ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಂಡರ ಬಿಡುಗಡೆ ಆದೇಶ ರದ್ದು

Last Updated 7 ಫೆಬ್ರುವರಿ 2018, 19:43 IST
ಅಕ್ಷರ ಗಾತ್ರ

ಮಾಲೆ (ಎಎಫ್‌ಪಿ): ಬಂಧನದಲ್ಲಿರುವ ವಿರೋಧ ಪಕ್ಷದ ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಬೇಕು ಎನ್ನುವ ಈ ಹಿಂದಿನ ಆದೇಶವನ್ನು ಮಾಲ್ಡೀವ್ಸ್‌ನ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಸುಪ್ರೀಂ ಕೋರ್ಟ್‌ನ ಈ ಕ್ರಮವನ್ನು ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸ್ವಾಗತಿಸಿದ್ದಾರೆ. ಯಮೀನ್ ಅವರು ಸೋಮವಾರ ಮಧ್ಯರಾತ್ರಿ ತುರ್ತು ಪರಿಸ್ಥಿತಿ ಘೋಷಿಸಿದ ನಂತರ, ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಈ ಬೆಳವಣಿಗೆ ನಡೆದಿದೆ.

‘ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದರಿಂದ ಈ ಹಿಂದೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಯಿತು’ ಎಂದು ಸುಪ್ರೀಂ ಕೋರ್ಟ್‌ನ ಉಳಿದ ಮೂವರು ನ್ಯಾಯಮೂರ್ತಿಗಳು ಹೇಳಿದ್ದಾರೆ.

ರಾಜಕೀಯ ನಾಯಕರ ಬಿಡುಗಡೆಗೆ ನೀಡಿದ್ದ ಆದೇಶಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಅಧ್ಯಕ್ಷ ಮೊಹಮ್ಮದ್ ನಷೀದ್, ತಾವು ಮಾಲ್ಡೀವ್ಸ್‌ಗೆ ವಾಪಸಾಗಲು ಅವಕಾಶ ದೊರೆತಿದೆ ಎಂದಿದ್ದರು. ಜತೆಗೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಯಮೀನ್ ವಿರುದ್ಧ ಸ್ಪರ್ಧಿಸುವುದಾಗಿಯೂ ಹೇಳಿದ್ದರು. ಆದರೆ ಮಂಗಳವಾರ ಸುಪ್ರೀಂ ಕೋರ್ಟ್ ತನ್ನ ಆದೇಶ ಹಿಂಪಡೆದಿದ್ದರಿಂದ, ನಷೀದ್ ಸೇರಿದಂತೆ ಎಂಟು ರಾಜಕೀಯ ನಾಯಕರ ಬಿಡುಗಡೆ ರದ್ದಾಗಿದೆ.

ಎಚ್ಚರಿಕೆ: ಮಾಲ್ಡೀವ್ಸ್‌ಗೆ ಪ್ರಯಾಣಿಸದಂತೆ ಹಲವು ರಾ‌ಷ್ಟ್ರಗಳು ಪ್ರಜೆಗಳಿಗೆ ಎಚ್ಚರಿಕೆ ನೀಡಿವೆ. ಮಾಲ್ಡೀವ್ಸ್ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಗಣನೀಯ ಪಾಲು ಹೊಂದಿದೆ.

ಚೀನಾ ನಿಲುವು ತಿರಸ್ಕರಿಸಿದ ನಷೀದ್

ಮಾಲ್ಡೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಪರಿಹರಿಸಲು ಭಾರತ ಸೇನೆಯನ್ನು ಕಳುಹಿಸಬೇಕು ಹಾಗೂ ‘ವಿಮೋಚನಾಕಾರ’ ಪಾತ್ರ ನಿರ್ವಹಿಸಬೇಕು ಎಂದು ಮಾಜಿ ಅಧ್ಯಕ್ಷ ಮೊಹಮ್ಮದ್ ನಷೀದ್ ಅವರು ಕೇಳಿಕೊಂಡಿದ್ದಾರೆ.

ಬಿಕ್ಕಟ್ಟು ‍ಪರಿಹಾರಕ್ಕೆ ಸೇನೆ ಮಧ್ಯಪ್ರವೇಶ ಬೇಡ. ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬಹುದು ಎನ್ನುವ ಚೀನಾ ನಿಲುವನ್ನು ನಷೀದ್ ಈ ಮೂಲಕ ತಿರಸ್ಕರಿಸಿದ್ದಾರೆ.

‘ಭಾರತದ ಪಾತ್ರವನ್ನು ಮಾಲ್ಡೀವ್ಸ್ ಪ್ರಜೆಗಳು ಸಕಾರಾತ್ಮಕವಾಗಿ ಪರಿಗಣಿಸುತ್ತಾರೆ. 1988ರಲ್ಲಿ ಉಂಟಾದ ಬಿಕ್ಕಟ್ಟನ್ನು ಭಾರತ ಪರಿಹರಿಸಿತ್ತು’ ಎಂದು ನಷೀದ್ ಟ್ವೀಟ್ ಮಾಡಿದ್ದಾರೆ.

ಪರಿಶೀಲನೆಗೆ ಆಹ್ವಾನ

ಆಡಳಿತದ ಕೆಲವು ಸಮಸ್ಯೆಗಳನ್ನು ಪರಿಹರಿಸಲು ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಮಾಲ್ಡೀವ್ಸ್ ಸರ್ಕಾರ ಹೇಳಿದೆ.ಪರಿಸ್ಥಿತಿ ಪರಿಶೀಲಿಸಲು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭೇಟಿ ನೀಡಬಹುದು ಎಂದು‌ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ತುರ್ತು ಪರಿಸ್ಥಿತಿ ಹೇರಿದ್ದರೂ ಕರ್ಫ್ಯೂ ವಿಧಿಸಿಲ್ಲ. ಉದ್ಯಮಗಳಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಖಾತ್ರಿಪಡಿಸಲು ಬಯಸು
ವುದಾಗಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT