ಬುಧವಾರ, ಡಿಸೆಂಬರ್ 11, 2019
24 °C

ಕಾಮಗಾರಿ ಅವೈಜ್ಞಾನಿಕ: ಗ್ರಾಮಸ್ಥರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಮಗಾರಿ ಅವೈಜ್ಞಾನಿಕ: ಗ್ರಾಮಸ್ಥರ ಆರೋಪ

ಪಡುಬಿದ್ರಿ: ನಿಸರ್ಗ ರಮಣೀಯವಾದ ಪಡುಬಿದ್ರಿ-ಹೆಜಮಾಡಿ ಕಡಲ ಕಿನಾರೆಯಲ್ಲಿ ಹೆಜಮಾಡಿಯಿಂದ ಪಡುಬಿದ್ರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಮತ್ತು ಸೇತುವೆ ಕಾಮಗಾರಿ ಪೂರ್ಣಗೊಂಡರೆ ಹೆಜಮಾಡಿ-ಪಡುಬಿದ್ರಿ ಜನರಿಗೆ ಅನುಕೂಲವಾಗಲಿದೆ.

ಕಾಮಿನಿ ನದಿಯು ಸಮುದ್ರ ಸೇರುವ ಮುಟ್ಟಳಿವೆ ಪ್ರದೇಶದಲ್ಲಿ 65 ಮೀಟರ್ ಉದ್ದದ ಸೇತುವೆ ಹಾಗೂ 190 ಮೀಟರ್ ಉದ್ದಕ್ಕೆ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿದೆ. ಮೀನುಗಾರಿಕಾ ಇಲಾಖೆ ಹಾಗೂ ನಬಾರ್ಡ್‌ನ ₹80 ಲಕ್ಷ ಅನುದಾನದೊಂದಿಗೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ನಿರ್ಮಾಣದಿಂದ ಸುತ್ತು ಬಳಸಿ ಸಂಚಾರ ಮಾಡುತ್ತಿದ್ದ ಪಡುಬಿದ್ರಿ ಮತ್ತು ಹೆಜಮಾಡಿ ಗ್ರಾಮಸ್ಥರಿಗೆ ತುಂಬ ಅನುಕೂಲವಾಗಲಿದೆ. ಆದರೆ, ಇನ್ನೊಂದೆಡೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳೂ ಕೇಳಿಬರಲಾರಂಭಿಸಿವೆ.

ಕಾಮಗಾರಿ ಅವೈಜ್ಞಾನಿಕ: ಮಳೆಗಾಲದಲ್ಲಿ ಕಾಮಿನಿ ನದಿ ಉಕ್ಕಿದಾಗ ನೀರಿನ ಪ್ರವಾಹದ ವೇಗಕ್ಕೆ ಅನುಗುಣವಾಗಿ ಇಲ್ಲಿನ ಸಾರ್ವಜನಿಕರು ಮರಳಿನ ದಿಬ್ಬಗಳನ್ನು ತೆರವು ಮಾಡಿ ತೋಡು ನಿರ್ಮಿಸಿ ಸಮುದ್ರಕ್ಕೆ ನೀರು ಹರಿಯಲು ದಾರಿ ಮಾಡುತ್ತಿದ್ದರು. ಇದರಿಂದ ಈ ಭಾಗದ ಜನರಿಗೆ ಯಾವುದೇ ತೊಂದರೆ ಉಂಟಾಗುತ್ತಿರಲಿಲ್ಲ. ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಅಧಿಕಾರಿಗಳು ಏಕಾಏಕಿ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಿದ್ದಾರೆ. ಅದೂ ಕೂಡ ನೀರಿನ ಮೇಲ್ಮಟ್ಟದಲ್ಲಿಯೇ ತೂಬು ರಚಿಸಿ 65 ಮೀಟರ್ ಉದ್ದದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸುತ್ತಾರೆ ಸ್ಥಳೀಯರು.

‘ರಸ್ತೆ ನಿರ್ಮಾಣವು ಅವೈಜ್ಞಾನಿಕವಾಗಿದೆ. ಮಳೆಗಾಲದಲ್ಲಿ ರಭಸದಿಂದ ಹರಿಯುವ ನದಿ ನೀರಿಗೆ ತಡೆ ಉಂಟಾಗಿ ರಸ್ತೆ ಅಥವಾ ಸೇತುವೆಯೇ ಕೊಚ್ಚಿ ಹೋಗಬಹುದು. ಮಳೆಗಾಲದಲ್ಲಿ ನದಿಯ ನೀರು ಉಕ್ಕಿದರೆ ಎರಡೂ ಗ್ರಾಮಗಳಿಗೂ ಮುಳುಗಡೆಯ ಭೀತಿ ಎದುರಾಗಬಹುದು. ಹಿಂದೆಯೂ ಈ ಭಾಗದಲ್ಲಿ ನದಿ ಉಕ್ಕಿ ಹರಿದ ಪರಿಣಾಮ ವ್ಯಾಯಾಮ ಶಾಲೆ ಹಾಗೂ ಮನೆಗೆ ತೊಂದರೆಗೀಡಾಗಿದ್ದನ್ನು ನೆನಪಿಸಿಕೊಳ್ಳಬಹುದು. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೇ ಕಾಮಗಾರಿಯನ್ನು ಮಾಡಲಾಗಿದೆ’ ಎಂದು ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧಾಕರ ಕರ್ಕೇರ ದೂರಿದರು.

‘ಮುಟ್ಟಳಿವೆ ಪ್ರದೇಶದ ಕಾಮಗಾರಿಯಿಂದ ಜನರಿಗೆ ತೊಂದರೆಯಾಗುವ ಬಗ್ಗೆ ಜಿಲ್ಲಾ ಪಂಚಾಯಿತಿಯ ಗಮನಕ್ಕೂ ತರಲಾಗಿದೆ. ಎಂಜಿನಿಯರ್‌ಗಳು ಬಂದು ಸ್ಥಳ ಪರಿಶೀಲಿಸಿ ಮಳೆಗಾಲದಲ್ಲಿಯೂ ಏನು ತೊಂದರೆಯಿಲ್ಲ. ಕಾಮಗಾರಿಯ ವೈಜ್ಞಾನಿಕವಾಗಿದೆ ಎಂದು ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ ತಿಳಿಸಿದರು.

500 ಮೀಟರ್ ಕಾಂಕ್ರೀಟ್‌ ರಸ್ತೆ; 151 ಗಾಳಿಮರ ತೆರವು

ಮುಟ್ಟಳಿವೆ ಪ್ರದೇಶದಲ್ಲಿ ಮಣ್ಣು ತುಂಬಿಸಿ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳ್ಳಲಿದ್ದು, ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ. ಈ ರಸ್ತೆ ಪಡುಬಿದ್ರಿಯ ಸುಂದರ ಕಡಲ ಕಿನಾರೆಯ ಮೂಲಕ ಹಾದು ಹೋಗಲಿದ್ದು, ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ‘ಮುಂದಿನ ಹಂತದಲ್ಲಿ ಸೇತುವೆಯಿಂದ ಪಡುಬಿದ್ರಿ ಭಾಗದವರೆಗಿನ ಸುಮಾರು 500 ಮೀಟರ್ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿ ಅಭಿವೃದ್ಧಿ ಮಾಡುವ ಯೋಜನೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಸಹಾಯಕ ಎಂಜಿನಿಯರ್‌ ಜಯರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪಡುಬಿದ್ರಿ-ಹೆಜಮಾಡಿ ರಸ್ತೆ ನಿರ್ಮಾಣದಿಂದ ಪಡುಬಿದ್ರಿ ಭಾಗದಲ್ಲಿರುವ ಎಂಡ್ ಪಾಯಿಂಟ್ ಪರಿಸರದಲ್ಲಿ 9 ಮೀಟರ್ ಪ್ರದೇಶದಲ್ಲಿರುವ ಸುಮಾರು 151 ಗಾಳಿ ಮರಗಳನ್ನು ತೆರವುಗೊಳಿಸಲಾಗುವುದು. ಈಗಾಗಲೇ ಮರಗಳನ್ನು ಗುರುತಿಸುವ ಕೆಲಸ ಪೂರ್ಣಗೊಂಡಿದೆ. ಅಂತಿಮ ಆದೇಶ ತಲುಪಿದ ತಕ್ಷಣ ಮರಗಳನ್ನು ಕಡಿದು ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ತಿಳಿಸಿದರು.

ಪ್ರತಿಕ್ರಿಯಿಸಿ (+)