ಪ್ರೀತಿಯಿಂದ ‘ಆಡಿ’
ಪ್ರೀತಿ ಶುರುವಾದರೆ ಅದನ್ನು ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ. ಅದೇ ನಟಿ ರಾಣಿ ಮುಖರ್ಜಿ ವಿಷಯದಲ್ಲೂ ಆಗಿದ್ದು. ಅದೂ ಬೇರೆ ರೀತಿ. ನಿರ್ಮಾಪಕ ಆದಿತ್ಯಾ ಚೋಪ್ರಾ ರಾಣಿ ಮುಖರ್ಜಿಗೆಂದೇ ಪ್ರೇಮದ ಕಾಣಿಕೆಯಾಗಿ ನೀಡಿದ ಆಡಿ ಎ8 ಡಬ್ಲು 12 ಕಾರು ಎಲ್ಲರ ಕಣ್ಣು ಇವರತ್ತ ಹೊರಳುವಂತೆ ಮಾಡಿತ್ತು. ಒಂದು ಕೋಟಿ ರೂಪಾಯಿಯ ಈ ಕಾರನ್ನು ಕಂಡಾಕ್ಷಣ ರಾಣಿ ಮುಖರ್ಜಿ ಖುಷಿಗೆ ಪಾರವೇ ಇರಲಿಲ್ಲ.
*
ಮೊದಲ ಪ್ರೀತಿಯ ಫಲ
ಪ್ರೀತಿಯಲ್ಲಿ ಎಲ್ಲಾ ಮೊದಲುಗಳೂ ಸುಂದರವೇ. ಆ ಸುಂದರ ಕ್ಷಣ ಮತ್ತಷ್ಟು ಸುಂದರವಾಗಬೇಕೆಂದರೆ ಅಂಥದ್ದೇ ಒಂದು ಉಡುಗೊರೆಯೂ ಇರಬೇಕು. ಅದಕ್ಕೆಂದೇ ನಟ ಅಜಯ್ ದೇವಗನ್ ತನ್ನ ಪತ್ನಿ ಕಾಜೊಲ್ಗೆ ದುಬಾರಿ ಉಡುಗೊರೆಯನ್ನೇ ಕೊಟ್ಟರು. ತಮ್ಮ ಮೊದಲ ಮಗು ನ್ಯಾಸ್ ಹುಟ್ಟಿದ ಸ್ಮರಣಾರ್ಥ ಆಡಿ ಸೆಡಾನ್ ಅನ್ನು ಉಡುಗೊರೆಯಾಗಿ ಕೊಟ್ಟರು. ಜೊತೆಗೆ ಕಾಜೊಲ್ ಹುಟ್ಟಿದ ಹಬ್ಬಕ್ಕೂ ಆಡಿ ಕ್ಯೂ 7 ಕಾರನ್ನು ನೀಡಿದ್ದರು.
*
ನಿಶ್ಚಿತಾರ್ಥದ ಸರ್ಪ್ರೈಸ್
ತನ್ನ ಬಹುಕಾಲದ ಗೆಳತಿ ಆವಂತಿಕಾ ಮಲ್ಲಿಕ್ಗೆ ಏನಾದರೂ ಸರ್ಪೈಸ್ ನೀಡಬೇಕು ಎಂದು ಬಯಸಿದ್ದವರು ನಟ ಇಮ್ರಾನ್ ಖಾನ್. ನಿಶ್ಚಿತಾರ್ಥದ ದಿನವೇ ಆ ಅಚ್ಚರಿಯನ್ನು ನೀಡಬೇಕೆಂದು ನಿರ್ಧರಿಸಿ, ದುಬಾರಿ ಹಾಗೂ ಮಲ್ಲಿಕ್ಗೆ ಇಷ್ಟವಾಗುವ ಫೋಕ್ಸ್ವ್ಯಾಗನ್ ಬೀಟಲ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು.
*
ಸಿನಿಮಾ ಯಶಸ್ಸಿಗೊಂದು ಗಿಫ್ಟ್
ನಟಿ ಶ್ರೀದೇವಿ ಅವರಿಗೆ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ತುಂಬಾ ಇಷ್ಟವಂತೆ. ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾ ಸಾಕಷ್ಟು ಸುದ್ದಿ ಕೂಡ ಮಾಡಿತು. ಈ ಯಶಸ್ಸನ್ನು ತನ್ನ ಪತಿಯೊಂದಿಗೂ ಹಂಚಿಕೊಳ್ಳಬೇಕು ಎಂದೇ ಶ್ರೀದೇವಿ ಪತಿ ಬೋನಿ ಕಪೂರ್ಗೆ ಒಂದು ಉಡುಗೊರೆಯನ್ನು ನೀಡಿದ್ದರು. ಅದು ಪಾರ್ಶ್ ಕಾರನ್ನು.
*
ಐಶ್ ಹಾಗೂ ಆರಾಧ್ಯಾಗೆ...
ಪತ್ನಿ ಐಶ್ವರ್ಯಾ ಹಾಗೂ ಮಗಳು ಆರಾಧ್ಯಾಗೆ ನೆನಪಿನಲ್ಲುಳಿಯುವ ಏನಾದರೂ ಒಂದು ಉಡುಗೊರೆ ನೀಡಲೇಬೇಕು ಎಂದು ಅಭಿಷೇಕ್ ಬಚ್ಚನ್ಗೆ ಅನ್ನಿಸಿದ್ದೇ ತಡ, ತಮ್ಮ ಮಗಳ ಮೊದಲನೇ ಹುಟ್ಟುಹಬ್ಬಕ್ಕೇ ಅದನ್ನು ಪೂರೈಸಲು ಮುಂದಾದರು. ಬಿಎಂಡಬ್ಲು ಮಿನಿ ಕೂಪರ್ ಅನ್ನು ಖರೀದಿಸಿದರು. ಇಷ್ಟೇ ಅಲ್ಲ ಆರಾಧ್ಯಾ ಹುಟ್ಟಿದ ನಾಲ್ಕು ತಿಂಗಳೀಗೇ ಆಡಿ 8 ಅನ್ನು ಕೂಡ ಪತ್ನಿಗೆ ಉಡುಗೊರೆಯಾಗಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.