7

ಶಿವರಾತ್ರಿಯ ತಾಣಗಳಿವು...

Published:
Updated:
ಶಿವರಾತ್ರಿಯ ತಾಣಗಳಿವು...

ಶಿವಧ್ಯಾನ ಮಾಡಲು ಶಿವರಾತ್ರಿ ಎಂಬುದು ನೆಪವಷ್ಟೇ. ಆ ನೆಪದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ದೇವಾಲಯ, ಬೆಟ್ಟ–ಗುಡ್ಡಗಳನ್ನು ಒಂದು ಸುತ್ತು ಬರುವವರೇ ಹೆಚ್ಚು. ಇಂಥ ಸಣ್ಣ ಪ್ರಯಾಣ ನಗರವಾಸಿಗಳಿಗೆ ಅಪ್ಯಾಯಮಾನ. ಒಂದು ದಿನದಲ್ಲೇ ಹೋಗಿ ಬರುಬಹುದಾದ ಈ ತಾಣಗಳು ಬರೀ  ಶಿವಭಕ್ತರಿಗಷ್ಟೇ ಅಲ್ಲ ಸಾಹಸ, ಚಾರಣ ಮತ್ತು ಪ್ರವಾಸಪ್ರಿಯರಿಗೂ ನೆಚ್ಚಿನ ತಾಣಗಳು.  ನಗರದಿಂದ ತುಸು ದೂರ ಇರುವ ಅಂಥ ತಾಣಗಳ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಅಂತರಗಂಗೆ ಬೆಟ್ಟ

ಎಲ್ಲಿದೆ: ಕೋಲಾರದಿಂದ ಮೂರು ಕಿ.ಮೀ. ದೂರ

ವಿಶೇಷ
: ಕಾಶಿ ವಿಶ್ವೇಶ್ವರ ದೇವಾಲಯದಿಂದ ‘ದಕ್ಷಿಣ ಕಾಶಿ’ ಎಂದೇ ಖ್ಯಾತ. ಹಸಿರಿನಿಂದ ಆವೃತ್ತವಾಗಿರುವ ಆಹ್ಲಾದಕರ ವಾತಾವರಣ, ಚಾರಣ ಮತ್ತು ಪರ್ವತಾರೋಹಣಕ್ಕೆ ಸೂಕ್ತ. ದೇವಸ್ಥಾನದಲ್ಲಿ ನಂದಿ ಬಾಯಿಂದ ಬರುವ ನೀರನ್ನು ಗಂಗಾ ಜಲವೆಂದು ಭಕ್ತರು ಭಾವಿಸುತ್ತಾರೆ. ಶಿವರಾತ್ರಿಯಂದು ಪುಣ್ಯಸ್ನಾನ ಮಾಡುವ ವಾಡಿಕೆ. ವಿವಿಧ ಗಾತ್ರದ ಗುಹೆಗಳು ಪ್ರವಾಸಿಗರಿಗೆ ಆಕರ್ಷಣೆಯ ತಾಣ.

ಎಷ್ಟು ದೂರ: ಬೆಂಗಳೂರಿನಿಂದ 70 ಕಿ.ಮೀ.

ಕೋಟಿಲಿಂಗೇಶ್ವರ

ಎಲ್ಲಿದೆ: ಕೋಲಾರ ಜಿಲ್ಲೆಯ ಕಮ್ಮಸಂದ್ರ ಗ್ರಾಮ

ವಿಶೇಷ:
13 ಎಕರೆ ವಿಶಾಲ ಪ್ರದೇಶದಲ್ಲಿ 108 ಅಡಿಗಳ ಬೃಹತ್ ಶಿವಲಿಂಗ. 32 ಅಡಿ ಎತ್ತರದ ಬಸವಣ್ಣ, ವಿವಿಧ ದೇವರ ಗುಡಿಗಳೂ ಇಲ್ಲಿವೆ. ಶಿವರಾತ್ರಿಯಂದು ಲಕ್ಷಾಂತರ ಭಕ್ತರ ಭೇಟಿ

ಎಷ್ಟು ದೂರ: ಬೆಂಗಳೂರಿನಿಂದ 97 ಕಿ.ಮೀ.

ಕೈವಾರ-ಕೈಲಾಸಗಿರಿ

ಎಲ್ಲಿದೆ: ಚಿಕ್ಕಬಳ್ಳಾಪುರ

ವಿಶೇಷ:
ಪಾಂಡವರು ಇಲ್ಲಿ ತಂಗಿದ್ದರು ಎಂಬ ಪ್ರತೀತಿ ಇದೆ. ಅಮರ ನಾರಾಯಣ, ಭೀಮಲಿಂಗೇಶ್ವರ, ಲಕ್ಷ್ಮಣ ತೀರ್ಥ, ಯೋಗಿ ನಾರಾಯಣ ಮಠ, ವೈಕುಂಠ ದೇವಾಲಯ, ಭೀಮನ ಹೆಜ್ಜೆ ಗುರುತುಗಳು, ಯೋಗಿ ತಾತಯ್ಯನವರ ಜೀವ ಸಮಾಧಿ, ಕನ್ಯಕಾ ಪರಮೇಶ್ವರಿ ದೇವಾಲಯಗಳು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾಗಿವೆ. ಕೈವಾರದಿಂದ 10 ಕಿ.ಮೀ. ದೂರದಲ್ಲಿ ಕೈಲಾಸಗಿರಿ ಏಕಶಿಲಾ ಪರ್ವತವಿದೆ.

ಎಷ್ಟು ದೂರ: ಬೆಂಗಳೂರಿನಿಂದ 67 ಕಿ.ಮೀ.

ಲೇಪಾಕ್ಷಿ

ಎಲ್ಲಿದೆ:ಆಂಧ್ರಪ್ರದೇಶದ ಅನಂತಪುರ ಜಿಲ್ಲೆ

ವಿಶೇಷ:
ವಿಜಯನಗರ ವಾಸ್ತುಶೈಲಿಯ ಲೇಪಾಕ್ಷಿ ದೇವಾಲಯ, ವೀರಭದ್ರ ದೇವಸ್ಥಾನ, ಗ್ರಾನೈಟ್ ಶಿಲೆಯ ಬೃಹತ್ ನಂದಿ ವಿಗ್ರಹ, ಶಿಲ್ಪ ಕಲಾಕೃತಿಯಿಂದಾಗಿ ಪ್ರವಾಸಿಗರಿಗೆ ಆಕರ್ಷಣೀಯ ತಾಣ

ಎಷ್ಟು ದೂರ: ಬೆಂಗಳೂರಿನಿಂದ 120 ಕಿ.ಮೀ.

ಶಿವಗಂಗೆ ಬೆಟ್ಟ

ಎಲ್ಲಿದೆ: ದಾಬಸ್‌ ಪೇಟೆ ಸಮೀಪ (ಬೆಂಗಳೂರು ಗ್ರಾಮಾಂತರ)

ವಿಶೇಷ:
ಕಪ್ಪುಶಿಲೆಯ ಬೆಟ್ಟ. ಇಲ್ಲಿನ ಓಳಕಲ್ಲು ತೀರ್ಥದಲ್ಲಿ ವರ್ಷದ 365 ದಿನಗಳಲ್ಲೂ ನೀರು ಸಿಗುತ್ತದೆ. ಕಡಿದಾದ ಬೆಟ್ಟದ ಮೇಲೆ ನಂದಿಯ ವಿಗ್ರಹ. ಬೆಟ್ಟದ ಮೇಲೆ ಗಂಗಾಧರೇಶ್ವರನ ದೇವಾಲಯ ಮತ್ತು ಬೆಟ್ಟದ ಆರಂಭದಲ್ಲಿ ಶಿವನ ಆಕರ್ಷಕ ದೇಗುಲವಿದೆ. ಹೊನ್ನಾದೇವಿ ದೇವಾಲಯ, ಶಾರದಾಂಬೆಯ ದೇವಸ್ಥಾನ, 108 ಲಿಂಗಗಳ ಅಗಸ್ತ್ಯ ದೇವಸ್ಥಾನ ಇಲ್ಲಿನ ವಿಶೇಷ. ಶಿವರಾತ್ರಿಯಂದು ಭಕ್ತರು ಭೇಟಿ ನೀಡುವ ವಾಡಿಕೆ ಇದೆ.

ಎಷ್ಟು ದೂರ: ಬೆಂಗಳೂರಿನಿಂದ 54 ಕಿ.ಮೀ.

ವಿದ್ಯಾಶಂಕರ ದೇವಾಲಯ

ಎಲ್ಲಿದೆ: ತುಮಕೂರಿನಿಂದ 15 ಕಿ.ಮೀ. ದೂರ

ವಿಶೇಷ:
ದೇವರಾಯನ ದುರ್ಗಕ್ಕೆ ಬಂದಿದ್ದ ಶಂಕರಾಚಾರ್ಯರು ವಿದ್ಯಾಶಂಕರ ದೇವಾಲಯ ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಸಮೀಪದಲ್ಲೇ ದೇವರಾಯನ ದುರ್ಗವಿದೆ. ಹತ್ತಿರದಲ್ಲೇ ನಾಮದ ಚಿಲುಮೆ ಇದೆ. ಇಲ್ಲಿ ಶ್ರೀರಾಮ–ಸೀತೆ, ಲಕ್ಷಣ ವನವಾಸವಿದ್ದರು ಎಂಬ ನಂಬಿಕೆ ಇದೆ.

ಎಷ್ಟು ದೂರ: ಬೆಂಗಳೂರಿನಿಂದ 85 ಕಿ.ಮೀ. ದೂರ

ನಂದಿಬೆಟ್ಟ

ಎಲ್ಲಿದೆ: ಚಿಕ್ಕಬಳ್ಳಾಪುರದಿಂದ 10 ಕಿ.ಮೀ. ದೂರ

ವಿಶೇಷ:
ಭಾರತದ ಎರಡನೆಯ ಅತಿದೊಡ್ಡ ಬೆಟ್ಟ. ಪ್ರಾಕೃತಿಕ ಸೌಂದರ್ಯ, ಆಹ್ಲಾದಕರ ವಾತಾವರಣದಿಂದ ಕೂಡಿದೆ. ಕುದುರೆ ದಾರಿ, ಟಿಪ್ಪು ಡ್ರಾಪ್, ಭೋಗ ನರಸಿಂಹ ಮತ್ತು ಉಗ್ರ ನರಸಿಂಹ ದೇವಾಲಯಗಳಿವೆ. ಅರ್ಕಾವತಿ ನದಿಯ ಉಗಮ ಸ್ಥಳ. ಅಮೃತ ಸರೋವರವಿದೆ. ತಂಪಾದ ಗುಹೆ ಇರುವ ಬ್ರಹ್ಮಾಶ್ರಮವಿದೆ. ಜೀವ ವೈವಿಧ್ಯದ ತಾಣ. ಹಸಿರು ಕಾಡು. ಬೆಟ್ಟದಲ್ಲಿ ನೆಲ್ಲಿಕಾಯಿ ಬಸವಣ್ಣವಿದೆ.  ಮಂಜಿನಿಂದ ಆವೃತ್ತವಾಗಿರುವ ನಂದಿಬೆಟ್ಟದ ಸೊಬಗನ್ನು ಸವಿಯಬಹುದು. ಯುವಜೋಡಿಗಳ ನೆಚ್ಚಿನ ತಾಣ.

ಎಷ್ಟು ದೂರ: ಬೆಂಗಳೂರಿನಿಂದ 45 ಕಿ.ಮೀ. ದೂರ

ಹುಲುಕಡಿ ಬೆಟ್ಟ

ಎಲ್ಲಿದೆ: ದೊಡ್ಡಬಳ್ಳಾಪುರ

ವಿಶೇಷ:
ವೀರಭದ್ರೇಶ್ವರ ದೇವಾಲಯವಿದೆ. ಸಾಹಸಪ್ರಿಯರಿಗೆ ನೆಚ್ಚಿನ ತಾಣ. ಕೋಟೆ ಮತ್ತು ಗುಹಾಂತರ ದೇವಾಲಯವಿದೆ. ಬಿಂದು ಸರೋವರ.ಎಷ್ಟು ದೂರ: ಬೆಂಗಳೂರಿನಿಂದ 65 ಕಿ.ಮೀ.

ಎಡೆಯೂರು

ಎಲ್ಲಿದೆ: ತುಮಕೂರು

ವಿಶೇಷ:
ಎಡೆಯೂರು ಸಿದ್ದಲಿಂಗೇಶ್ವರರ ಜೀವಂತ ಸಮಾಧಿ ಸ್ಥಳ. ದ್ರಾವಿಡ ಶೈಲಿಯ ದೇವಸ್ಥಾನವಿದೆ. ನಿತ್ಯವೂ ಅನ್ನದಾಸೋಹ, ಸರಳ ವಿವಾಹ ನಡೆಯುತ್ತದೆ. ಭಕ್ತರಿಗೆ ಕಡಿಮೆ ದರದಲ್ಲಿ ವಾಸ್ತವ್ಯಕ್ಕೆ ಕೊಠಡಿ ಸೌಲಭ್ಯವಿದೆ. ಶಿವರಾತ್ರಿಯಂದು ವಿಶೇಷ ಪೂಜೆ ಮತ್ತು ದೀಪೋತ್ಸವ ನಡೆಯುತ್ತದೆ.

ಎಷ್ಟು ದೂರ: ಬೆಂಗಳೂರಿನಿಂದ 92 ಕಿ.ಮೀ. ದೂರ

ಗುಬ್ಬಿ ಚನ್ನಬಸವೇಶ್ವರ

ಎಲ್ಲಿದೆ: ತುಮಕೂರು ಜಿಲ್ಲೆಯ ಗುಬ್ಬಿ

ವಿಶೇಷ:
ಗದ್ದೆ ಮಲ್ಲೇಶ್ವರ, ಗುಬ್ಬಿ ಚನ್ನಬಸವೇಶ್ವರ ದೇವಸ್ಥಾನಗಳು ಪ್ರಸಿದ್ಧಿ.

ಎಷ್ಟು ದೂರ: ಬೆಂಗಳೂರಿನಿಂದ 85 ಕಿ.ಮೀ. ದೂರ

ರೇವಣಸಿದ್ದೇಶ್ವರ ಬೆಟ್ಟ

ಎಲ್ಲಿದೆ: ರಾಮನಗರ

ವಿಶೇಷ:
ಹಸಿರಿನಿಂದ ಕೂಡಿದ ಆಹ್ಲಾದಕರ ವಾತಾವರಣ. ಬೆಟ್ಟದ ತುದಿಯಲ್ಲಿ ಪೂರ್ವ–ಪಶ್ಚಿಮವಾಗಿ ರೇವಣ್ಣ ಸಿದ್ದೇಶ್ವರ ಶಿಷ್ಯಯಂದಿರಾದ ರುದ್ರಮುನೇಶ್ವರ, ಸಿದ್ದರಾಮೇಶ್ವರರ ಗೋಪುರಗಳಿವೆ. ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಉಚಿತ ದಾಸೋಹವಿದೆ. ಮಹಾಶಿವರಾತ್ರಿ ಸಮಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಬೆಟ್ಟದ ತುತ್ತ ತುದಿಯಲ್ಲಿ ಕಲ್ಲು ಬಂಡೆಯ ಮಧ್ಯ ಗುಹೆಯಲ್ಲಿ ಕುಳಿತ ರೇವಣ್ಣ ಸಿದ್ಧೇಶ್ವರ ಸ್ವಾಮಿ ವಿಗ್ರಹವಿದೆ.

ಎಷ್ಟು ದೂರ: ಬೆಂಗಳೂರಿನಿಂದ 67 ಕಿ.ಮೀ.

ಸಾವನದುರ್ಗಬೆಟ್ಟ

ಎಲ್ಲಿದೆ: ಮಾಗಡಿ ತಾಲ್ಲೂಕು

ವಿಶೇಷ:
ಕಪ್ಪು ಮತ್ತು ಬಿಳಿ ಬೆಟ್ಟಗಳಿಂದ ಕೂಡಿದ ವಿಶಿಷ್ಟ ಬೆಟ್ಟ. ವೀರಭದ್ರೇಶ್ವರ ಸ್ವಾಮಿ ಮತ್ತು  ನರಸಿಂಹಸ್ವಾಮಿ ದೇವಾಲಯಗಳಿವೆ.ಬೆಟ್ಟದಿಂದ 12 ಕಿ.ಮೀ. ದೂರದಲ್ಲಿ ಮಂಚನಬೆಲೆ ಜಲಾಶಯವಿದೆ. ಅಪರೂಪದ ಹಾಗೂ ಔಷಧೀಯ ಸಸ್ಯ ಪ್ರಭೇದಗಳಿವೆ.

ಎಷ್ಟು ದೂರ: ಬೆಂಗಳೂರಿನಿಂದ 55 ಕಿ.ಮೀ. ದೂರ

ಸಿದ್ಧಗಂಗೆ

ಎಲ್ಲಿದೆ: ತುಮಕೂರು

ವಿಶೇಷ:
ಪ್ರಪಂಚದ ಅತಿ ಎತ್ತರದ ಶಿವಲಿಂಗ ಸ್ಥಳ. ಇಲ್ಲಿ 111 ಅಡಿ ಅಗಲದ, 121 ಅಡಿ ಎತ್ತರದ ಬೃಹತ್ ಕೋಟಿಲಿಂಗೇಶ್ವರವಿದೆ. ಸಿದ್ಧಗಂಗೆ ಬೆಟ್ಟದಲ್ಲಿ ರಾಜ್ಯದ ಪ್ರಸಿದ್ಧ ಸಿದ್ದಗಂಗಾ ಮಠವಿದೆ. ಅನ್ನ–ಅಕ್ಷರ–ಜ್ಞಾನ ಹೀಗೆ ತ್ರಿವಿಧ ದಾಸೋಹಕ್ಕೆ ಈ ಮಠ ಖ್ಯಾತವಾಗಿದೆ. ನಿತ್ಯವೂ ಭಕ್ತರಿಗೆ ಅನ್ನದಾಸೋಹ ನಡೆಯುತ್ತದೆ. ಬೆಟ್ಟದಲ್ಲಿ ಹಲವು ಗುಹೆಗಳಿವೆ. ಈ ಗುಹೆಗಳಲ್ಲಿ ಶರಣರು ತಪಸ್ಸು ಮಾಡುತ್ತಿದ್ದರೆಂಬ ನಂಬಿಕೆ ಇದೆ. ಶಿವರಾತ್ರಿಯಂದು ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಎಷ್ಟು ದೂರ: ಬೆಂಗಳೂರಿನಿಂದ 65 ಕಿ.ಮೀ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry