ಜೆಡಿಎಸ್‌ಗೆ ಬಹುಮತ ನೀಡಿ

7

ಜೆಡಿಎಸ್‌ಗೆ ಬಹುಮತ ನೀಡಿ

Published:
Updated:

ಮಳವಳ್ಳಿ: ‘ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಲು ಅಧಿಕಾರ ಬೇಡ ಜನರ ಸರ್ಕಾರ ಏನೆಂಬುದನ್ನು ತೋರಿಸುತ್ತೇನೆ. ಇದೊಂದು ಬಾರಿ ಜೆಡಿಎಸ್‌ಗೆ ಸಂಪೂರ್ಣ ಬಹುಮತ ನೀಡಿ ಅಧಿಕಾರಕ್ಕೆ ತನ್ನಿ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ವಿಕಾಸಯಾತ್ರೆ ವಾಹಿನಿ ‘ಕುಮಾರಪರ್ವ’ ನಿಮಿತ್ತ ತಾಲ್ಲೂಕಿನ ಹಲಗೂರು ಹಾಡ್ಲಿ ವೃತ್ತದಲ್ಲಿ ಬುಧವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಯಾವುದೇ ಸಾಲ ಇರಲಿ ಸಾಲಮನ್ನಾ ಮಾಡುತ್ತೇನೆ. ಪುನಃ ಸಾಲ ನೀಡದೆ ₹ 25 ಸಾವಿರ ಕೋಟಿ ವೆಚ್ಚದಲ್ಲಿ ಇಸ್ರೇಲ್ ಮಾದರಿಯಲ್ಲಿ ಅತ್ಯಾಧುನಿಕ ರೀತಿಯ ಕೃಷಿ ಪದ್ಧತಿ ಜಾರಿಗೆ ತಂದು ರೈತ ಪರ ಸರ್ಕಾರ ಎಂಬದನ್ನು ಸಾಬೀತುಪಡಿಸುತ್ತೇನೆ ಎಂದರು.

ಪ್ರತಿ ತಿಂಗಳು 30 ಜಿಲ್ಲೆಯಿಂದ ತಲಾ ಒಬ್ಬ ರೈತರನ್ನು ಒಟ್ಟಿಗೆ ಕರೆದು ಅವರ ಸಲಹೆಯಂತೆ ಅಧಿಕಾರ ನಡೆಸಿ ನಾನು ದೊರೆಯಾಗದೆ ಜನರಿಗೆ ಅಧಿಕಾರ ನೀಡಿ, ಜನತೆಯ ಸೇವಕನಾಗಿ ಅವರ ಸಲಹೆಯ ಮೇರೆಗೆ ಆಡಳಿತ ನಡೆಸುತ್ತೇನೆ ಎಂದು ಹೇಳಿದರು.

‘ಕಾಂಗ್ರೆಸ್ ಮತ್ತು ಬಿಜೆಪಿ ಸಾಧನಾ ಸಮಾವೇಶ ಹಾಗೂ ಪರಿವರ್ತನಾ ಯಾತ್ರೆ ಮಾಡಿ ಚುನಾವಣೆ ಮಾಡುತ್ತಿದ್ದಾರೆ. ಆದರೆ ನಾನು ಮತ್ತು ನನ್ನ ತಂದೆ ಏಕಾಂಗಿಯಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ರೈತರ ಹಿತ ಕಾಪಾಡಲು ಹೋರಾಟ ಮಾಡುತ್ತಿದ್ದೇವೆ. ನನ್ನ ಆರೋಗ್ಯ ಹದಗೆಟ್ಟಿದ್ದರೂ ರಾಜ್ಯದ ಜನತೆಯ ಹಿತ ದೃಷ್ಟಿಯಿಂದ ಪ್ರವಾಸ ಕೈಗೊಂಡಿದ್ದು ನನ್ನನ್ನು ನಂಬಿ’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ 3100 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಡ್ಯ ಜಿಲ್ಲೆಯಲ್ಲೇ 170 ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಕ್ಕೆ ಸಮರ್ಪಕವಾದ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಸರ್ಕಾರ ಸಹಕಾರ ಸಂಘಗಳ ಮೂಲಕ ರೈತರ ಸಾಲಮನ್ನಾ ಮಾಡಿರುವುದಾಗಿ ತಿಳಿಸಿದ್ದರು ಇದುವರೆಗೂ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಮತ್ತು ರೈತರಿಗೆ ಹೊಸ ಸಾಲವನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಕಾವೇರಿ ಮಹದಾಯಿ ವಿಚಾರವಾಗಿ ಹೋರಾಟ ಮಾಡುವ ಛಲ ತಮ್ಮ ತಂದೆ ದೇವೇಗೌಡರಿಗೆ ಮಾತ್ರ ಇದೆ’ ಎಂದು ಹೇಳಿದರು. ‘ಮಳವಳ್ಳಿ ಕ್ಷೇತ್ರದ ಜನರ ಋಣ ನನ್ನ ಮೇಲಿದೆ. 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಹೆಚ್ಚಿನ ಮತ ನೀಡಿದ್ದೀರಿ, ಈ ಒಂದು ಬಾರಿ ನಾನು ಮುಖ್ಯಮಂತ್ರಿಯಾಗಲು ಸಹಕರಿಸಿ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕೆ.ಅನ್ನದಾನಿ ಅವರನ್ನು ಮಳವಳ್ಳಿ ಕ್ಷೇತ್ರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸರ್ಕಾರ ಅಧಿಕಾರಕ್ಕೆ ಬಂದರೆ 6 ತಿಂಗಳ ಗರ್ಭಿಣಿಯರಿಗೆ 6 ತಿಂಗಳು ಮಾಸಿಕ 6 ಸಾವಿರ ಮಾಸಾಶನ ನೀಡಲಾಗುವುದು. ಈಗಾಗಲೇ ಸಿದ್ಧರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ₹ 2.42 ಸಾವಿರ ಕೋಟಿ ಸಾಲಮಾಡಿ ರಾಜ್ಯದ ಜನತೆಯ ಮೇಲೆ ಹೇರಿದೆ’ ಎಂದರು.

ಹಿಂದೆ ರಾಜಕೀಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿದ್ದೆ. ಆದರೆ, ನಿಮ್ಮೆಲ್ಲರ ನಡುವಿನ ಬಾಂಧವ್ಯದಿಂದ ಅನುಭವ ಬಂದಿದ್ದು ಉತ್ತಮ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಫ್ರುಲ್ಲಾಖಾನ್ ಹಾಜರಿದ್ದರು. ನಂತರ ಮತ್ತಿತಾಳೇಶ್ವರಸ್ವಾಮಿ ದೇವಾಲಯದ ಆವರಣ, ಪಂಡಿತಹಳ್ಳಿ, ಬೆಳಕವಾಡಿಗೆ ತೆರಳಿದರು.

ಕ್ರೇನ್‌ನಲ್ಲಿ ಹಾರ ಹಾಕಿದ ಬೆಂಬಲಿಗರು...

ಶಾಸಕ ಎಚ್‌.ಡಿ.ಕುಮಾರಸ್ವಾಮಿ ಅವರು ತೆರೆದ ಬಸ್‌ನಲ್ಲಿ ವಿಕಾಸ ಯಾತ್ರೆ ನಡೆಸುತ್ತಿದ್ದು ತಾಲ್ಲೂಕಿನ ಹಲಗೂರು ಮುಗಿಸಿ ಹಾಡ್ಲಿ ವೃತ್ತಕ್ಕೆ ಬಂದಾಗ ಕ್ರೇನ್ ಮೂಲಕ ಬೃಹತ್ ಹಾರವನ್ನು ಹಾಕಿ ಜೈಕಾರ ಕೂಗಿದರು. ಇದನ್ನು ಕುತೂಹಲಭರಿತರಾಗಿ ನೋಡಲು ನೂರಾರು ಮಂದಿ ಕಟ್ಟಡಗಳನ್ನು ಏರಿದ್ದು ಗಮನ ಸೆಳೆಯಿತು.

ನೂರಾರು ಬೈಕ್‌ ಸವಾರರು

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕುಮಾರಪರ್ವ ವಿಕಾಸವಾಹಿನಿ ಮುಂದೆ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಮೋಟಾರ್‌ ಬೈಕ್‌ಗಳಲ್ಲಿ ಜೈಕಾರ ಕೂಗುತ್ತಾ ಜೊತೆಯಲ್ಲಿ ತೆರಳಿದರೆ ಇದರಿಂದ ಅಲ್ಲಲ್ಲಿ ವಾಹನದಟ್ಟಣೆ ಇತ್ತು.

ಒಕ್ಕಲಿಗರಾಗಿ ಹುಟ್ಟಿದ್ದೆ ತಪ್ಪೆ?

ಮಳವಳ್ಳಿ: ಹಲಗೂರು ವೃತ್ತದಲ್ಲಿ ವ್ಯಕ್ತಿಯೊಬ್ಬರು ಚೀಟಿ ಮೂಲಕ ಒಕ್ಕಲಿಗರಾಗಿ ಹುಟ್ಟಿದ್ದೇ ತಪ್ಪೇ ಎಂದು ಪಶ್ನಿಸಿದರು.

‘ಆ ಪತ್ರವನ್ನು ಕುಮಾರಸ್ವಾಮಿ ಅವರು ಕನ್ನಡಕ ಧರಿಸಿ ಓದಿ ಒಕ್ಕಲಿಗರಾಗಿ ಹುಟ್ಟಿರುವ ನನ್ನನ್ನು, ನಮ್ಮ ತಂದೆಯನ್ನು ಬೆಳೆಸಿದ್ದೀರಿ ನಮಗೂ ಎಲ್ಲರೂ ಬೇಕು ಸಂವಿಧಾನದಡಿಯಲ್ಲಿ ಜೀವನ ನಡೆಸುತ್ತಿರುವುದರಿಂದ ಎಲ್ಲರ ಸಹಕಾರ ಬೇಕು’ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry