ಮಂಗಳವಾರ, ಡಿಸೆಂಬರ್ 10, 2019
20 °C

ಅಮ್ಮನ ಕನಸು ಈಗ ನನಸು

Published:
Updated:
ಅಮ್ಮನ ಕನಸು ಈಗ ನನಸು

ಮಗಳು ರೂಪದರ್ಶಿಯಾಗಬೇಕು ಎಂಬುದು ಅಮ್ಮನ ಕನಸು. ಅದನ್ನೇ ಕನವರಿಸುತ್ತಾ ಬೆಳೆದ ಹುಡುಗಿಗೆ ವರ್ಷಗಳು ಉರುಳುತ್ತಿದ್ದಂತೆ ರೂಪದರ್ಶಿಯಾಗಲೇಬೇಕು ಎಂಬ ಹಟ ಹುಟ್ಟಿಕೊಂಡಿತು. ಅದೃಷ್ಟವೆಂಬಂತೆ ಎರಡನೇ ಪಿಯುಸಿ ಓದುತ್ತಿರುವಾಗಲೇ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಒಲಿದು ಬಂತು.

ಇದು 2017ರಲ್ಲಿ ಮಿಸ್‌ ಇಂಡಿಯಾ ಸೂಪರ್‌ ಮಾಡೆಲ್‌ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್‌ ಫೋಟೊಜೆನಿಕ್‌’ ಪ್ರಶಸ್ತಿಯನ್ನು ‍ಪಡೆದುಕೊಂಡ ರೂಪದರ್ಶಿ ಶನಾಯಾ ಕಾಟ್ವೆ ಕತೆ.

ದ್ವಿತೀಯ ಪಿಯುಸಿ  ಓದುತ್ತಿರುವ ಶನಾಯಾ ಮಾಡೆಲಿಂಗ್‌ ಲೋಕದಲ್ಲಿ ಮಿಂಚುವ ಆಸೆಯಿಟ್ಟುಕೊಂಡಿದ್ದಾರೆ. ಈಗಾಗಲೇ ಮೂರು– ನಾಲ್ಕು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅವರು, ಏಪ್ರಿಲ್‌ ತಿಂಗಳಲ್ಲಿ ನಡೆಯಲಿರುವ ಪ್ರಿನ್ಸೆಸ್‌ ಇಂಡಿಯಾ ಸೌತ್‌ ಸ್ಪರ್ಧೆಗೆ ತಯಾರಾಗುತ್ತಿದ್ದಾರೆ. ಇದರ ಜೊತೆಗೆ ಮೂರು ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ.

ಆರನೇ ತರಗತಿ ಇರುವಾಗಲೇ ಫ್ಯಾಷನ್‌ ಟಿವಿ ನೋಡುತ್ತಾ ಅದರಲ್ಲಿ ರೂಪದರ್ಶಿಗಳ ನಡಿಗೆಯ ಶೈಲಿ, ವಸ್ತ್ರಗಳ ವಿನ್ಯಾಸಗಳನ್ನು ಗಮನಿಸುತ್ತಿದ್ದರು. ಮನೆಯಲ್ಲೇ ಬೆಕ್ಕಿನ ನಡಿಗೆಯ ಅಭ್ಯಾಸ ಮಾಡುತ್ತಿದ್ದರು. 10ನೇ ತರಗತಿ ಕಳೆಯುತ್ತಿದ್ದಂತೆ ಮಾಡೆಲಿಂಗ್‌ಗೇ ಹೋಗಲೇಬೇಕು ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡ ಅವರು ಬೆಂಗಳೂರಿನಲ್ಲಿ ರವಿಗೌಡ ಅವರ ಸಿಲ್ವರ್‌ ಸ್ಟಾರ್‌ ಮಾಡೆಲಿಂಗ್‌ ಸೆಂಟರ್‌ಗೆ ಸೇರಿಕೊಂಡರು. ಅಲ್ಲಿ ಗ್ರೂಮಿಂಗ್‌, ಮಾತನಾಡುವ ಕಲೆ ಬಗ್ಗೆ ಕಲಿತುಕೊಂಡರು. ಈಗಲೂ ವಾರಾಂತ್ಯದಲ್ಲಿ ತರಬೇತಿ ಮುಂದುವರೆಸಿದ್ದಾರೆ.

ಶನಾಯಾ ಹಿರಿತೆರೆಗೂ ಪ್ರವೇಶಿಸಿದ್ದಾಗಿದೆ. ಮಾರ್ಚ್‌ನಲ್ಲಿ ತೆರೆ ಕಾಣಲಿರುವ ‘ಇದಂ ಪ್ರೇಮಂ ಜೀವನಂ’ ಸಿನಿಮಾದಲ್ಲಿ ಇವರು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸನತ್‌ಕುಮಾರ್‌ ನಾಯಕ ನಟ. ದೇಶದ ಶ್ರೇಷ್ಠ ರೂಪದರ್ಶಿಗಳ ಪಟ್ಟಿಯಲ್ಲಿ ತನ್ನ ಹೆಸರೂ ಇರಬೇಕು ಎಂದು ಆಸೆ ಹೊಂದಿರುವ ಶನಾಯಾಗೆ ಬಾಲಿವುಡ್‌ ಪ್ರವೇಶಿಸುವ ಕನಸೂ ಇದೆ.

‘ನಟನೆ, ಮಾಡೆಲಿಂಗ್‌ ಎರಡೂ ನನ್ನಿಷ್ಟದ ಕ್ಷೇತ್ರ. ಎರಡರಲ್ಲಿ ಅವಕಾಶ ಸಿಕ್ಕರೆ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತೇನೆ. ಕೆಲವರು ನಟನೆಯಲ್ಲಿ ಅವಕಾಶ ಸಿಗಲು ಮಾಡೆಲಿಂಗ್‌ ಸಹಕಾರಿ. ಹಾಗಾಗಿ ಬಂದೆವು ಎನ್ನುವವರನ್ನು ನೋಡಿದ್ದೇನೆ. ಆದರೆ ನನಗೆ ರೂಪದರ್ಶಿಯಾಗುವುದೇ ನನ್ನ ಕನಸು. ಆಮೇಲೆ ನಟನೆ’ ಎಂದು ಹೇಳುತ್ತಾರೆ. ಶನಾಯಾ ‘ಫುಡ್ಡಿ’. ಪ್ರತಿದಿನ ಮಾಂಸಾಹಾರ ಸೇವಿಸುತ್ತಾರೆ. ಆದರೆ ತಿಂದ ಆಹಾರವನ್ನು ಕರಗಿಸಿಕೊಳ್ಳಲು ಅಷ್ಟೇ ಕಷ್ಟಪಡುತ್ತಾರೆ. ಬೆಳಿಗ್ಗೆ 5 ಗಂಟೆಗೆ ವಾಕಿಂಗ್‌ ಹೊರಟರೆ ವಾಪಸಾಗುವುದು 7 ಗಂಟೆಗೆ. ಆ ನಂತರ ಬೆಳಗ್ಗಿನ ತಿಂಡಿ. ಅದಾದ ಬಳಿಕ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಜಿಮ್‌ಗೆ ಹೋಗುತ್ತಾರೆ. ಕಾರ್ಡಿಯೊ, ಸೈಕ್ಲಿಂಗ್‌, ಏರೋಬಿಕ್ಸ್‌ ಮಾಡುತ್ತಾರೆ. ಎಣ್ಣೆ ಪದಾರ್ಥಗಳನ್ನು ಜಾಸ್ತಿ ತಿನ್ನಲ್ಲ.

‘ಆರೋಗ್ಯಕರವಾದ ಆಹಾರ ನನ್ನ ಆಯ್ಕೆ. ಅಮ್ಮನ ಕೈರುಚಿಯ ಅಡುಗೆಯೇ ನನ್ನ ಫೇವರಿಟ್‌. ಹಸಿವಾದಾಗ ದಾಳಿಂಬೆ, ಕಲ್ಲಂಗಡಿ ಹಣ್ಣುಗಳನ್ನು ತಿನ್ನುತ್ತಿರುತ್ತೇನೆ’ ಎಂದು ತನ್ನ ಸುಂದರ ಕಾಯದ ಗುಟ್ಟನ್ನು ಹೇಳುತ್ತಾರೆ. 

ಪ್ರತಿಕ್ರಿಯಿಸಿ (+)