ಗುರುವಾರ , ಮೇ 28, 2020
27 °C

ಸಿಎಂ ಮುಂದೆ ಧರಣಿ ಕುಳಿತ ಅಮರನಾಥ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಎಂ ಮುಂದೆ ಧರಣಿ ಕುಳಿತ ಅಮರನಾಥ ಪಾಟೀಲ

ಬೆಂಗಳೂರು: ಹೈದರಾಬಾದ್‌–ಕರ್ನಾಟಕಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಕಳೆದ ನಾಲ್ಕು ವರ್ಷಗಳಿಂದ ಉತ್ತರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿಯ ಅಮರನಾಥ ಪಾಟೀಲ ಗುರುವಾರ ವಿಧಾನಪರಿಷತ್ತಿನಲ್ಲಿ ಧರಣಿ ಮಾಡಿದರು.

‘ಹೈದರಾಬಾದ್‌–ಕರ್ನಾಟಕ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಅರೆ ಸರ್ಕಾರಿ ಕಾರ್ಯಾಲಯಗಳ ಬಗ್ಗೆ ಮಾಹಿತಿ ಕೊಡುವಂತೆ ನಾಲ್ಕು ವರ್ಷಗಳಿಂದಲೂ ಕೇಳುತ್ತಿದ್ದೇನೆ. ಪ್ರತಿ ಸಲವೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಉತ್ತರ ಬರುತ್ತಿದೆ’ ಎಂದು ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ‘ನಾಲ್ಕು ವರ್ಷದಿಂದ ಒಂದೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ, ಉತ್ತರ ಸಿಗುವುದಿಲ್ಲ. ಅಧಿಕಾರಿಗಳಿಗೆ ಉತ್ತರ ಕೊಡಲು ಸಾಧ್ಯವಾಗದಿದ್ದರೆ ರಾಜಿನಾಮೆ ಕೊಟ್ಟು ಹೋಗಲಿ’ ಎಂದು ಕಿಡಿ ಕಾರಿದರು.

‘ನಾಲ್ಕು ವರ್ಷಗಳಿಂದ ಕೇಳುತ್ತಿರುವ ಪ್ರಶ್ನೆಗೆ ಉತ್ತರ ಕೊಡದೇ ಇರುವುದು ತಪ್ಪು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್‌ ಧ್ವನಿಗೂಡಿಸಿದರು.

‘ಆದಷ್ಟು ಬೇಗನೆ ಉತ್ತರ ತರಿಸಿಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇದರಿಂದ ಸಮಾಧಾನಗೊಳ್ಳದೇ ಸೀದಾ ಮುಖ್ಯಮಂತ್ರಿ ಆಸನದತ್ತ ನಡೆದರು. ‘ನನ್ನ ಮೇಲೇರಿ ಬರುತ್ತಿದ್ದೀಯಾ’ ಎಂದು ಸಿದ್ದರಾಮಯ್ಯ ಗಾಬರಿ ವ್ಯಕ್ತಪಡಿಸಿದರು. ‘ಇಲ್ಲ ನಿಮ್ಮ ಮುಂದೆ ಧರಣಿ ಮಾಡುತ್ತೇನೆ’ ಎಂದು ಕುಳಿತರು. ಬಳಿಕ ಬಿಜೆಪಿಯ ಕೆ.ಬಿ.ಶಾಣಪ್ಪ ಧರಣಿ ಬಿಡುವಂತೆ ಮನವಿ ಮಾಡಿದರು.

91 ಪ್ರಶ್ನೆಗಳಿಗೆ 25 ಉತ್ತರ:

ಚುಕ್ಕೆ ಗುರುತ್ತಿಲ್ಲದ 91 ಪ್ರಶ್ನೆಗಳಲ್ಲಿ 25 ಕ್ಕೆ ಉತ್ತರ ನೀಡಲಾಗಿದೆ ಎಂದು ಸಭಾನಾಯಕ ಎಂ.ಆರ್‌. ಸೀತಾರಾಮ್‌ ಹೇಳಿದಾಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ನಿನ್ನೆಯೂ ಹೀಗೆಯೇ ಆಗಿತ್ತು. ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಕೆ.ಎಸ್‌.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಜಾಹಿರಾತುಗಳಿಗೆ ಮಾಡುತ್ತಿರುವ ಖರ್ಚಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಒಬ್ಬರಿಗೆ ಉತ್ತರ ಕೊಟ್ಟಿಲ್ಲ. ಅದಕ್ಕೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಮತ್ತೊಬ್ಬರು ಕೇಳಿದ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಯಲ್ಲಿ ಉತ್ತರ ನೀಡಲಾಗಿದೆ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶ್ನೆಗೆ ಉತ್ತರಗಳನ್ನು ಕೊಡುವುದಕ್ಕೆ ತಡ ಮಾಡುವುದು ಸರಿಯಲ್ಲ ಎಂದು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.