ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಸುಲಭ ಜಯದ ಭರವಸೆ

ಇಂಡಿಯನ್ ಸೂಪರ್ ಲೀಗ್: ಪ್ಲೇ ಆಫ್ ನಿಟ್ಟಿನಲ್ಲಿ ಎಫ್‌ಸಿ ಗೋವಾಗೆ ಮಹತ್ವದ ಪಂದ್ಯ
Last Updated 8 ಫೆಬ್ರುವರಿ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಿರಂತರ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿ ಹುಮ್ಮಸ್ಸಿನಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತೊಂದು ಜಯದ ಕನಸಿನೊಂದಿಗೆ ಶುಕ್ರವಾರ ತವರಿನಲ್ಲಿ ಕಣಕ್ಕೆ ಇಳಿಯಲಿದೆ.

ಎರಡು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಚೆನ್ನೈಯಿನ್‌ ಎಫ್‌ಸಿಯನ್ನು 3–1 ಗೋಲುಗಳಿಂದ ಮಣಿಸಿದ ಬಿಎಫ್‌ಸಿ ಪ್ಲೇ ಆಫ್‌ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ತಂಡದ ಮೇಲೆ ಈಗ ಒತ್ತಡವಿಲ್ಲ. ಹೀಗಾಗಿ ಕಂಠೀರವ ಕ್ರೀಡಾಂಗಣದಲ್ಲಿ ಚೆಟ್ರಿ ಬಳಗದವರು ಗೋವಾ ವಿರುದ್ಧ ಸುಲಭ ಜಯದ ನಿರೀಕ್ಷೆಯಲ್ಲಿದ್ದಾರೆ. ಅತ್ತ ಗೋವಾ ಎಫ್‌ಸಿ ಪ್ಲೇ ಆಫ್‌ ಕನಸು ಕಾಣಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕು.

14 ಪಂದ್ಯಗಳಲ್ಲಿ 10 ಜಯದೊಂದಿಗೆ ಬಿಎಫ್‌ಸಿ 30 ಪಾಯಿಂಟ್ ಗಳಿಸಿದೆ. ತಂಡ ಈಗ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಪುಣೆ ಸಿಟಿ ಎಫ್‌ಸಿಗೂ ಬಿಎಫ್‌ಸಿಗೂ ಐದು ಪಾಯಿಂಟ್‌ಗಳ ವ್ಯತ್ಯಾಸವಿದೆ. ಈ ತಂಡ ಕೂಡ 14 ಪಂದ್ಯಗಳನ್ನು ಆಡಿದೆ. 12 ಪಂದ್ಯಗಳಲ್ಲಿ 20 ಪಾಯಿಂಟ್ ಗಳಿಸಿರುವ ಗೋವಾ ಐದನೇ ಸ್ಥಾನದಲ್ಲಿದ್ದು ಶುಕ್ರವಾರ ಗೆದ್ದರೆ ಜೆಮ್‌ಶೆಡ್‌ಪುರ ಎಫ್‌ಸಿಯನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಏರಲಿದೆ.

ಆದರೆ ಉತ್ತಮ ಲಯದಲ್ಲಿರುವ ಬಿಎಫ್‌ಸಿಯನ್ನು ಅದರ ತವರಿನಲ್ಲೇ ಮಣಿಸುವುದು ಸರ್ಜಿಯೊ ಲೊಬೆರಾ ಪಡೆಗೆ ಸುಲಭವಲ್ಲ. ಕಳೆದ ತಿಂಗಳಲ್ಲಿ ಡೆಲ್ಲಿ ಡೈನಾಮೋಸ್ ವಿರುದ್ಧ ಸೋತ ನಂತರ ಬಿಎಫ್‌ಸಿ ಸೋಲು ಅನುಭವಿಸಿಲ್ಲ. ಇದು ಕೋಚ್ ಆಲ್ಬರ್ಟ್ ರೋಕಾ ಅವರಲ್ಲೂ ಭರವಸೆ ತುಂಬಿದೆ.

ಗೋವಾ ತಂಡ ಕಳೆದ ಎರಡು ಪಂದ್ಯಗಳಲ್ಲಿ ಹಿನ್ನಡೆ ಕಂಡಿದೆ. ಮುಂಬೈ ಸಿಟಿ ವಿರುದ್ಧ ಸೋತಿರುವ ತಂಡ ನಂತರ ನಾರ್ತ್‌ ಈಸ್ಟ್ ಯುನೈಟೆಡ್ ಎದುರು ಡ್ರಾ ಮಾಡಿಕೊಂಡಿತ್ತು. ತಂಡದ ರಕ್ಷಣಾ ವಿಭಾಗ ನಿರಂತರ ವೈಫಲ್ಯ ಕಾಣುತ್ತಿದೆ. ಹೀಗಾಗಿ ಸುನಿಲ್‌ ಚೆಟ್ರಿ, ಮಿಕು ಮುಂತಾದ ಆಕ್ರಮಣಕಾರಿ ಆಟಗಾರರನ್ನು ತಡೆಯಲು ತಂಡಕ್ಕೆ ಸಾಧ್ಯವೇ ಎಂಬುದು ಕುತೂಹಲದ ಪ್ರಶ್ನೆ.

ಸೋಲಿಗೆ ಸೇಡು ತೀರಿಸುವ ನಿರೀಕ್ಷೆ: ಗೋವಾದಲ್ಲಿ ಮುಖಾಮುಖಿಯಾದಾಗ ಬಿಎಫ್‌ಸಿ 3–4ರಿಂದ ಸೋತಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳುವುದಕ್ಕೂ ಬೆಂಗಳೂರು ತಂಡಕ್ಕೆ ಈಗ ಉತ್ತಮ ಅವಕಾಶ ಒದಗಿದೆ.

‘ಈ ಹಿಂದೆ ಗೋವಾ ತಂಡವನ್ನು ಎದುರಿಸಿದಾಗ ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ನಮಗೆ ಸಾಧ್ಯವಾಗಿತ್ತು. ಆದರೆ ಅದನ್ನು ಪರಿಣಾಮಕಾರಿಯಾಗಿ ಗುರಿ ಮುಟ್ಟಿಸಲು ಆಗಲಿಲ್ಲ. ಆದ್ದರಿಂದ ತಂಡ ಸೋತಿತ್ತು. ಗೋವಾ ಎಫ್‌ಸಿ ಈಗಲೂ ಉತ್ತಮ ತಂಡ ಎಂಬ ಅರಿವು ನಮಗಿದೆ. ಹೀಗಾಗಿ ನಾಳೆ ನಾಜೂಕಿನ ಹೆಜ್ಜೆ ಇರಿಸಲಿದ್ದೇವೆ’ ಎಂದು ಆಲ್ಬರ್ಟ್‌ ರೋಕಾ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಆ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ ನಾಳೆ ಕಣಕ್ಕೆ ಇಳಿಯಲಿದೆ ಎಂಬ ಎಚ್ಚರಿಕೆಯೂ ನಮ್ಮ ಮುಂದೆ ಇದೆ’ ಎಂದು ಅವರು ಹೇಳಿದರು.

ಬಿಎಫ್‌ಸಿ ಕೆಲವು ದಿನಗಳಿಂದ ಬಿಡುವಿಲ್ಲದೆ ಪಂದ್ಯಗಳನ್ನು ಆಡುತ್ತಿದೆ. ಹೀಗಾಗಿ ಶುಕ್ರವಾರ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ‘ಐಎಸ್‌ಎಲ್‌ ಜೊತೆ ಎಎಫ್‌ಸಿ ಪಂದ್ಯವನ್ನು ಕೂಡ ತಂಡ ಆಡಬೇಕಾಗಿದೆ. ಆದ್ದರಿಂದ ಕೆಲವು ಬದಲಾವಣೆಗಳನ್ನು ಮಾಡಬೇಕಾದ ಅನಿವಾರ್ಯ ಸ್ಥಿತಿ ಒದಗಿಸಿದೆ’ ಎಂದು ರೋಕಾ ಹೇಳಿದರು.

’ನಮ್ಮ ತಂಡ ಸಾಂಘಿಕ ಪ್ರಯತ್ನ ಮಾಡುತ್ತಿದೆ. ನಿರ್ದಿಷ್ಟ ಯೋಜನೆಗಳನ್ನು ಕಣದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ತಂಡ ಇಲ್ಲಿಯ ವರೆಗೆ ಯಶಸ್ವಿಯಾಗಿದೆ. ಅದೇ ತಂತ್ರದೊಂದಿಗೆ ನಾಳೆಯೂ ಆಡಲಿದೆ’ ಎಂದು ಗೋವಾ ಎಫ್‌ಸಿ ಸಹಾಯಕ ಕೊಚ್‌ ಡೆರಿಕ್ ಪೆರೇರ ತಿಳಿಸಿದರು.

ಪಂದ್ಯ ಆರಂಭ: ರಾತ್ರಿ 8.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT