ಶುಕ್ರವಾರ, ಡಿಸೆಂಬರ್ 6, 2019
25 °C

ಉತ್ತರ ಕನ್ನಡ ಜಿಲ್ಲೆಯಲ್ಲಿ ಫೆ.20ರಂದು ಅಮಿತ್ ಶಾ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಕನ್ನಡ ಜಿಲ್ಲೆಯಲ್ಲಿ ಫೆ.20ರಂದು ಅಮಿತ್ ಶಾ ಪ್ರವಾಸ

ಕಾರವಾರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಫೆ.20ರಂದು ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಪ್ರವಾಸ ಮಾಡಲಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ‘ಅವರು ಅಂದು ಮಧ್ಯಾಹ್ನ ಎರಡು ಗಂಟೆಗೆ ಉಡುಪಿಯಿಂದ ಹೊನ್ನಾವರಕ್ಕೆ ಆಗಮಿಸುವರು. ಈಚೆಗೆ ಅನುಮಾನಾಸ್ಪದವಾಗಿ ಮೃತಪಟ್ಟ ಪರೇಶ ಮೇಸ್ತ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವರು’ ಎಂದು ತಿಳಿಸಿದರು.

ಅದೇದಿನ ಕುಮಟಾದಲ್ಲಿ ಆಯೋಜಿಸಲಾಗಿರುವ ‘ನವಶಕ್ತಿ ಸಮಾವೇಶ’ದಲ್ಲಿ ಮಧ್ಯಾಹ್ನ 3ಕ್ಕೆ ಭಾಗವಹಿಸುವರು. ಭಟ್ಕಳ, ಕುಮಟಾ ಮತ್ತು ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್‌ನಿಂದ ವಿವಿಧ ಮೋರ್ಚಾಗಳ ತಲಾ ಒಂಬತ್ತು ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ. ಸುಮಾರು 6,500 ಜನರು ಅಲ್ಲಿ ಇರಲಿದ್ದಾರೆ. ಭಟ್ಕಳದಲ್ಲಿ ಅಂಗಡಿ ತೆರವು ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಮಾಲೀಕ ರಾಮಚಂದ್ರ ನಾಯಕ್ ಕುಟುಂಬದವರನ್ನೂ ಇದೇ ವೇದಿಕೆಗೆ ಕರೆಸಿ ಸಾಂತ್ವನ ಹೇಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಜೆ 4.15ಕ್ಕೆ ಶಿರಸಿಗೆ ತೆರಳಿ ಮಾರಿಕಾಂಬೆ ದೇವಿಯ ದರ್ಶನ ಮಾಡುವರು. ನಂತರ ಹುಬ್ಬಳ್ಳಿಗೆ ತೆರಳುವರು. ಇದೇ ರೀತಿ ಮುಂದಿನ ದಿನಗಳಲ್ಲಿ ಯಲ್ಲಾಪುರ, ಶಿರಸಿ, ಹಳಿಯಾಳ ಭಾಗದಲ್ಲೂ ಸಂಚರಿಸಲಿದ್ದಾರೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)