ಶುಕ್ರವಾರ, ಜೂನ್ 5, 2020
27 °C

ಶಿವೋಪಾಸನೆಗೆ ಥರಾವರಿ ಕೋಸಂಬರಿ

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಶಿವೋಪಾಸನೆಗೆ ಥರಾವರಿ ಕೋಸಂಬರಿ

ಬಗೆ ಬಗೆ ತರಕಾರಿಗಳ ಕೋಸಂಬರಿ

ಬೀಟ್‌ರೂಟ್‌, ಕ್ಯಾರೆಟ್‌, ಮೂಲಂಗಿ, ಎಲೆಕೋಸು, ನವಿಲುಕೋಸು, ಕ್ಯಾಪ್ಸಿಕಂ, ಟೊಮೆಟೊ, ಎಳೆ ಸೌತೆಕಾಯಿ ಮತ್ತು ಈರುಳ್ಳಿ ಹೂವನ್ನು ಒಂದೇ ಪ್ರಮಾಣದಲ್ಲಿ ಹೆಚ್ಚಿ ಕಾಳುಮೆಣಸಿನ ಪುಡಿ, ಚಾಟ್‌ ಮಸಾಲಾ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿದರೆ ಸ್ವಾದಿಷ್ಟಕರ ಕೋಸಂಬರಿ ಅಥವಾ ಗ್ರೀನ್‌ ಸಲಾಡ್‌ ಸಿದ್ಧ.

ಮೊಳಕೆ ಹೆಸರು ಕಾಳಿನ ಉಸುಲಿ

ಮೊಳಕೆ ಬರಿಸಿದ ಹೆಸರುಕಾಳು ದೇಹಕ್ಕೆ ತಂಪು, ಪೌಷ್ಠಿಕಾಂಶಗಳ ಖನಿಜ ಮತ್ತು ನಾರಿನಂಶದಿಂದ ಸಮೃದ್ಧವಾಗಿರುತ್ತದೆ. ಹಸಿಯಾಗಿ ತಿಂದರೆ ಕೆಲವರಿಗೆ ವಾಯುಪ್ರಕೋಪವಾಗುವುದುಂಟು. ಅದಕ್ಕಾಗಿ ಹಬೆಯಲ್ಲಿ ಅಥವಾ ಕುಕ್ಕರ್‌ನಲ್ಲಿ ಬೇಯಿಸಿ ಬಳಸಲು ಬಯಸುತ್ತಾರೆ. ಅಂಥವರು ಉಸುಲಿ ಅಥವಾ ಒಗ್ಗರಣೆ ರೂಪದಲ್ಲಿ ಸೇವಿಸಬಹುದು.

ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪಿನೊಂದಿಗೆ ಬೇಯಿಸಿದ ಕಾಳುಗಳನ್ನು ಬಸಿದು ಇಟ್ಟುಕೊಳ್ಳಬೇಕು. ಬಾಣಲೆಗೆ ಸಾಸಿವೆ, ಕರಿಬೇವು ಸೊಪ್ಪು, ಚಿಟಿಕೆ ಇಂಗು, 2 ಬ್ಯಾಡಗಿ ಮೆಣಸಿನ ಕಾಯಿ, ಅರಸಿನ ಹಾಕಿ ಒಗ್ಗರಣೆ ಸಿದ್ಧಪಡಿಸಿಕೊಂಡು ಅದಕ್ಕೆ ಬಸಿದ ಕಾಳು ಮತ್ತು ತೆಂಗಿನಕಾಯಿ ತುರಿ ಸೇರಿಸಿದರೆ ರುಚಿಕರವಾದ ಹೆಸರುಕಾಳು ಉಸುಲಿ ಸಿದ್ಧ.

ಮೊಳಕೆಕಾಳುಗಳ ಸಲಾಡ್‌

ಚಳಿಗಾಲದಲ್ಲಿ ಮೊಳಕೆ ಕಾಳುಗಳನ್ನು ಹಸಿಯಾಗಿ ಸೇವಿಸುವುದಕ್ಕಿಂತ ಅರ್ಧ ಬೇಯಿಸಿ ಇಲ್ಲವೇ ಹಬೆಯಲ್ಲಿ ಬೇಯಿಸಿ ಬಳಸಿದರೆ ಸುಲಭವಾಗಿ ಜೀರ್ಣವಾಗುತ್ತದೆ. ಬೇಯಿಸುವಾಗ ಸ್ವಲ್ಪ ಉಪ್ಪು, ಹಸಿ ಶುಂಠಿಯನ್ನೂ ಸೇರಿಸಬೇಕು. ಕಾಳು ಸೋಸಿದ ನೀರಿಗೆ ಒಗ್ಗರಣೆ ಹಾಕಿದರೆ ವಿಟಮಿನ್‌ಯುಕ್ತ ಸೂಪ್‌ ಸಿಗುತ್ತದೆ. ಬಸಿದ ಮೊಳಕೆ ಕಾಳುಗಳಿಗೆ ಜೀರಿಗೆ, ಒಗ್ಗರಣೆ ಸೊಪ್ಪು, ಸಾಸಿವೆ, 2 ಹಸಿ ಮೆಣಸಿನಕಾಯಿ, ಸ್ವಲ್ಪ ತೆಂಗಿನಕಾಯಿ ತುರಿ ಹಾಕಿದ ಒಗ್ಗರಣೆ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸಲಾಡ್‌ ತಿನ್ನಲು ಸಿದ್ಧ.

ಬಣ್ಣ ಬಣ್ಣದ ಸಮೃದ್ಧ ಕೋಸಂಬರಿ

ಜಗಿದು ತಿನ್ನಬೇಕಾದ ಕೋಸಂಬರಿ ಅಂದರೆ ಮಕ್ಕಳಿಗೆ ಸ್ವಲ್ಪ ಅಷ್ಟಕ್ಕಷ್ಟೇ. ಅದಕ್ಕಾಗಿ ಬಣ್ಣ ಬಣ್ಣದ ಆದರೆ ಪೌಷ್ಠಿಕಾಂಶಗಳಿಂದ ಸಮೃದ್ಧವಾದ ಕೋಸಂಬರಿ ಮಾಡಿ ಅವರನ್ನು ಸೆಳೆಯಬಹುದು. ದಾಳಿಂಬೆ, ಸೇಬು, ದ್ರಾಕ್ಷಿ, ಸೌತೆಕಾಯಿ, ಕ್ಯಾರೆಟ್‌, ಬೀಟ್‌ರೂಟ್‌, ನೇರಳೆ ಹಾಗೂ ಹಸಿರು ಬಣ್ಣದ ಕ್ಯಾಬೇಜ್‌, ಮೊಳಕೆ ಬರಿಸಿದ ವಿವಿಧ ಕಾಳುಗಳು, ಹಸಿ ಜೋಳ, ಕೊತ್ತಂಬರಿ ಸೊಪ್ಪು, ಬ್ರೊಕೋಲಿ, ಕ್ಯಾರೆಟ್‌ ಮತ್ತು ಮೂಲಂಗಿ ಸೊಪ್ಪು ಹಾಗೂ ಒಣಹಣ್ಣುಗಳನ್ನು ಹಾಕಿದ ಕೋಸಂಬರಿಯದು. ತರಕಾರಿ ಮತ್ತು ಹಣ್ಣುಗಳನ್ನು ಉದ್ದುದ್ದಕ್ಕೆ ತೆಳುವಾಗಿ ಕತ್ತರಿಸಬಹುದು ಇಲ್ಲವೇ ತರಕಾರಿ ಕಟ್ಟರ್‌ನಲ್ಲಿ ವಿನ್ಯಾಸದಿಂದ ಕತ್ತರಿಸಬಹುದು. ಸೊಪ್ಪುಗಳನ್ನು ಸಣ್ಣಗೆ (ಬಾಯಿಗೆ ಸಿಗದಂತೆ) ಹೆಚ್ಚಿದರೆ ತಂಟೆ, ತಕರಾರು ಇಲ್ಲದೆ ಸೇವಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.