ಲಿ ಮಾರಲು ನಿರ್ಣಯಿಸಲಾಯಿತು. ‘ಪ್ರಸ್ತುತ ಪಾಲಿಕೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ನೌಕರರ ವೇತನ ಪಾವತಿಗೇ ಬಹಳಷ್ಟು ಹಣ ಖರ್ಚಾಗುತ್ತಿದೆ. ಇದರಿಂದ, ಆರ್ಥಿಕ ತೊಂದರೆ ಅನುಭವಿಸುತ್ತಿರುವ ಪಾಲಿಕೆಗೆ ಸಂಪನ್ಮೂಲ ಸಂಗ್ರಹಿಸಬೇಕಾಗಿದೆ. ಈ ನಿವೇಶನಗಳನ್ನು ಮಾರುವುದರಿಂದ, ₹ 25.65 ಕೋಟಿ ಸಂಗ್ರಹವಾಗುತ್ತದೆ. ಬಹಳಷ್ಟು ಅನುಕೂಲವಾಗುತ್ತದೆ’ ಎಂದು ಆಯುಕ್ತರು ತಿಳಿಸಿದರು. ಇದಕ್ಕೆ ಸಭೆ ಸಮ್ಮತಿಸಿತು.

ಪ್ರತಿಕ್ರಿಯಿಸಿ (+)