ಮಂಗಳವಾರ, ಡಿಸೆಂಬರ್ 10, 2019
19 °C

ಆಹಾರದ ಆಯ್ಕೆಯಲ್ಲಿ ಇರಲಿ ವಿವೇಕ

Published:
Updated:
ಆಹಾರದ ಆಯ್ಕೆಯಲ್ಲಿ ಇರಲಿ ವಿವೇಕ

ಭಿಕ್ಷುಗಳಿಗೆ ಹಲವು ಶಿಸ್ತು, ನಿಯಮಗಳನ್ನು ಹಾಕಿದ್ದನು ಬುದ್ಧ. ಹಾಗೆಯೇ ಕೇವಲ ಶಿಸ್ತು, ನಿಯಮಗಳನ್ನೇ ಸ್ವಲ್ಪವೂ ತಪ್ಪದೆ ಹತ್ತಾರು ವರ್ಷ ಪಾಲನೆ ಮಾಡುತ್ತ ಯಾವ ಆಧ್ಯಾತ್ಮಿಕ ಸಾಧನೆಯನ್ನೂ ಮಾಡದೇ ಇರುವುದನ್ನು ಕೂಡ ಖಂಡಿಸಿದ್ದ.

ನಿಯಮಗಳು ಇರುವುದೇ ಅವುಗಳನ್ನು ಕಳಚಿ, ಅವುಗಳಿಲ್ಲದೇ ಸಹಜ ಬದುಕನ್ನು ಕಾಣುವುದಕ್ಕಾಗಿ. ಅವು ಕೇವಲ ಮೇಲೇರಲು ಬಳಸುವ ಏಣಿ ಮಾತ್ರ. ಏಣಿಯಲ್ಲಿಯೇ ಜೀಕಿಕೊಂಡಿದ್ದರೆ, ಯಾವ ಸಾಧನೆಯೂ ಸಾಧ್ಯವಾಗದು. ಆಹಾರ ಮತ್ತು ಪೌಷ್ಟಿಕಾಂಶ ವಿಚಾರಗಳಲ್ಲಿ ಸಾಕಷ್ಟು ವೈಜ್ಞಾನಿಕ ಮಾಹಿತಿ ನಮಗೆ ಲಭ್ಯವಿದೆ. ಅನೇಕ ಕಾಯಿಲೆಗಳನ್ನು ಸುಲಭವಾಗಿ ತಡೆಗಟ್ಟಬಹುದಾದ ಸರಳ ಸೂತ್ರಗಳೂ ನಮಗೆ ದಕ್ಕಿದೆ. ಉದಾಹರಣೆಗೆ ವಿಟಮಿನ್ ಸಿ ಇಂದ ಸರ್ವಿ ರೋಗವನ್ನು ತಡೆಗಟ್ಟುವುದು. ಅಯೋಡಿನ್‌ ಗಳಗಂಡವನ್ನು ತಡೆಗಟ್ಟುವುದು. ವಿಟಮಿನ್ ಎ ಅಂಶ ಅಂಧತೆಯನ್ನು ತಡೆಗಟ್ಟುವುದು. ಹೀಗೆ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಇದರ ಜೊತೆಗೆ ಸುಳ್ಳಿನ ಸರಮಾಲೆ ಕೂಡ ಆಹಾರದ ಮಾರುಕಟ್ಟೆಯಲ್ಲಿ ಕಾಣಬಹುದು.

ಇತ್ತೀಚೆಗೆ ಗ್ಲೂಟನ್ ರಹಿತ ನೀರು ಸುದ್ದಿ ಮಾಡುತ್ತಿದೆ. ನಾಯಿ ತಿಂಡಿಗೂ ಗ್ಲೂಟನ್ ತೆಗೆದಿದ್ದೇವೆ ಎಂದು ಹೆಗ್ಗಳಿಕೆಯಿಂದ ಹೇಳುತ್ತಿದ್ದಾರೆ. ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲ, ಗ್ಲೂಟನ್ ಇಲ್ಲ, ಲ್ಯಾಕ್ಟೋಸ್ ಇಲ್ಲ. ಹೀಗೆ ‘ಇಲ್ಲ ಇಲ್ಲ’ ಎಂದು ಹೇಳಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ 15 ಸಾವಿರ ವರ್ಷಗಳಿಂದ ಬಳಕೆಯಾಗುತ್ತಿರುವ ಗೋಧಿ ಸುಮಾರು ಕನಿಷ್ಠ 40 ಸಾವಿರ ವರ್ಷಗಳಿಂದ ಬಳಕೆಯಾಗುತ್ತಿರುವ ಹಾಲಿನ ಬಗ್ಗೆ ಹೊಸ ಹಸಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ.

ಗೋಧಿ ಭಯಾನಕ, ಹಾಲು ಹಾಲಾಹಲ ಎಂದು ಗುಲ್ಲೆಬ್ಬಿಸುತ್ತಿದ್ದಾರೆ. ಮಹಾಭಾರತದಲ್ಲಿ ಅರ್ಜುನನ ಕೆಲವು ಗೊಂದಲ ಮತ್ತು ಅಸ್ಪಷ್ಟತೆ ಕಂಡಾಗ, ಶ್ರೀಕೃಷ್ಣ ಇಂತಹ ಸಂದರ್ಭಗಳಲ್ಲಿ ಹಿರಿಯರು ಮಾಡಿದ್ದನ್ನು ಕಣ್ಣು ಮುಚ್ಚಿ ಮಾಡಿಕೊಂಡು ಹೋಗು ಎನ್ನುತ್ತಾನೆ. ಆಹಾರದ ವಿಚಾರದಲ್ಲಿ ನಮ್ಮ ಹಿಂದಿನವರಿಗೆ ವೈಜ್ಞಾನಿಕ ವಿಶ್ಲೇಷಣೆ ಇಲ್ಲದೆ ಇದ್ದರೂ, ಅನುಭವದಿಂದಲೇ ಅಪಾರವಾದ ಜ್ಞಾನವನ್ನು ಕಂಡುಕೊಂಡಿದ್ದಾರೆ.

ಅಲ್ಲದೆ, ಯಾವುದೇ ಆಹಾರ ಸಾವಿರಾರು ವರ್ಷಗಳಿಂದ ಬಳಸಿಕೊಂಡಿದ್ದಾರೆಂದಾಗ, ನಾವುಗಳು ಅವುಗಳಿಗೆ ಒಗ್ಗಿಕೊಂಡಿದ್ದೇವೆ ಅಥವಾ ಅವೇ ನಮ್ಮನ್ನು ಒಗ್ಗಿಸಿಕೊಂಡಿವೆ ಎಂದರ್ಥ. ಗೋಧಿಯಲ್ಲಿನ ಪ್ರೋಟೀನ್ ಗ್ಲೂಟನ್ ಬಗ್ಗೆ ಎಗ್ಗಿಲ್ಲದೆ ಅಪಪ್ರಚಾರ ನಡೆದಿದೆ. ಸೀಲಿಯಾಕ್ ಕಾಯಿಲೆ ಮತ್ತು ಹೊಟ್ಟೆಯಲ್ಲಿ ಉರಿ ಇವುಗಳಿಗೆ ಗ್ಲೂಟನ್ ಕಾರಣವೆಂದು ನಂಬಿ ಗ್ಲೂಟನ್ ರಹಿತ ಎಂಬ ದೊಡ್ಡ ಉದ್ಯಮ ಈ ‘ರಹಿತ ಉದ್ಯಮ’ದೊಂದಿಗೆ ದೊಡ್ಡದಾಗಿ ಸೇರಿಕೊಂಡಿದೆ.

ಆದರೆ ಇತ್ತೀಚಿನ ಅನೇಕ ಅಧ್ಯಯನಗಳಲ್ಲಿ ಗ್ಲೂಟನ್ ದೋಷಮುಕ್ತವಾಗಿ ಹೊರಹೊಮ್ಮಿದೆ. ಗ್ಲೂಟನ್ ಬದಲು ಫ್ರುಕ್ಟಾನ್ ಎಂಬ ಅಂಶದತ್ತ ಬೆರಳು ತೋರಲಾಗುತ್ತಿದೆ. ಅದು ಕೇವಲ ಗೋಧಿ ಮಾತ್ರವಲ್ಲ, ಬಾರ್ಲಿ, ರೈ, ಬೆಳ್ಳುಳ್ಳಿ, ಕೋಸು, ಈರುಳ್ಳಿ – ಹೀಗೆ ಉದ್ದದ ಪಟ್ಟಿ ಮಾಡಲಾಗುತ್ತಿದೆ. ಇತ್ತೀಚೆಗೆ ನ್ಯೂ ಸೈನ್ಟಿಸ್ಟ್ ವಿಜ್ಞಾನ ನಿಯತಕಾಲಿಕದಲ್ಲಿ ಬರಹಗಾರರಾಗಿರುವ ಆ್ಯಂಟನಿ ವರ್ನರ್ ‘The angry chef–bad science and the truth about healthy eating’ ಎನ್ನುವ ಅರ್ಥಬದ್ಧವಾದ ಪುಸ್ತಕ ಬರೆದಿದ್ದಾನೆ. ಅದರಲ್ಲಿ ಗ್ಲೂಟನ್ ಗ್ಯಾಂಗ್ ವಿರುದ್ಧ ದನಿ ಎತ್ತಿದ್ದಾನೆ. ಅವನೇ ಹೇಳುವ ಪ್ರಕಾರ ಜನರನ್ನು ನಂಬಿಸಲು ಭಯಾನಕ ವಿಷಯಗಳನ್ನು ವರ್ಣರಂಜಿತವಾಗಿ ಹೇಳಿದಾಗ ಜನರು ಮುಗಿಬಿದ್ದು ನಂಬುತ್ತಾರೆ. ಕಥೆ ಹೇಳುವಾಗ, ನಿರ್ಣಾಯಕವಾಗಿ ಹೇಳುವುದು ನಂಬಿಸುವ ಶೈಲಿ.

ಮಾರ್ಕ್ ಟೈನ್‍ನ ಪ್ರಸಿದ್ಧ ಮಾತಿನಂತೆ, ಸತ್ಯವು ಶೂ ಹಾಕಿಕೊಳ್ಳುವುದರೊಳಗೆ ಸುಳ್ಳು ಜಗತ್ತನ್ನೇ ಮೂರು ಸುತ್ತು ಹೊಡೆದಿರುತ್ತದೆ! ಇದಕ್ಕೆ ಇಂದಿನ ಸಾಮಾಜಿಕ ಜಾಲತಾಣ ಉತ್ತಮ ಸಾಥ್ ಕೊಡುತ್ತಿದೆ. ಮೂಢರು ತಮ್ಮಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಳ್ಳದೆ ಜೀವನಪರ್ಯಂತ ಮೂಢರಾಗಿಯೇ ಇದ್ದು, ಜೊತೆಗೆ ದೊಡ್ಡ ಸಂಘ ಸಂಸ್ಥೆಯನ್ನೇ ಕಟ್ಟಿಕೊಳ್ಳಬಹುದು. ವಿಜ್ಞಾನ ಮುಂದುವರಿದಂತೆಯೇ ಅದಕ್ಕೂ ಒಂದು ಹೆಜ್ಜೆ ಮೀರಿ ಸುಳ್ಳು ಸುದ್ಧಿ, ಅವೈಜ್ಞಾನಿಕ ವಿಷಯಗಳು ಹೆಚ್ಚು ಪ್ರಚಾರವಾಗುತ್ತಿರುವುದಂತೂ ಸತ್ಯ. ನಮ್ಮಲ್ಲಿ ‘ವೇದ ಸುಳ್ಳಾದರೂ, ಗಾದೆ ಸುಳ್ಳಾಗದು’ ಎಂಬ ಮಾತಿನಂತೆ, ಶತಶತಮಾನಗಳಿಂದ ಬಳಕೆಯಾಗುತ್ತಿರುವ ಅಕ್ಕಿ, ಗೋಧಿ, ಹಾಲನ್ನು ತ್ಯಜಿಸಿ, ರೋಗರುಜಿನಗಳಿಗೆ ತುತ್ತಾಗದಿರುವಂತೆ ಎಚ್ಚರ ವಹಿಸುವುದು ಅಗತ್ಯ.

 

ಪ್ರತಿಕ್ರಿಯಿಸಿ (+)