ಶುಕ್ರವಾರ, ಡಿಸೆಂಬರ್ 6, 2019
25 °C

ಕಟ್ಟಡ ನಿರ್ಮಾಣ ಇನ್ನೂ ಕಠಿಣ

Published:
Updated:
ಕಟ್ಟಡ ನಿರ್ಮಾಣ ಇನ್ನೂ ಕಠಿಣ

ಬಿಡಿಎಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯುವುದು ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗಲಿದೆ. ಈವರೆಗೆ ಕಟ್ಟಡ ನಿರ್ಮಾಣ ಅನುಮತಿಗಾಗಿ 12 ದಾಖಲೆಗಳನ್ನು ಕೊಟ್ಟಿದ್ದರೆ ಸಾಕಿತ್ತು. ಇನ್ನು ಮುಂದೆ 31 ದಾಖಲೆ ಪತ್ರಗಳನ್ನು ಒದಗಿಸಬೇಕಾಗುತ್ತದೆ.

‘ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕರಡು ಬೈಲಾ- 2017’ರ ಪ್ರಕಾರ ಕಡಿಮೆ ಅಂತಸ್ತಿನ ಕಟ್ಟಡಗಳ ನಿರ್ಮಾಣಕ್ಕೆ ಸ್ವಯಂ ದೃಢೀಕರಣವನ್ನು ಪರಿಗಣಿಸಿ ಅನುಮತಿ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಡಿಎ ಮುಂದಾಗಿದೆ. ‘ವ್ಯವಹಾರ ಸುಧಾರಣಾ ಯೋಜನೆ’ ಅಡಿ ಈ ಹೊಸ ಯೋಜನೆಗೆ ಹೊಸಶಕ್ತಿ ತುಂಬುವುದು ಬಿಡಿಎ ಆಶಯ.

ರಾಜ್ಯದ ವಿವಿಧ ಜಿಲ್ಲೆ, ಪಟ್ಟಣಗಳಲ್ಲಿ ಇರುವ ನಗರಾಭಿವೃದ್ಧಿ ಪ್ರಾಧಿಕಾರಗಳು ಕಟ್ಟಡ ನಿರ್ಮಾಣಕ್ಕೆ ಪಡೆಯುವ ಅರ್ಜಿಗಳಲ್ಲಿ ಏಕರೂಪ ನಮೂನೆ ಮಾಡಬೇಕು ಹಾಗೂ ಅವುಗಳನ್ನು ಆನ್‌ಲೈನ್‌ ಮೂಲಕ ವಿಲೇವಾರಿ ಮಾಡಬೇಕೆಂದು ಕೆಎಂಸಿ ಕರಡು ಬೈಲಾ- 2017ರಲ್ಲಿ ಹೇಳಲಾಗಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಬಿಡಿಎ ಹೆಚ್ಚು ದಾಖಲೆಗಳನ್ನು ಕೇಳುವ ಹೊಸ ನಿಯಮ ರೂಪಿಸುತ್ತಿದೆ ಎಂಬುದು ಬಿಲ್ಡರ್‌ಗಳ ಆಕ್ಷೇಪ.

15 ಮೀಟರ್‌ ಅಥವಾ ಅದಕ್ಕಿಂತ ಹೆಚ್ಚು ಎತ್ತರದ ಕಟ್ಟಡ ನಿರ್ಮಾಣಕ್ಕೆ ವಿಮಾನ ನಿಲ್ದಾಣ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಕಡ್ಡಾಯ. ಇದರೊಂದಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಬೆಸ್ಕಾಂ, ಅಗ್ನಿಶಾಮಕ, ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆದು ಎಲ್ಲ ದಾಖಲೆಗಳನ್ನು ಬಿಡಿಎಗೆ ಸಲ್ಲಿಸಿದ ಬಳಿಕ ಅನುಮತಿ ನೀಡಲಾಗುತ್ತದೆ. ಸದ್ಯ, ಈ ಎಲ್ಲ ದಾಖಲೆ ಪಡೆಯಲು ಕನಿಷ್ಠ 8 ತಿಂಗಳು ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂಬ ಅಸಮಾಧಾನ ಬಿಲ್ಡರ್‌ಗಳ ವಲಯದಲ್ಲಿ ಕೇಳಿಬಂದಿದೆ. ಬಿಡಿಎ ವ್ಯಾಪ್ತಿಯಲ್ಲಿ 1,294 ಚದರ ಕಿ.ಮೀ. ನಲ್ಲಿ ಕಟ್ಟಡ ನಿರ್ಮಾಣ ಮಾಡಲು ಈ ನಿಯಮ ಅನ್ವಯವಾಗಲಿದೆ.

‘ರಿಯಲ್ ಎಸ್ಟೇಟ್‌ನಲ್ಲಿ ಯೋಜನೆ ಹಾಗೂ ಕಟ್ಟಡದ ನೀಲನಕ್ಷೆಗೆ ಒಪ್ಪಿಗೆ ಪಡೆಯುವುದೇ ಪ್ರಮುಖ ಅಂಶ. ಯೋಜನೆಗಳಿಗೆ ಅನುಮತಿ ನೀಡಲು ವಿಳಂಬ ಮಾಡುವ ಹೊಸ ತಂತ್ರವನ್ನು ಬಿಡಿಎ ಹೆಣೆದಿದೆ ಎಂದೆನಿಸುತ್ತಿದೆ. ಈಗಾಗಲೇ ಅನುಮತಿ ಪಡೆಯುವುದು ಕ್ಲಿಷ್ಟಕರ ಪ್ರಕ್ರಿಯೆಯಾಗಿದ್ದು, ಇದರಿಂದ ಇನ್ನಷ್ಟು ಕಷ್ಟಕರ ಸನ್ನಿವೇಶವನ್ನು ಬಿಲ್ಡರ್‌ಗಳು ಎದುರಿಸಬೇಕಾಗಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕ್ರೆಡಾಯ್ ಉಪಾಧ್ಯಕ್ಷ  ಸುರೇಶ್ ಹರಿ.

ಇಷ್ಟು ದಾಖಲೆಗಳು ಬೇಕು

ಕಟ್ಟಡ ನಿರ್ಮಾಣಕ್ಕೆ ಬಿಡಿಎಯಿಂದ ಅನುಮತಿ ಪಡೆಯಲು ಇಚ್ಛಿಸುವವರು ಈ ಕೆಳಕಂಡ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಬಿಡಿಎ ಕಟ್ಟಡ ನಿರ್ಮಾಣಕ್ಕೆ ಅರ್ಜಿ, ಯೋಜನೆ ಅನುಮತಿ ಪರವಾನಗಿ–ಫಾರ್ಮ್‌ ಎ, ಪೊಸೆಷನ್ ಪ್ರಮಾಣ ಪತ್ರ, ಖಾತಾ ಪ್ರಮಾಣ ಪತ್ರ, ತೆರಿಗೆ ಪಾವತಿ ರಸೀದಿ, ನಷ್ಟ ಪರಿಹಾರ ಒಪ್ಪಂದ ಪತ್ರ (ಇಂಡೆಮ್ನಿಟಿ ಬಾಂಡ್), ಎಂಜಿನಿಯರ್‌ ಮತ್ತು ಆರ್ಕಿಟೆಕ್ಚರ್‌ರಿಂದ ಅಫಿಡವಿಟ್, ಶೀರ್ಷಿಕೆ ಪತ್ರ, ಜಂಟಿ ಅಭಿವೃದ್ಧಿ ಒಪ್ಪಂದ ಪತ್ರ, ಮ್ಯುಟೇಷನ್ ಪ್ರತಿ, ಪಹಣಿ ಪ್ರತಿ, ಕರ್ನಾಟಕ ರಿವಿಷನ್ ಸೆಟಲ್‌ಮೆಂಟ್, ಅಡಚಣೆ ಇರದ ಬಗ್ಗೆ ಪ್ರಮಾಣ ಪತ್ರ, ರೆವೆನ್ಯೂ ಸರ್ವೆ ಮ್ಯಾಪ್, ನೋಂದಾಯಿತ ಸರ್ವೆದಾರರಿಂದ ಸರ್ವೆ ನಕ್ಷೆ, ಗೂಗಲ್ ಮ್ಯಾಪ್ ಹಾಗೂ ಆರ್‌ಎಂಪಿ, ಕಂದಾಯ ಉಪ ಆಯುಕ್ತರಿಂದ ಭೂಮಿ ಪರಿವರ್ತನೆ ಆದೇಶ, ಬಿಡಿಎನಿಂದ ಭೂಮಿ ಬಳಕೆಯ ಬದಲಾವಣೆಯಾಗಿರುವ ಬಗ್ಗೆ ಮಾಹಿತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ, ಅಗ್ನಿಶಾಮಕದಳದಿಂದ ನಿರಪೇಕ್ಷಣಾ ಪತ್ರ (ಎನ್ಒಸಿ), ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನಿರಾಪೇಕ್ಷಣ ಪತ್ರ (ಎನ್ಒಸಿ), ಬೆಸ್ಕಾಂ ಎನ್ಒಸಿ, ಜಲಮಂಡಳಿಯಿಂದ ಎನ್ಒಸಿ, ಬಿಎಸ್ಎನ್ಎಲ್‌ನಿಂದ ಎನ್ಒಸಿ, ನಿವೇಶನ ಸ್ಥಳದ ನಕಾಶೆ, ಏರಿಯಾ ಸ್ಟೇಟ್‌ಮೆಂಟ್‌ ಕ್ಯಾಲುಕ್ಲೇಶನ್ ಶೀಟ್, ಕಟ್ಟಡ ನಿರ್ಮಾಣದ ಸಂಪೂರ್ಣ ಯೋಜನಾ ವಿವರ.

ಪ್ರತಿಕ್ರಿಯಿಸಿ (+)