ಭಾನುವಾರ, ಡಿಸೆಂಬರ್ 8, 2019
25 °C

ಬಿಸಿಯೂಟ ಪ್ರತಿಭಟನೆ; ಸೌಟು ಹಿಡಿದ ಶಿಕ್ಷಕರು, ಸಿಬ್ಬಂದಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಯೂಟ ಪ್ರತಿಭಟನೆ; ಸೌಟು ಹಿಡಿದ ಶಿಕ್ಷಕರು, ಸಿಬ್ಬಂದಿ !

ಚಿತ್ರದುರ್ಗ: ಬಿಸಿಯೂಟ ತಯಾರಕರು ಮತ್ತು ಸಹಾಯಕರು ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆಗಾಗಿ ಬೆಂಗಳೂರಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಗುರುವಾರ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ, ಸಿಬ್ಬಂದಿಯವರೇ ಅಡುಗೆ ಮಾಡಲು ನಿಲ್ಲಬೇಕಾಯಿತು.

ಬಿಸಿಯೂಟ ತಯಾರಕರ ಗೈರು ಹಾಜರಿಯಿಂದ ನಗರದ ಕೆಲವು ಶಾಲೆಗಳಲ್ಲಿ ಪರದಾಟವಾಯಿತು. ಒಂದಷ್ಟು ಶಾಲೆಗಳಲ್ಲಿರುವ ಸಿಬ್ಬಂದಿಗೆ ಪ್ರತಿಭಟನೆ ವಿಚಾರ ಗೊತ್ತಿರದ

ಕಾರಣ ಅವರೆಲ್ಲ ಕೆಲಸಕ್ಕೆ ಹಾಜರಾಗಿದ್ದರು. ಇನ್ನು ಕೆಲವು ಕಡೆ ಇಬ್ಬರು ಅಡುಗೆಯವರು ಹಾಜರಾಗಿ, ಉಳಿದವರು ಪ್ರತಿಭಟನೆಗೆ ಹೋಗಿದ್ದರು. ಹಾಗಾಗಿ ಅಂಥ ಶಾಲೆಗಳಲ್ಲೂ ಸಮಸ್ಯೆಯಾಗಲಿಲ್ಲ.

ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯರೇ ಬಿಸಿಯೂಟ ತಯಾರಿಸಿದರು. ಐವರು ಬಿಸಿಯೂಟ ಸಿಬ್ಬಂದಿ ದಿಢೀರ್ ಗೈರಾಗಿದ್ದ­ರಿಂದ, ತರಗತಿ ಇಲ್ಲದ ಶಿಕ್ಷಕಿಯರು ಬಿಸಿಯೂಟ ತಯಾರಿಯಲ್ಲಿ ಕೈ ಜೋಡಿಸಿದ್ದರು. ಅಡುಗೆ ಕೊಠಡಿ ಎದುರು ಕುಳಿತು ಒಬ್ಬರು ಸೊಪ್ಪು ಬಿಡಿಸಿದರೆ, ಮತ್ತೊಬ್ಬರು ತರಕಾರಿ ಹೆಚ್ಚಿದರು, ಮಗದೊಬ್ಬರು ಬೇಳೆ ಬೆಂದಿದೆಯೇ ಎಂದು ಪರಿಶೀಲಿಸಿದರು. ಒಟ್ಟಾರೆ ಇಡೀ ಅಡುಗೆ ಜವಾಬ್ದಾರಿಯನ್ನು ಶಿಕ್ಷಕಿಯರು ನಿರ್ವಹಿಸುತ್ತಿದ್ದರು.

‘ಬಿಸಿಯೂಟದವರ ಪ್ರತಿಭಟನೆಯ ವಿಷಯ ಪತ್ರಿಕೆ ಓದಿದ ಮೇಲಷ್ಟೇ ಗೊತ್ತಾಗಿದೆ. ಅಷ್ಟು ಹೊತ್ತಿಗೆ ನಾವು ತರಕಾರಿ ತಂದಾಗಿತ್ತು. 10 ಗಂಟೆ ಹೊತ್ತಿಗೆ ‘ನಾವು ಬರುವುದಿಲ್ಲ’ ಎಂದು ಅಡುಗೆಯವರು ತಿಳಿಸಿದರು. ಶಿಕ್ಷಕರೊಂದಿಗೆ ಚರ್ಚೆ ನಡೆಸಿದಾಗ ಭಟ್ಟರನ್ನು ಕರೆಸುವ ಸಲಹೆ ಬಂತು. ‘ನಾವೇ ಅಡುಗೆ ಮಾಡುತ್ತೇವೆ’ ಎಂದು ಶಿಕ್ಷಕಿಯರು ಮುಂದೆ ಬಂದರು. ಹಾಗಾಗಿ ಸಮಸ್ಯೆಯಾಗಲಿಲ್ಲ’ ಎಂದು ಪ್ರಾಚಾರ್ಯ ಜಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮದಕರಿನಾಯಕ ಪ್ರೌಢ ಶಾಲೆಯಲ್ಲೂ ಹೀಗೇ ಆಯಿತು. ಬೆಳಿಗ್ಗೆ ಅಡುಗೆಯವರು ಬರುವುದಿಲ್ಲ ಎಂದು ತಿಳಿಸಿದರು. ‘ಎಂಟು ಗಂಟೆಗೆ ಶಾಲೆಗೆ ಬರುವ ಮಕ್ಕಳಿಗೆ ಬಿಸಿಯೂಟ ಇಲ್ಲದಿದ್ದರೆ ಕಷ್ಟ. ಅದಕ್ಕೆ ನಾವೇ ಸಹಾಯಕಿಯರೊಂದಿಗೆ ಜವಾನರು ಸೇರಿ ಅಡುಗೆಗೆ ಸಹಕರಿಸಿದೆವು’ ಎಂದು ಶಿಕ್ಷಕ ಮಂಜುನಾಥಾಚಾರ್ ತಿಳಿಸಿದರು.

ನಗರದ ಕೋಟೆ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ಬಂದ ಬಿಸಿಯೂಟ ತಯಾರಕರು ಅಕ್ಕಿ ತೊಳೆಯುತ್ತಿದ್ದರು. ಅಷ್ಟು ಹೊತ್ತಿಗೆ ಪ್ರತಿಭಟನೆ ವಿಷಯ ತಿಳಿದು ಹೊರಟು ಹೋದರು. ಕೊನೆಗೆ ಶಾಲಾ ಸಿಬ್ಬಂದಿ ಅಡುಗೆ ತಯಾರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದರಿಂದ, ಎಸ್‌ಡಿಎಂಸಿ, ಶಾಲಾ ಸಿಬ್ಬಂದಿ ಸೇರಿ ಅಡುಗೆ ತಯಾರಿಗೆ ಮುಂದಾಗಿದ್ದಾರೆ.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆ, ವಿ.ಪಿ.ಬಡಾವಣೆಯ ಸರ್ಕಾರಿ ಶಾಲೆ ಸೇರಿದಂತೆ ನಗರದ ಹಲವು ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಕೆಲಸಕ್ಕೆ ಹಾಜರಾಗಿದ್ದರು. ‘ನಮಗೆ 17ರಂದು ಪ್ರತಿಭಟನೆ ನಡೆಯುತ್ತದೆ. ಬರುವಂತೆ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯವರು ಪತ್ರ ಕಳಿಸಿದ್ದಾರೆ. ನಾವು ಬೆಂಗಳೂರಿಗೆ ಹೋಗಲಿಲ್ಲ’ ಎಂದು ಸಿಪಿಐನವರು ಕಳಿಸಿದ ಪತ್ರವನ್ನು ತೋರಿಸಿದರು.

ಚಳ್ಳಕೆರೆ ತಾಲೂಕಿನ ಕೆಲವೆಡೆ ಶಾಲಾ ಸಿಬ್ಬಂದಿ ಶಿಕ್ಷಣ ಇಲಾಖೆ ನಿಯಮ ಉಲ್ಲಂಘಿಸಿ ಬಿಸಿಯೂಟ ತಯಾರಿಸದೆ ಮಧ್ಯಾಹ್ನದ ಊಟಕ್ಕೆ ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ. ‘ಬೆಳಿಗ್ಗೆ ಫೋನ್ ಮಾಡಿ ನಾವು ಬರುವುದಿಲ್ಲ’ ಎಂದು ಹೇಳಿದ ಕಾರಣ ಅನಿವಾರ್ಯವಾಗಿ ಮಕ್ಕಳನ್ನು ಮನೆಗೆ ಕಳುಹಿಸಲಾಯಿತು ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.

* * 

ಶಾಲಾ ಸಿಬ್ಬಂದಿಗೆ, ಅಡುಗೆ ತಯಾರಿಸಲು ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿತ್ತು. ಈಗ ಆದೇಶ ಉಲ್ಲಂಘಿಸಿದ ಶಾಲೆಗಳ ಮೇಲೆ ಕ್ರಮ ಜರುಗಿಸಲಾಗುವುದು.

ಧಾರುಕೇಶ್, ನೋಡಲ್ ಅಧಿಕಾರಿ, ಅಕ್ಷರ ದಾಸೋಹ

ಪ್ರತಿಕ್ರಿಯಿಸಿ (+)