ಪಕ್ಷದೊಳಗಿನ ಸ್ಪರ್ಧೆ ಗೆಲ್ಲುವುದೆ ಮೊದಲ ಸವಾಲು!

7

ಪಕ್ಷದೊಳಗಿನ ಸ್ಪರ್ಧೆ ಗೆಲ್ಲುವುದೆ ಮೊದಲ ಸವಾಲು!

Published:
Updated:
ಪಕ್ಷದೊಳಗಿನ ಸ್ಪರ್ಧೆ ಗೆಲ್ಲುವುದೆ ಮೊದಲ ಸವಾಲು!

ರಾಯಚೂರು: ವಿಧಾನಸಭೆ ಚುನಾವಣೆಗೆ ಟಿಕೆಟ್‌ ದೊರಕಿಸಿಕೊಳ್ಳಲು ಕಾಂಗ್ರೆಸ್‌ ಪಕ್ಷ ಹಾಗೂ ಬಿಜೆಪಿ ಮುಖಂಡರ ನಡುವೆ ಪೈಪೋಟಿ ತೀವ್ರವಾಗಿದ್ದು, ಟಿಕೆಟ್‌ ಹಂಚಿಕೆಯ ಬಳಿಕ ಕೆಲವರು ಅಯಾ ಪಕ್ಷದ ವಿರುದ್ಧವೇ ಸಿಡಿದೇಳುವ ಲಕ್ಷಣಗಳು ನಿಚ್ಚಳವಾಗಿವೆ. ರಾಷ್ಟ್ರೀಯ ಪಕ್ಷಗಳ ನಾಯಕರೆಲ್ಲ ಕೊನೆಗಳಿಗೆಯಲ್ಲಿ ಜೆಡಿಎಸ್‌ ಟಿಕೆಟ್‌ ಪಡೆಯಲು ಪ್ರಯತ್ನಿಸುವ ಸಾಧ್ಯತೆಯೂ ಇದೆ.

ರಾಯಚೂರು ನಗರ ಕ್ಷೇತ್ರಕ್ಕೆ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡುವ ವಾತಾವರಣ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಕಡೆಯಲ್ಲೂ ಇಲ್ಲ. ಟಿಕೆಟ್‌ ಗಿಟ್ಟಿಸಲು ಕಾಂಗ್ರೆಸ್‌ ನಾಯಕರು ನಡೆಸುತ್ತಿರುವ ರಾಜಕೀಯ ಲೆಕ್ಕಾಚಾರ ಗುಟ್ಟಾಗಿ ಉಳಿದಿಲ್ಲ. ಜಿಲ್ಲಾ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿಯೆ ಕೆಲವರು ಅಸಮಾಧಾನ ಹೊರಹಾಕುತ್ತಾ ಬಂದಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಬೆಂಬಲದ ಒಂದು ಬಣ ಹಾಗೂ ಸೈಯದ್‌ ಯಾಸೀನ್‌ ಬೆಂಬಲಿಸುವ ಇನ್ನೊಂದು ಬಣಗಳು ನಿರ್ಮಾಣವಾಗಿವೆ.

ರಾಯಚೂರು ನಗರ ಕ್ಷೇತ್ರದಲ್ಲಿ ಎನ್‌.ಎಸ್‌.ಬೋಸರಾಜು ಅವರು ಪುತ್ರ ರವಿ ಬೋಸರಾಜು ಅವರನ್ನು ಚುನಾವಣೆಗೆ ನಿಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ ಎನ್ನುವ ಸಂಗತಿ ಆಧರಿಸಿ, ಇನ್ನೊಂದು ಬಣದವರು ಟಿಕೆಟ್‌ ಪಡೆಯುವುದಕ್ಕಾಗಿ ಸಜ್ಜಾಗಿ ನಿಂತಿದ್ದಾರೆ. ಕ್ಷೇತ್ರದಲ್ಲಿ ಶೇ 30ರಷ್ಟು ಮುಸ್ಲಿಂ ಜನಸಂಖ್ಯೆ ಇರುವುದರಿಂದ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಕೊಡಬೇಕು ಎನ್ನುವ ಒತ್ತಾಸೆಯೊಂದಿಗೆ ಮಾಜಿ ಶಾಸಕ ಸೈಯದ್‌ ಯಾಸಿನ್‌ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಮುಖಂಡರಾದ ವಸಂತಕುಮಾರ, ಎಂ.ಕೆ.ಬಾಬರ್‌ ಇವರನ್ನು ಬೆಂಬಲಿಸುತ್ತಿದ್ದಾರೆ.

ಟಿಕೆಟ್‌ ಹಂಚಿಕೆ ಪಕ್ಷದೊಳಗಿನ ಆಂತರಿಕ ನಿರ್ಧಾರ. ಪಕ್ಷದಲ್ಲಿ ಶಿಸ್ತು ಕಾಯ್ದುಕೊಳ್ಳಬೇಕು ಎನ್ನುವುದನ್ನು ಪ್ರತಿಪಾದಿಸುತ್ತಾ ಬಂದಿರುವ ಎನ್‌.ಎಸ್‌.ಬೋಸರಾಜು ಅವರೊಂದಿಗೆ ಸಂಸದ ಬಿ.ವಿ.ನಾಯಕ, ಮುಖಂಡರಾದ ಅಸ್ಲಂಪಾಷಾ, ಅಬ್ದುಲ್‌ ಕರೀಂ ಮತ್ತಿತರರು ಇದ್ದಾರೆ. ಟಿಕೆಟ್‌ ಹಂಚಿಕೆಯ ವಿಚಾರವು ಕಾಂಗ್ರೆಸ್‌ ಮುಖಂಡರಲ್ಲಿ ಭಿನ್ನಮತ ಸೃಷ್ಟಿಸುವುದು ಎದ್ದು ಕಾಣುತ್ತಿದೆ.

ಡಜನ್‌ ನಾಯಕರು: ಬಿಜೆಪಿ ಟಿಕೆಟ್‌ಗೆ ಒಂದು ಡಜನ್‌ ಆಕಾಂಕ್ಷಿಗಳಿದ್ದಾರೆ ಎನ್ನುವುದು ರಾಯಚೂರು ನಗರ ಕ್ಷೇತ್ರದಲ್ಲಿ ಮೊದಲಿನಿಂದಲೂ ಚರ್ಚೆಯಲ್ಲಿರುವ ಸುದ್ದಿ. ಇದೀಗ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಮಾಜಿ ಶಾಸಕ ಡಾ.ಶಿವರಾಜ ಪಾಟೀಲ ಅವರು ಡಜನ್‌ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದ್ದಾರೆ. ಟಿಕೆಟ್‌ ಪಡೆದು ಮರು ಗೆಲುವು ಸಾಧಿಸಬೇಕೆನ್ನುವ ಏಕೈಕ ಗುರಿ ಇಟ್ಟುಕೊಂಡು ಡಾ.ಶಿವರಾಜ ಪಾಟೀಲ ಅವರು ಬಿಜೆಪಿಗೆ ಬಂದಿದ್ದಾರೆ. ಡಜನ್‌ ಆಕಾಂಕ್ಷಿಗಳಿಗೆಲ್ಲ ‘ಬಿಸಿತುಪ್ಪ’ವಾಗಿ ಪರಿಣಮಿಸಿದ್ದಾರೆ.

2004ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ಎ.ಪಾಪಾರೆಡ್ಡಿ ಅವರ ಬಗ್ಗೆ ಒಳ್ಳೆಯ ಜನಾಭಿಪ್ರಾಯವಿದ್ದು, ಈ ಕಾರಣದಿಂದ ಮತ್ತೊಮ್ಮೆ ಚುನಾವಣೆಗೆ ನಿಲ್ಲಬೇಕು ಎನ್ನುವುದು ಆಕಾಂಕ್ಷೆಯನ್ನು ಅವರು ಹೊಂದಿದ್ದಾರೆ. ಶತಾಯಗತಾಯ ಈ ಸಲ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಉದ್ಯಮಿ ಈ.ಆಂಜನೇಯ ಸಜ್ಜಾಗಿದ್ದಾರೆ. ಬಿಜೆಪಿಯಿಂದ ಟಿಕೆಟ್‌ ಕೊಟ್ಟರೆ ಗೆಲುವು ಸಾಧಿಸುವುದು ನಿಶ್ಚಿತ ಎನ್ನುವ ಲೆಕ್ಕಾಚಾರ ಇಟ್ಟುಕೊಂಡು ಡಾ. ಬಸನಗೌಡ ಪಾಟೀಲ, ಬಸವರಾಜ ಕಳಸ, ಕಡಗೋಳ ಆಂಜನೇಯ, ದೊಡ್ಡ ಮಲ್ಲೇಶಪ್ಪ, ಆರ್‌.ಕೆ. ಅಮರೇಶ, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್‌, ಶರಣಪ್ಪಗೌಡ, ತ್ರಿವಿಕ್ರಮ ಜೋಷಿ ಅವರು ಪಕ್ಷದ ವರಿಷ್ಠರ ಕಡೆಗೆ ನೋಡುತ್ತಿದ್ದಾರೆ.

ಡಾ.ಶಿವರಾಜ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್‌ ಖಚಿತವಾದರೆ, ಡಜನ್‌ ಆಕಾಂಕ್ಷಿಗಳಲ್ಲಿ ಕೆಲವರು ಪಕ್ಷದಿಂದ ಹೊರಹೋಗುವ ಸಾಧ್ಯತೆ ಹೆಚ್ಚಾಗಿದೆ. ಪ್ರಮುಖವಾಗಿ ಈ.ಆಂಜನೇಯ, ಡಾ.ಬಸನಗೌಡ ಪಾಟೀಲ ಅವರು ಬೇರೆ ಪಕ್ಷಗಳ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ.

ಜೆಡಿಎಸ್‌ ಟಿಕೆಟ್‌ಗೆ ಬೇಡಿಕೆ

2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಡಾ.ಶಿವರಾಜ ಪಾಟೀಲ ಗೆಲುವು ಸಾಧಿಸಿದ್ದರು. ಈಗ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಹೋಗಿದ್ದಾರೆ. ಸದ್ಯಕ್ಕೆ ಜೆಡಿಎಸ್‌ ಟಿಕೆಟ್‌ಗೆ ಯಾವುದೇ ಒತ್ತಡವಿಲ್ಲ. ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಕಾಂಕ್ಷೆಯೊಂದಿಗೆ ಮಹಾಂತೇಶಗೌಡ ಪಾಟೀಲ ಅತ್ತನೂರು ಅವರು ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ ವರಿಷ್ಠರು ಟಿಕೆಟ್‌ ಖಚಿತಗೊಳಿಸಿಲ್ಲ. ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಕೆಲವು ಮುಖಂಡರು ಹೊರಬಂದು ಜೆಡಿಎಸ್‌ ಟಿಕೆಟ್‌ಗೆ ದಂಬಾಲು ಬೀಳಬಹುದು. ಜೆಡಿಎಸ್‌ ಟಿಕೆಟ್‌ ಯಾರಿಗೆ ಕೊಡಲಿದೆ ಎನ್ನುವ ಸಂಗತಿಯು ಚರ್ಚೆ ಆಗುತ್ತಿದೆ.

14 ಗ್ರಾಮಗಳು

ರಾಯಚೂರು ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳು ಹಾಗೂ ತಾಲ್ಲೂಕಿನ 14 ಗ್ರಾಮಗಳು ರಾಯಚೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಹೊಸ ಮಲಿಯಾಬಾದ್‌, ಹಳೇ ಮಲಿಯಾಬಾದ್‌, ಮಿಟ್ಟಿ ಮಲ್ಕಾಪುರ, ದೇವನಪಲ್ಲಿ, ಬಿಜನಗೇರಾ, ಬೋಳಮಾನದೊಡ್ಡಿ, ಸಿದ್ರಾಂಪುರ, ರಾಜಲಬಂಡಾ, ಬಾವಿದೊಡ್ಡಿ, ಗೌಸನಗರ, ಕುರುಬದೊಡ್ಡಿ, ಸಂಕನೂರ ಹಾಗೂ ಏಗನೂರು ಗ್ರಾಮಗಳು ನಗರ ಕ್ಷೇತ್ರದಲ್ಲಿವೆ.

ರಾಯಚೂರು ನಗರ ಕ್ಷೇತ್ರ (ಸಾಮಾನ್ಯ)

ಒಟ್ಟು ಮತದಾರರು 1,85,053 (2013 ಚುನಾವಣೆ)

2013ರಲ್ಲಿ ಮತದಾನ ನಡೆದ ಪ್ರಮಾಣ ಶೇ 54

ಶಾಸಕ ಡಾ.ಶಿವರಾಜ ಪಾಟೀಲ ಪಡೆದಿದ್ದ ಮತ ಪ್ರಮಾಣ ಶೇ 46

ಸೈಯದ್‌ ಯಾಸೀನ್‌ ಪಡೆದಿದ್ದ ಮತ ಪ್ರಮಾಣ ಶೇ 38

ರಾಯಚೂರು ನಗರದ ಜನಸಂಖ್ಯೆ ಒಟ್ಟು 2,34,073 (2011ರ ಜನಗಣತಿ)

ಅಲ್ಪಸಂಖ್ಯಾತರ ಜನಸಂಖ್ಯೆ ಪ್ರಮಾಣ ಶೇ 30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry