ಪ್ರೇಮದ ಕಾವ್ಯಾನುಭವ

7

ಪ್ರೇಮದ ಕಾವ್ಯಾನುಭವ

Published:
Updated:

ಯಾವ ಪ್ರೇಮಿಯೂ ಹಂಬಲಿಸನು ಮಿಲನಕೆ, ಪ್ರಿಯತಮೆಯಲಿ ಇಲ್ಲವಾದರೆ ಬಯಕೆ.

ಎಂದು ಪ್ರೇಮದ ಬಗೆಗಿನ ಸೂಫಿ ವಲಯದ ಚರ್ಚೆ ಶುರುವಾದ ಹೆಚ್ಚುಕಮ್ಮಿ ಮುನ್ನೂರು ವರ್ಷಗಳ ಬಳಿಕ ವಿಶ್ವವಿಖ್ಯಾತ ಸೂಫಿ ಸಂತ ಕವಿ ಮೌಲಾನಾ ಜಲಾಲುದ್ದೀನ್ ರೂಮಿ ತನ್ನ ಬೃಹತ್ ಕಾವ್ಯ ‘ಮಸ್ನವಿ’ಯಲ್ಲಿ ಬರೆದಿದ್ದರು. ‘ಹಂಬಲಿಸುವವರಿಗೆ ದೇವರು ಒಂದು ಗುಪ್ತ ಭಂಡಾರದಂತೆ’ ಎಂಬ ಅಭಿಪ್ರಾಯ ಸೂಫಿ ವಲಯದಲ್ಲಿ ಮೂಡಿ ಬೆಳೆಯಲು ‘ನನ್ನನ್ನು ಪ್ರೀತಿಸುವವರಿಗಾಗಿ ನಾನು ಪ್ರೀತಿಸಲು ಹಂಬಲಿಸುತ್ತಿರುತ್ತೇನೆ’ ಎಂಬ ದೇವರ ಸಂದೇಶವು ಕಾರಣವಾಯಿತು. ಇದೇ ಕಾರಣಕ್ಕಾಗಿ ಕವಿ ಅಲ್ಲಾಮ ಇಕ್ಬಾಲ್ ‘ನಮ್ಮಂತೆಯೇ ಅವನು ಕೂಡ ಹಂಬಲದ ಕೈದಿ’ ಎಂದು ಬರೆದಿದ್ದರು.

ಸೂಫಿ ಕಾವ್ಯದಲ್ಲಿ ನಿಜವಾದ ಪ್ರೇಮದ ಸ್ಥಿತಿಯನ್ನು ವಿವರಿಸಲು ಈ ಸಂದರ್ಭದಲ್ಲಿ ಪ್ರಯತ್ನ ಮಾಡುತ್ತಿದ್ದರು. ಸಂತ ಬಾಯಜೀದ್ ಬಸ್ತಾಮಿ ಪ್ರೇಮದ ಪ್ರೇರಕ ಶಕ್ತಿಯ ಗುಣವನ್ನು ಕಂಡುಕೊಂಡಿದ್ದರು. "ನಾನು ಹುಲ್ಲು ಮೈದಾನದಲ್ಲಿ ನಡೆಯುತ್ತಿದ್ದೆ, ಅಲ್ಲಿ ಪ್ರೇಮದ ಮಳೆ ಬಂದಹಾಗಿತ್ತು. ಮಣ್ಣು ಒದ್ದೆಯಾಗಿತ್ತು. ಗುಲಾಬಿ ಹೂಗಳ ತೋಟದಲ್ಲಿ ಸಾವಧಾನದಿಂದ ನಡೆಯುವಂತೆ ನನ್ನ ಕಾಲುಗಳು ಪ್ರೀತಿಯಿಂದ ನಡೆಯುತ್ತಿದ್ದವು" ಎಂದು ಅವರು ಹೇಳಿದ್ದನ್ನು ‘ತದ್ಕೀರತುಲ್ ಔಲಿಯಾ’ (ಸೂಫಿ ಸಂತರ ಇತಿಹಾಸ) ಎಂಬ ಗ್ರಂಥದಲ್ಲಿ ಫರೀದುದ್ದೀನ್ ಅತ್ತಾರ್ ಉಲ್ಲೇಖಿಸಿದ್ದರು. ಫಾರಸಿ ಕಾವ್ಯಗಳಲ್ಲಿ ಪ್ರೇಮ ವಸಂತವನ್ನು ಕವಿಗಳು ಕಲ್ಪಿಸಿಕೊಂಡಿದ್ದರು. "ಅಧ್ಯಾತ್ಮ ಸಮಯವು ವಸಂತ ಋತುವಿನ ದಿನದಂತಿತ್ತು. ಸಿಡಿಲ ಮೊರೆತಕ್ಕೆ ಮೋಡಗಳು ಕಣ್ಣೀರು ಹರಿಸಿದ್ದವು. ಮಿಂಚು ಹೊಳೆದು ಸುಡುವಂತಿತ್ತು. ಗಾಳಿ ಬೀಸತೊಡಗಿತ್ತು. ಹೂ ಮೊಗ್ಗುಗಳು ಅರಳಿದವು, ಹಕ್ಕಿಗಳು ಹಾಡತೊಡಗಿದವು. ಅವನ ಸ್ಥಿತಿ ಹೇಗಿತ್ತೆಂದರೆ ಕಣ್ಣುಗಳು ತುಂಬಿದ್ದರೂ ತುಟಿಗಳು ಅರಳಿ ನಗೆ ಸೂಸುವಂತಿದ್ದು, ಹೃದಯವು ಸುಡುತ್ತಿದ್ದು, ಅವನ ತಲೆಯು ಅತ್ತಿತ್ತ ತೂಗುತ್ತಿದ್ದ ಪರಿಸ್ಥಿತಿಯಲ್ಲಿ ಗೆಳೆಯನ(ದೇವರ) ಹೆಸರನ್ನು ಜಪಿಸುತ್ತ ಬಾಗಿಲ ಬಳಿಯಲ್ಲಿ ಅತ್ತಿಂದಿತ್ತ ನಡೆದಾಡುತ್ತಿದ್ದ" ಎಂದು ಸಂತ ಅಬೂಬಕರ್ ಶಿಬ್ಲಿ ಹೇಳಿದ್ದನ್ನು ಅತ್ತಾರ್ ‘ತದ್ಕೀರತುಲ್ ಔಲಿಯಾ’ದಲ್ಲಿ ಉಲ್ಲೇಖಿಸಿದ್ದರು. ಇಂತಹ ವಿವರಣೆಗಳು ಸೂಫಿ ಪಂಥದ ಗ್ರಂಥಗಳಲ್ಲಿ ಕಾವ್ಯರೂಪ ಧಾರಣೆ ಮಾಡುತ್ತಿದ್ದವು. ಇಂತಹ ವಿವರಣೆಗಳು ದೈವೀ ಸಂದೇಶಗಳ ರೂಪತಾಳುತ್ತಿದ್ದವು.

ತಮಗಾದ ದೈವೀ ಅನುಭವದ (ಅಶರೀರವಾಣಿ)ಸಂದೇಶ ಅಥವಾ ‘ಹದೀಸ್ ಎ ಖುದ್ಸಿ’ಯ ಬಗ್ಗೆ ಇಮಾಮ್ ಗಝ್ಝಾಲಿಯವರು ಹೀಗೆ ವಿವರಿಸುತ್ತಾರೆ:

"ನನ್ನ ಭಕ್ತರಲ್ಲಿ ಕೆಲವರು ನನ್ನನ್ನು ಪ್ರೀತಿಸುತ್ತಾರೆ, ನಾನು ಅಂಥವರನ್ನು ಪ್ರೀತಿಸುತ್ತೇನೆ, ಅವರು ನನಗಾಗಿ ಪರಿತಪಿಸಸುತ್ತಾರೆ, ಆಗ ನಾನೂ ಅವರಿಗಾಗಿ ಪರಿತಪಿಸುತ್ತೇನೆ. ಅವರು ನನ್ನಡೆ ನೋಡುತ್ತಾರೆ, ಕುರುಬನೊಬ್ಬ ತನ್ನ ಕುರಿಮಂದೆಯನ್ನು ನಡುಹಗಲು ಬಿಸಿಲ ಬೇಗೆಯಿಂದ ಕಾಪಾಡಲು ಮರದ ನೆರಳಿನ ಆಸರೆಗೆ ತಂದು ರಕ್ಷಿಸಿದಂತೆ ನಾನೂ ಅವರನ್ನು ನೋಡಿಕೊಳ್ಳುತ್ತೇನೆ, ಅವರು ಸಂಜೆಯಾಗುವುದನ್ನು ಎದುರುನೋಡುತ್ತಿರುತ್ತಾರೆ, ಹಕ್ಕಿಗಳು ತಮ್ಮ ಗೂಡನ್ನು ಸೇರಲು ತವಕಿಸಿದಂತೆ!".

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry