ಶುಕ್ರವಾರ, ಡಿಸೆಂಬರ್ 6, 2019
23 °C

ಹರೆಯದ ಮನಸಿನ ‘ರಂಗ್‌ ಬಿರಂಗಿ’

Published:
Updated:
ಹರೆಯದ ಮನಸಿನ ‘ರಂಗ್‌ ಬಿರಂಗಿ’

ಒಂದು ಹುಡುಗ ಒಂದು ಹುಡುಗಿಯ ಬೆನ್ನ ಹಿಂದೆ ಬೀಳುವುದು, ಒಲಿಸಿಕೊಳ್ಳಲು ಪರದಾಡುವುದು, ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗುವುದು ಎಲ್ಲವೂ ಹಲವಾರು ಸಿನಿಮಾಗಳಲ್ಲಿ ಈಗಾಗಲೇ ಬಂದು ಹೋಗಿವೆ. ಆದರೆ ಮಲ್ಲಿಕಾರ್ಜುನ್‌ ಮುತ್ತಲಗೆರೆ ಅವರ ನಿರ್ದೇಶನದ ‘ರಂಗ್‌ ಬಿರಂಗಿ’ ಸಿನಿಮಾ ಇವುಗಳಿಗಿಂತ ಕೊಂಚ ಭಿನ್ನ.

ಇಲ್ಲಿ ಒಂದು ಹುಡುಗಿಯ ಹಿಂದೆ ನಾಲ್ಕು ಹುಡುಗರು ಬೀಳುತ್ತಾರೆ. ಹದಿಹರೆಯದ ಮನಸ್ಸುಗಳ ಪುಂಡಾಟ, ತುಮುಲ, ತಲ್ಲಣ ಅವುಗಳ ಪರಿಣಾಮ ಎಲ್ಲವನ್ನೂ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ ನಿರ್ದೇಶಕರು.

‘ಇದು ಹದಿಹರೆಯದ ಹುಡುಗರ ಸಿನಿಮಾ. ಈಗಿನ ತಲೆಮಾರಿನ ಹುಡುಗರ ಕಥೆ. ನಾಲ್ಕು ಹುಡುಗರು ಒಂದೇ ಹುಡುಗಿಗೆ ಬಲೆ ಬೀಸಲು ಹೋಗಿ ಏನೇನೆಲ್ಲ ಎದುರಿಸುತ್ತಾರೆ, ತಮ್ಮ ಪ್ರೀತಿ ಉಳಿಸಿಕೊಳ್ಳಲು ಯಾವ ರೀತಿಯ ತೊಂದರೆ ಅನುಭವಿಸುತ್ತಾರೆ ಎನ್ನುವುದೇ ಈ ಸಿನಿಮಾದ ತಿರುಳು’ ಎಂದು ವಿವರಿಸುತ್ತಾರೆ ಮಲ್ಲಿಕಾರ್ಜುನ್‌.

‘ರಂಗ್‌ ಬಿರಂಗಿ’ಯನ್ನು ಇದೇ ತಿಂಗಳು 23ರಂದು ತೆರೆಗೆ ತರಲು ತಂಡ ಸಿದ್ಧತೆ ನಡೆಸಿದೆ. ಮಲ್ಲಿಕಾರ್ಜುನ್‌ ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆಯ ನೊಗವನ್ನೂ ಹೊತ್ತಿದ್ದಾರೆ. ಇದು ಅವರ ನಿರ್ದೇಶನದ ಎರಡನೇ ಸಿನಿಮಾ.

‘ಹುಚ್ಚು ಕುದುರೆಯ ಬೆನ್ನೇರಿ’ ಎಂಬ ಅಡಿಟಿಪ್ಪಣಿಯೂ ಚಿತ್ರದ ಕಥೆಯನ್ನು ಹೇಳುವಂತಿದೆ. ಚಿತ್ರದಲ್ಲಿ ಮಂಡ್ಯನ ಹುಡುಗನಾಗಿ ಶ್ರೀಜಿತ್‌ ನಟಿಸಿದ್ದಾರೆ. ನಿರುದ್ಯೋಗಿ ಹುಡುಗನಾಗಿ ಪಂಚಾಕ್ಷರಿ, ಕಾಲೇಜು ವಿದ್ಯಾರ್ಥಿಯಾಗಿ ಚರಣ್‌, ಮೆಕ್ಯಾನಿಕ್‌ ಪಾತ್ರದಲ್ಲಿ ಶ್ರೇಯಸ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ತನ್ವಿ ರಾವ್‌ ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾಗುತ್ತಿದ್ದಾರೆ. ಗೋವಾ, ಮಂಗಳೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಯಂತ ಕಾಯ್ಕಿಣಿ, ಮಾರುತಿ ಟಿ. ಜತೆಗೆ ಮಲ್ಲಿಕಾರ್ಜುನ್‌ ಕೂಡ ಹಾಡುಗಳಿಗೆ ಪದ ಪೋಣಿಸಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ನಂದಕಿಶೋರ್‌ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರತಿಕ್ರಿಯಿಸಿ (+)