ಭಾನುವಾರ, ಡಿಸೆಂಬರ್ 8, 2019
24 °C

ಸಾಧಕನ ಬದುಕಿನ ‘ಕ್ಯಾರಿಕೇಚರ್’

Published:
Updated:
ಸಾಧಕನ ಬದುಕಿನ ‘ಕ್ಯಾರಿಕೇಚರ್’

ಚಿತ್ರ: ಪ್ಯಾಡ್‌ಮನ್ (ಹಿಂದಿ)

ನಿರ್ಮಾಣ: ಎಸ್‌ಪಿಇ ಫಿಲ್ಮ್ಸ್‌ ಇಂಡಿಯಾ, ಕ್ರಿಅರ್ಜ್‌ ಎಂಟರ್‌ಟೇನ್‌ಮೆಂಟ್, ಕೇಪ್‌ ಆಫ್‌ ಗುಡ್‌ ಫಿಲ್ಮ್ಸ್‌, ಹೋಪ್‌ ಪ್ರೊಡಕ್ಷನ್ಸ್‌

ನಿರ್ದೇಶನ: ಆರ್‌. ಬಾಲ್ಕಿ

ತಾರಾಗಣ: ಅಕ್ಷಯ್‌ ಕುಮಾರ್, ರಾಧಿಕಾ ಆಪ್ಟೆ, ಸೋನಂ ಕಪೂರ್.

ನಂಬಿಕೆ, ನೈತಿಕತೆ, ಸಂಪ್ರದಾಯ, ಅಳುಕು– ಹೀಗೆ ಹಲವು ಕಾರಣಗಳಿಂದಾಗಿ ಎಷ್ಟೋ ಮುಖ್ಯ ಸಂಗತಿಗಳು ಭಾರತದಲ್ಲಿ ಮುಕ್ತವಾಗಿ ಚರ್ಚಿತವಾಗುವುದಿಲ್ಲ. ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆಗೆ ಗ್ರಾಮೀಣ ಭಾಗಗಳಲ್ಲಿಯಂತೂ ತರಹೇವಾರಿ ಮುಖಗಳಿವೆ. ಇಂಥ ನಮ್ಮ ದೇಶದಲ್ಲಿ ‘ಪ್ಯಾಡ್‌’ ಬಳಕೆಯ ಔಚಿತ್ಯದ ಬೋಧನಾಪ್ರಧಾನ ಚಿತ್ರವಾಗಿ ‘ಪ್ಯಾಡ್‌ಮನ್’ ಮೂಡಿಬಂದಿದೆ.

ಕಡಿಮೆ ಬೆಲೆಗೆ ಪ್ಯಾಡ್‌ಗಳನ್ನು ತಯಾರಿಸುವ ಯಂತ್ರ ರೂಪಿಸಿ ಕ್ರಾಂತಿ ಮಾಡಿದ ಅರುಣಾಚಲಂ ಮುರುಗನಾಥಮ್ ಈ ಸಿನಿಮಾಗೆ ಪ್ರೇರಣೆ. ಹಾಗೆಂದು ಇದು ಅವರ ಪೂರ್ಣಪ್ರಮಾಣದ ಆತ್ಮಕಥೆಯ ಚಿತ್ರವಲ್ಲ. ಕಥೆಯ ತೆಳುವಾದ ಎಳೆಗೆ ಮೆಲೋಡ್ರಾಮಾ ಹಾಗೂ ಸಿನಿಮೀಯ ಮಸಾಲೆ ಬೆರೆಸಿದ್ದಾರೆ ನಿರ್ದೇಶಕ ಆರ್‌. ಬಾಲ್ಕಿ.

ಅರುಣಾಚಲಂ ಮುರುಗನಾಥಮ್ ಅವರದ್ದು ವಿಲಕ್ಷಣ ವ್ಯಕ್ತಿತ್ವ. ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುವ, ತಾವಾಗಿಯೇ ಕಷ್ಟಪಟ್ಟು ಇಂಗ್ಲಿಷ್ ಕಲಿತ ಅವರ ಬದುಕಿನಲ್ಲಿ ರೋಚಕ ಕಥನಗಳಿವೆ. ಅಮಿತ್ ವೀರಮಣಿ ಎನ್ನುವವರು ಮುರುಗನಾಥಮ್ ಬಗೆಗೆ ತಯಾರಿಸಿದ್ದ ‘ಮೆನ್‌ಸ್ಟ್ರುಅಲ್ ಮ್ಯಾನ್’ ಸಾಕ್ಷ್ಯಚಿತ್ರದಲ್ಲಿ ಅಂಥ ಅನೇಕ ಕುತೂಹಲಕಾರಿ ವಿಷಯಗಳಿದ್ದವು. ಅವುಗಳಲ್ಲಿ ಬಹುಪಾಲನ್ನು ಅಲಕ್ಷಿಸಿಯೇ ಬಾಲ್ಕಿ ವಾಣಿಜ್ಯಿಕ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಮೂಲ ವಸ್ತುವಿನಲ್ಲಿ ಇಲ್ಲದ ತ್ರಿಕೋನ ಪ್ರೇಮ, ವಿಶ್ವಸಂಸ್ಥೆಯಲ್ಲಿ ‘ಪ್ಯಾಡ್‌ಮನ್’ ತನ್ನದೇ ಮುಗ್ಧ ಇಂಗ್ಲಿಷ್‌ನಲ್ಲಿ ಮಾಡುವ ಉದ್ದದ ಭಾಷಣ ಬಾಲ್ಕಿ ಅವರದ್ದೇ ಸೃಷ್ಟಿ.

ಸಿನಿಮಾದ ಮೊದಲರ್ಧ ತೆವಳುತ್ತದೆ. ಬರೀ ಋತುಸ್ರಾವದ ಸಮಸ್ಯೆಗಳ ಮೇಲ್ಮಟ್ಟದ ಚರ್ಚೆ ನಡೆಯುವುದೇ ಹೆಚ್ಚು. ಪ್ಯಾಡ್ ತಯಾರಿಸಿ, ಅದು ಸರಿಯಾಗಿದೆಯೇ ಎಂದು ಖಾತರಿಪಡಿಸಿಕೊಳ್ಳಲು ಚಿತ್ರದ ನಾಯಕ ಲಕ್ಷ್ಮೀಕಾಂತ್ ಪಡುವ ಪಡಿಪಾಟಲನ್ನು ಜಾಹೀರಾತು ಶೈಲಿಯಲ್ಲಿ ತೋರಿಸಲಾಗಿದೆ. ಎರಡನೇ ಅರ್ಧ ಹೆಚ್ಚು ಸಿನಿಮೀಯವೂ ಮೆಲೋಡ್ರಾಮಾಭರಿತವೂ ಆಗುವ ಮೂಲಕ ನೋಡಿಸಿಕೊಳ್ಳುತ್ತದೆ. ಅಲ್ಲಲ್ಲಿ ಸಾಕ್ಷ್ಯಚಿತ್ರದಂತೆ ಭಾಸವಾಗುವ ಚಿತ್ರದಲ್ಲಿ ಸಾಧಕನೊಬ್ಬನ ಬದುಕಿನ ರಕ್ತ–ಮಾಂಸ ಹದವಾಗಿ ತುಂಬಿಲ್ಲ.

ಅಕ್ಷಯ್ ಕುಮಾರ್ ಇಮೇಜಿನ ಹಂಗುತೊರೆದ ನಟ. ಹೀಗಾಗಿಯೇ ಇಂಥ ಪಾತ್ರ ನಿರ್ವಹಿಸಲು ಸಾಧ್ಯವಾಗಿರುವುದು. ಅವರ ಪಾತ್ರವನ್ನು ‘ಕ್ಯಾರಿಕೇಚರ್’ ತರಹ ಮಾಡಿರುವುದು ಅರುಣಾಚಲಂ ಮೂಲ ವ್ಯಕ್ತಿತ್ವದ ತೂಕವನ್ನು ಇಳಿಸಿದಂತಾಗಿದೆ. ರಾಧಿಕಾ ಆಪ್ಟೆ ಪಾತ್ರಕ್ಕೂ ಅವರ ತುಟಿಮೇಲಿನ ಗಾಢ ಬಣ್ಣಕ್ಕೂ ಹೊಂದುವುದಿಲ್ಲ. ಸೋನಂ ಕಪೂರ್ ಲವಲವಿಕೆ ಚಿತ್ರದ ‘ರಿಲೀಫ್’ಗಳಲ್ಲಿ ಒಂದು. ಅವರು ತಬಲಾ ನುಡಿಸುವುದನ್ನು ಮಾತ್ರ ನೋಡಲಾಗದು.

ಚಿತ್ರದ ಸಂಭಾಷಣೆ ಅರ್ಥಪೂರ್ಣ. ಅಮಿತ್ ತ್ರಿವೇದಿ ಸ್ವರ ಸಂಯೋಜನೆಯ ಹಾಡುಗಳು ಕಾಡುವುದಿಲ್ಲ.

ಅಪರೂಪದ ಕಥಾವಸ್ತುವಿನ ಆಯ್ಕೆಯಿಂದ ಗಮನ ಸೆಳೆಯುವ ಬಾಲ್ಕಿ, ಸಿನಿಮಾದಲ್ಲಿನ ಸಾಕ್ಷ್ಯಚಿತ್ರದ ಲಕ್ಷಣಗಳನ್ನು ಅಳಿಸಿಹಾಕಿದ್ದರೆ ಚೆನ್ನಾಗಿರುತ್ತಿತ್ತು.

ಪ್ರತಿಕ್ರಿಯಿಸಿ (+)