ಗ್ರಾಮದೇವಿಯರಿಗೆ ಭಕ್ತರ ಸೇವೆಗೆ ಚಾಲನೆ

7

ಗ್ರಾಮದೇವಿಯರಿಗೆ ಭಕ್ತರ ಸೇವೆಗೆ ಚಾಲನೆ

Published:
Updated:

ಯಲ್ಲಾಪುರ: ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ದೇವಿ ಮೈದಾನದಲ್ಲಿ ನಿರ್ಮಿಸಿರುವ ಗದ್ದುಗೆಯಲ್ಲಿ ವಿರಾಜಮಾನರಾಗಿರುವ ಗ್ರಾಮದೇವಿಯರಿಗೆ ಗುರುವಾರ ಸೇವಾ ಕಾರ್ಯಗಳು ಪ್ರಾರಂಭಗೊಂಡು ಭಕ್ತರ ಸೇವೆಗಳಿಗೆ ಚಾಲನೆ ದೊರೆಯಿತು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯರ ದರ್ಶನ ಪಡೆದು ಹಣ್ಣು–ಕಾಯಿ, ಉಡಿ ಸೇವೆ ಸಲ್ಲಿಸಿದರು. ಜಾತ್ರೆಯ ಗದ್ದುಗೆಗೆ ಸೋಂದಾ ಸ್ವರ್ಣವಲ್ಲಿ ಪೀಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ದೇವಿಯರ ದರ್ಶನ ಪಡೆದರು.

ಜಾತ್ರಾ ಮಂಟಪ ಭಕ್ತರಿಂದ ತುಂಬಿ ತುಳುಕುತ್ತಿದ್ದು, ಇಲ್ಲಿ ಯಾವುದೇ ಗೊಂದಲ ಉಂಟಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ಉಡಿಯನ್ನು ದೇವಸ್ಥಾನದಿಂದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಉಡಿ ಪಡೆದುಕೊಂಡರೆ ದೇವಸ್ಥಾನಕ್ಕೆ ಹೆಚ್ಚಿನ ಆದಾಯ ದೊರೆಯುತ್ತದೆ. ಆದ್ದರಿಂದ ಅಲ್ಲಿಯೇ ಉಡಿ ಪಡೆದುಕೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.

ದೇವಿಯರ ಪೂಜೆ ಸಲ್ಲಿಸಲು ಬಂದ ಭಕ್ತರಿಗೆ ಸತ್ಯಸಾಯಿ ಸೇವಾ ಸಮಿತಿಯಿಂದ ಪಾನಕ, ಎಳನೀರು ವಿತರಿಸಲಾಯಿತು. ಜಾತ್ರಾ ಗದ್ದುಗೆಯ ಮುಖ್ಯ ಪ್ರವೇಶದ್ವಾರದ ಎರಡು ಕಡೆಗಳಲ್ಲಿ ಅಳವಡಿಸುವ ರೋಬೋಟ್ ಆನೆಗಳು ಮಂಟಪದ ವಿಶೇಷ ಆಕರ್ಷಣೆಯಾಗಿವೆ. ಆನೆಗಳ ಕೂಗು, ಚಲನವಲನ ಜನರನ್ನು, ಅದರಲ್ಲೂ ಮಕ್ಕಳನ್ನು ಸೆಳೆಯುತ್ತಿವೆ.

ಇನ್ನೂ ತೆರೆದುಕೊಳ್ಳದ ಜಾತ್ರೆ: ಜಾತ್ರಾ ಮಹೋತ್ಸವ ಬುಧವಾರವೇ ಆರಂಭವಾಗಿದ್ದರೂ ನಿರೀಕ್ಷಿತ ಜನಸಾಗರ ಹರಿದು ಬಂದಿಲ್ಲ. ಜಾತ್ರೆಯ ಮೆರವಣಿಗೆಯ ಸಂದರ್ಭದಲ್ಲಿ ಸುಮಾರು 50 ಸಾವಿರ ಜನರು ಭೇಟಿ ನೀಡಿ ವೈಭವವನ್ನು ಕಣ್ತುಂಬಿಕೊಂಡಿದ್ದರು. ಅದರ ಹೊರತಾಗಿ ದೇವಿಯ ಪ್ರತಿಷ್ಠಾಪನೆಯ ನಂತರ ಜನಸಾಗರ ಕರಗಿ ಹೋಗಿ ಜಾತ್ರಾ ಪೇಟೆಯಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು.

ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಕೆಲವೇ ಕ್ರೀಡೆಗಳು ಪ್ರಾರಂಭವಾಗಿವೆ. ಉಳಿದವು ಇನ್ನೂ ಸಿದ್ಧತೆಯ ಹಂತದಲ್ಲೇ ಇರುವುದು, ಹೊರಗಿನಿಂದ ಬಂದ ಅಂಗಡಿ ಮುಂಗಟ್ಟುಗಳಲ್ಲಿ ಸಾಮಗ್ರಿಯನ್ನು ಸರಿಯಾಗಿ ಜೋಡಿಸದೇ ಇರುವುದು ಕಂಡು ಬಂತು. ಶುಕ್ರವಾರದಿಂದ ಜಾತ್ರಾ ಪೇಟೆ ರಂಗೇರಿಸಿಕೊಂಡು ಜನರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಅನ್ನ ಸಂತರ್ಪಣೆ ಪ್ರಾರಂಭ: ದಾನಿಗಳ ನೆರವಿನಿಂದ ಅರಣ್ಯ ಇಲಾಖೆಯ ಕಟ್ಟಿಗೆ ಡಿಪೊದ ಆವರಣದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಪ್ರಾರಂಭಗೊಂಡಿದೆ. ಶಿವರಾತ್ರಿ ಹಾಗೂ ಜಾತ್ರೆಯ ಕೊನೆಯ ದಿನ ಹೊರತುಪಡಿಸಿ ಇನ್ನೂ ಐದು ದಿನ ಮಧ್ಯಾಹ್ನ 12.30ರಿಂದ 3ರವರೆಗೆ ಅನ್ನ ಪ್ರಸಾದ ವಿತರಣೆಯಾಗಲಿದೆ. ಬುಧವಾರ ಸುಮಾರು ಮೂರು ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದು, ಫೆ.10ರಿಂದ ಐದು ಸಾವಿರ ಜನರ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry