ಸೋಮವಾರ, ಮೇ 25, 2020
27 °C
ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡುತ್ತಿರುವ ಅವ್ಯವಹಾರ ಆಪಾದನೆ: ಸರ್ಕಾರದ ತಿರುಗೇಟು

ಕಾಂಗ್ರೆಸ್‌ನಿಂದ ಹಗರಣ ‘ಸೃಷ್ಟಿ’: ಜೇಟ್ಲಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ನಿಂದ ಹಗರಣ ‘ಸೃಷ್ಟಿ’: ಜೇಟ್ಲಿ ಆರೋಪ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ‘ಸೃಷ್ಟಿಸುವುದಕ್ಕಾಗಿ’ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಇದು ವಿರೋಧ ಪಕ್ಷದ ಹೊಸ ತಂತ್ರ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಹೇಳಿದ್ದಾರೆ.

ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಜೇಟ್ಲಿ, ಸೂಕ್ಷ್ಮವಾದ ರಕ್ಷಣಾ ಖರೀದಿಯ ಮೊತ್ತ ಎಷ್ಟು ಎಂದು ಕೇಳುವ ಮೂಲಕ ದೇಶದ ಭದ್ರತೆಯ ವಿಚಾರದಲ್ಲಿ ‘ರಾಜಿ’ ಮಾಡಿಕೊಳ್ಳುವಂತೆ ಕಾಂಗ್ರೆಸ್‌ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.

‘ದೇಶದ ಭದ್ರತಾ ಹಿತಾಸಕ್ತಿಯಿಂದಾಗಿ ರಕ್ಷಣಾ ಖರೀದಿಯ ನಿಖರ ಮೊತ್ತವನ್ನು ಬಹಿರಂಗಪಡಿಸಲಾಗುವುದಿಲ್ಲ. ಅಂದಾಜು ಮೊತ್ತವನ್ನು ಹೇಳಬಹುದು, ಆದರೆ ಅದನ್ನು ನಿಖರವಾಗಿ ಹೇಳಿದರೆ ಖರೀದಿಸಿದ ಶಸ್ತ್ರಾಸ್ತ್ರಗಳ ವಿವರಗಳೂ ಬಹಿರಂಗವಾಗಿಬಿಡುತ್ತದೆ’ ಎಂದು ಜೇಟ್ಲಿ ಹೇಳಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಪ್ರಣವ್‌ ಮುಖರ್ಜಿ ಮತ್ತು ಎ.ಕೆ. ಆಂಟನಿ ಅವರಿಂದ ಈ ಬಗ್ಗೆ ಪಾಠ ಹೇಳಿಸಿಕೊಳ್ಳಿ. ಅವರ ಕಾಲದಲ್ಲಿ ಆದ ರಕ್ಷಣಾ ಖರೀದಿಯ ವಿವರಗಳನ್ನು ಬಹಿರಂಗ ಮಾಡಿರಲಿಲ್ಲ ಎಂದು ಜೇಟ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಯಾರೂ ಹಗರಣ ಸೃಷ್ಟಿಸಲು ಯತ್ನಿಸುತ್ತಿಲ್ಲ. ಜನರ ಹಣವನ್ನು ಖರ್ಚು ಮಾಡಿದರೆ ಅದರ ವಿವರಗಳನ್ನು ಸಂಸತ್ತಿಗೆ ನೀಡುವ ಉತ್ತರಾದಾಯಿತ್ವ ಸರ್ಕಾರದ್ದು ಎಂದರು.

ರಫೇಲ್‌ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸುತ್ತಿರುವ ರಾಹುಲ್‌ ಗಾಂಧಿ ಅವರೂ ಮಾತನಾಡಲು ಬಯಸಿದರು. ಆದರೆ ಅವರಿಗೆ ಸ್ಪೀಕರ್‌ ಅವಕಾಶ ಕೊಡಲಿಲ್ಲ.

**

ಕಾಂಗ್ರೆಸ್‌–ಬಿಜೆಪಿ ಕಚ್ಚಾಟಕ್ಕೆ ‘ಶೂರ್ಪನಖಿ’ ಕಾರಣ

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರ ಬಗ್ಗೆ ತಾವು ನೀಡಿದ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಲ್ಲಿ ಗುರುವಾರ ಪಟ್ಟು ಹಿಡಿದರು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಸಭಾಪತಿ ಎಂ.ವೆಂಕಯ್ಯ ನಾಯ್ಡು ಪದೇ ಪದೇ ಮಾಡಿದ ಮನವಿಗೂ ಪ್ರತಿಭಟನಾನಿರತ ಸದಸ್ಯರು ಸ್ಪಂದಿಸದ ಕಾರಣ ಕಲಾಪವನ್ನು ಮಧ್ಯಾಹ್ನ 12ರವರೆಗೆ ಮುಂದೂಡಲಾಯಿತು.

ರಾಮಾಯಣ ಧಾರಾವಾಹಿಯ ವಿಡಿಯೊ ತುಣುಕನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದರು. ಶೂರ್ಪನಖಿ ಗಹಗಹಿಸಿ ನಗುವ ದೃಶ್ಯ ಅದರಲ್ಲಿತ್ತು. ಭಾರಿ ಟೀಕೆ ಮತ್ತು ಆಕ್ಷೇಪಗಳು ವ್ಯಕ್ತವಾದ ಕಾರಣ ಅವರು ತಮ್ಮ ಟ್ವೀಟ್ ಅಳಿಸಿಹಾಕಿದರು.

**

ಬುಧವಾರ ನಡೆದದ್ದು...

ಆಧಾರ್ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದ ಹಾಗೆಯೇ ಕಾಂಗ್ರೆಸ್ ಸದಸ್ಯೆ ರೇಣುಕಾ ಚೌಧರಿ ಗಹಗಹಿಸಿ ನಕ್ಕಿದ್ದರು. ರೇಣುಕಾ ಅವರ ನಗುವಿಗೆ ಸಭಾಪತಿ ವೆಂಕಯ್ಯ ನಾಯ್ಡು ಆಕ್ಷೇಪ ವ್ಯಕ್ತಪಡಿಸಿದರು. ನಂತರವೂ ರೇಣುಕಾ ತಮ್ಮ ನಗು ಮುಂದುವರಿಸಿದರು. ಆಗ ವೆಂಕಯ್ಯ ನಾಯ್ಡು ಕಿಡಿ ಕಾರಿದರು.

ಸದನದಲ್ಲಿ ಈ ರೀತಿ ನಗುವುದು ಸರಿಯಲ್ಲ. ನಿಮಗೇನಾಯಿತು? ನಿಮ್ಮಲ್ಲೇನಾದರೂ ತೊಂದರೆ ಇದೆಯೇ? ಹಾಗಿದ್ದರೆ ವೈದ್ಯರ ಬಳಿ ತೋರಿಸಿಕೊಳ್ಳಿ

–ಎಂ. ವೆಂಕಯ್ಯ ನಾಯ್ಡು, ರಾಜ್ಯಸಭೆ ಸಭಾಪತಿ

*

ಸಭಾಪತಿಗಳೇ ರೇಣುಕಾ ಅವರನ್ನು ತಡೆಯಬೇಡಿ. ರಾಮಾಯಣ ಧಾರಾವಾಹಿಯ ನಂತರ ಇಂತಹ ನಗು ನೋಡಲು ನಮಗೆ ಅವಕಾಶ ಸಿಗುತ್ತಿರುವುದು ಇದೇ ಮೊದಲು

–ನರೇಂದ್ರ ಮೋದಿ, ಪ್ರಧಾನಿ

**

ಗುರುವಾರದ ಬೆಳವಣಿಗೆ

ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ರಾಜ್ಯಸಭೆಯಲ್ಲಿ ಬುಧವಾರ ನಡೆದಿದ್ದ ಘಟನೆಯ ವಿಡಿಯೊ ತುಣುಕನ್ನು ಟ್ವೀಟ್ ಒಂದರಲ್ಲಿ ಪ್ರಕಟಿಸಿದರು. ‘ರೇಣುಕಾ ಚೌಧರಿ ಅವರ ನಗುವನ್ನು ಪ್ರಧಾನಿ ನರೇಂದ್ರ ಮೋದಿ ರಾಮಾಯಣದ ಯಾವ ಪಾತ್ರಕ್ಕೆ ಹೋಲಿಸಿದರು ಎಂಬುದನ್ನು ಊಹಿಸಿ’ ಎಂದು ವಿಡಿಯೊ ತುಣುಕಿನ ಜತೆ ಅವರು ಬರೆದಿದ್ದರು.

ರಾಮಾಯಣ ಧಾರಾವಾಹಿಯ ದೃಶ್ಯದ ತುಣುಕೊಂದನ್ನು ಮತ್ತೊಂದು ಟ್ವೀಟ್‌ನಲ್ಲಿ ಪ್ರಕಟಿಸಿದರು. ರಾಮ ಮತ್ತು ಸೀತೆ ಪಾತ್ರಧಾರಿಗಳ ಎದುರು ಶೂರ್ಪನಖಿ ಪಾತ್ರವು ಅಟ್ಟಹಾಸದಿಂದ ನಗುವ ದೃಶ್ಯ ಆ ವಿಡಿಯೊ ತುಣುಕಿನಲ್ಲಿ ಇತ್ತು. ‘ಯಾರೋ ನನಗೆ ಈ ವಿಡಿಯೊವನ್ನು ಕಳುಹಿಸಿದರು. ಗಹಗಹಿಸಿ ನಗುವುದು ರಾಮಾಯಣದ ಯಾವ ಪಾತ್ರ ಎಂಬುದನ್ನು ನೀವೇ ಕಂಡುಕೊಳ್ಳಿ’ ಎಂದು ಟ್ವೀಟ್‌ನಲ್ಲಿ ಅವರು ಹೇಳಿದ್ದರು. ಭಾರಿ ಆಕ್ರೋಶ ವ್ಯಕ್ತವಾದ ಕಾರಣ ಈ ಟ್ವೀಟ್ ಅನ್ನು ಅವರು ಅಳಿಸಿ ಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.