ಬುಧವಾರ, ಡಿಸೆಂಬರ್ 11, 2019
16 °C

ಮನೆಯಲಿರಲಿ ಮಕ್ಕಳ ಗೆಳೆಯ

Published:
Updated:
ಮನೆಯಲಿರಲಿ ಮಕ್ಕಳ ಗೆಳೆಯ

ರಸ್ತೆಯಲ್ಲಿ ಅಪ್ಪ–ಮಗಳು ನಡೆದು ಹೋಗುತ್ತಿದ್ದರು. ಮಗುವಿನ ಕೈಲಿ ಐಸ್‌ ಕ್ರೀಂ ಇತ್ತು. ಬಡಕಲು ನಾಯಿಮರಿ ಮಗುವಿನ ಹಿಂದೆಯೇ ಬರುತ್ತಿತ್ತು.

‘ಆ ನಾಯಿಗೂ ಐಸ್‌ಕ್ರೀಂ ಕೊಡಿಸು’ ಮಗಳು ಅಪ್ಪನ ಹತ್ತಿರ ಹಟ ಹೂಡಿದಳು. ‘ನಾಯಿಮರಿ ಐಸ್‌ಕ್ರೀಂ ತಿನ್ನಲ್ಲ’ ಪುಟ್ಟ ಎಂದು ಅಪ್ಪ ಎಷ್ಟು ಹೇಳಿದರೂ ಮಗು ಕೇಳಲೇ ಇಲ್ಲ. ಕೊನೆಗೆ ಅಪ್ಪ ಬ್ರೆಡ್‌ ಖರೀದಿಸಿ ಮಗುವಿಗೆ ಕೊಟ್ಟು, ‘ಇದನ್ನು ನಾಯಿಮರಿಗೆ ಕೊಡು’ ಎಂದರು. ನಾಯಿಮರಿಯನ್ನು ಮನೆಗೆ ಕರೆದುಕೊಂಡು ಹೋಗಲೇಬೇಕೆಂದು ಮಗು ಹಟ ಮಾಡಿತು.

ಮಕ್ಕಳಿಗೆ ಸಹಜವಾಗಿರುವ ಸಾಂತ್ವನ ಮತ್ತು ಕರುಣೆಯ ಭಾವಗಳನ್ನು ಪ್ರಾಣಿಗಳು ಉದ್ದೀಪಿಸಬಲ್ಲವು. ನಾಯಿಮರಿಯನ್ನು ನೋಡಿದಾಕ್ಷಣ ಪುಟ್ಟ ಹುಡುಗಿಯ ಹೃದಯದಲ್ಲಿ ಆದ ಆ ನೋವು, ತುಮುಲಗಳೇ ಈ ಮಾತಿಗೆ ಸಾಕ್ಷಿ.

ಮಕ್ಕಳು ಪ್ರಾಣಿಗಳೊಡನೆ ಸುಲಭವಾಗಿ ಬೆರೆಯುತ್ತಾರೆ. ನಾಯಿಗಳಿಗೆ ಬಾಲ ಮುಟ್ಟಿದರೆ ಸಾಮಾನ್ಯವಾಗಿ ಕೋಪಬರುತ್ತವೆ. ಆದರೆ, ಮಗು ಈ ಕೆಲಸ ಮಾಡಿದರೆ, ಬೇಸರಿಸಿಕೊಳ್ಳದೆ ಸುಮ್ಮನೆ ಇರುತ್ತದೆ. ಹುಷಾರಿಲ್ಲದಾಗ ಮಗುವಿನ ಕೋಣೆಯನ್ನು ಬಿಟ್ಟು ಹೊರಗೇ ಬರುವುದಿಲ್ಲ. ಮಗು ಮಂಚದ ಮೇಲೆಯೇ ಮಲಗಿದೆ ಎಂದರೆ, ಅದು ಕೆಳಗೆ ಬೀಳದಂತೆ, ಒಂದು ವೇಳೆ ಬಿದ್ದರೂ ತನ್ನ ಮೇಲೇ ಬೀಳುವಂತೆ ಕಾವಲು ಕಾಯುತ್ತದೆ.

‘ಅದು ನಾಯಿಯೋ, ಬೆಕ್ಕೋ, ಮೊಲವೋ ಯಾವ ಸಾಕು ಪ್ರಾಣಿಯದರೂ ಸರಿಯೇ, ಇವುಗಳಿದ್ದ ಮನೆಗಳಲ್ಲಿ ಮನೆಮಕ್ಕಳು ಒಂದಿಷ್ಟು ಜೀವನ ಪಾಠ ಕಲಿಯುವುದಂತೂ ದಿಟ. ನಾಯಿಯು ಮನೆಯಲ್ಲಿರುವ ಅಷ್ಟೂ ಮಂದಿಯನ್ನು ಪ್ರೀತಿಸುತ್ತದೆ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವುದು ಮತ್ತು ಎಲ್ಲರ ಕಾಳಜಿ ಮಾಡುವ ಗುಣವನ್ನು ಮಕ್ಕಳು ನಾಯಿಗಳಿಂದ ಸುಲಭವಾಗಿ ಕಲಿಯಬಲ್ಲರು’ ಎನ್ನುತ್ತಾರೆ ಪಶುವೈದ್ಯ ಎನ್.ಎಚ್‌. ಶ್ರೀಪಾದ್.

‘ನಾಯಿ ಸೇರಿದಂತೆ ಯಾವುದೇ ಸಾಕುಪ್ರಾಣಿ ಮಕ್ಕಳಿಗೆ ಆಪ್ತಮಿತ್ರನಾಗಬಲ್ಲದು. ಆದರೆ ಪ್ರಾಣಿಗಳನ್ನು ಮುಟ್ಟಿದ ಕೂಡಲೇ ಕೈ ತೊಳೆದುಕೊಳ್ಳಬೇಕು. ಅದರ ಬಾಯಿಗೆ ಕೈಹಾಕಬಾರದು, ಎಂಜಲು ತಾಕಿಸಿಕೊಳ್ಳದಂತೆ ಎಚ್ಚರವಹಿಸುವುದನ್ನೂ ಮಕ್ಕಳಿಗೆ ಹೇಳಿಕೊಡಬೇಕು’ ಎನ್ನುತ್ತಾರೆ ಅವರು.

ಪ್ರತಿಕ್ರಿಯಿಸಿ (+)