ಶುಕ್ರವಾರ, ಡಿಸೆಂಬರ್ 6, 2019
26 °C

ಯಲಚೇನಹಳ್ಳಿ: ಒಂದೇ ಪ್ಲ್ಯಾಟ್‌ಫಾರ್ಮ್‌ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಚೇನಹಳ್ಳಿ: ಒಂದೇ ಪ್ಲ್ಯಾಟ್‌ಫಾರ್ಮ್‌ ಬಳಕೆ

ಬೆಂಗಳೂರು: 'ನಮ್ಮ ಮೆಟ್ರೊ' ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ಯಲಚೇನಹಳ್ಳಿ– ಜೆ.ಪಿ.ನಗರ ನಿಲ್ದಾಣದ ನಡುವಿನ ಒಂದು ಹಳಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಈ ಮಾರ್ಗದ ಕೊನೆಯ ನಿಲ್ದಾಣವಾದ ಯಲಚೇನಹಳ್ಳಿಯಲ್ಲಿ ಶುಕ್ರವಾರ ಒಂದು ಪ್ಲ್ಯಾಟ್‌ಫಾರ್ಮ್‌ ಮಾತ್ರ ಬಳಸಲಾಯಿತು.

‘ಯಲಚೇನಹಳ್ಳಿಯಲ್ಲಿ ಮೆಜೆಸ್ಟಿಕ್‌ ಕಡೆಯಿಂದ ಬಂದವರನ್ನು ಇಳಿಸಲು ಹಾಗೂ ಮೆಜೆಸ್ಟಿಕ್‌ ಕಡೆಗೆ ಹೋಗುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಒಂದೇ ಪ್ಲ್ಯಾಟ್‌ಫಾರ್ಮ್‌ ಬಳಸಲಾಯಿತು’ ಎಂದು ಪ್ರಯಾಣಿಕ ಪವನ್‌ ವಸಿಷ್ಠ ‘ಪ್ರಜಾವಾಣಿ’ಗೆ ತಿಳಿಸಿದರು.

ಹಳಿಯಲ್ಲಿ ಬಿರುಕು?:

‘ನಾನು ನಿತ್ಯ ಮೆಟ್ರೊದಲ್ಲಿ ಪ್ರಯಾಣಿಸುತ್ತೇನೆ. ಮೆಜೆಸ್ಟಿಕ್‌ನಿಂದ ಬರುವಾಗ ಸಾಮಾನ್ಯವಾಗಿ ಎಡಭಾಗದ ಫ್ಲ್ಯಾಟ್‌ಫಾರ್ಮ್‌ನಲ್ಲಿ ಇಳಿಯಬೇಕು. ಆದರೆ, ಇಂದು ಬಲಭಾಗದ ಪ್ಲ್ಯಾಟ್‌ಫಾರ್ಮ್‌ನಲ್ಲಿ ಇಳಿಯಬೇಕಾಯಿತು. ಈ ಬಗ್ಗೆ ನಿಲ್ದಾಣದ ಸಿಬ್ಬಂದಿಯಲ್ಲಿ ವಿಚಾರಿಸಿದೆ. ಹಳಿಯಲ್ಲಿ ಗುರುವಾರ ರಾತ್ರಿ ಬಿರುಕು ಕಾಣಿಸಿಕೊಂಡಿದ್ದು, ಹಾಗಾಗಿ ಒಂದು ಹಳಿಯನ್ನು ಮಾತ್ರ ಬಳಸಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದರು’ ಎಂದು ಪ್ರಯಾಣಿಕರಾದ ಪೂರ್ಣಿಮಾ ತಿಳಿಸಿದರು.

‘ಜೆ.ಪಿ.ನಗರ ನಿಲ್ದಾಣ ದಾಟಿ ಬಂದ ಬಳಿಕ ರೈಲನ್ನು ಮಾರ್ಗ ಮಧ್ಯೆಯೇ ನಿಲ್ಲಿಸಿದರು. ಆಗ, ನಿಲ್ದಾಣ ಬಂದಿತು ಎಂದು ಭಾವಿಸಿ ಪ್ರಯಾಣಿಕರು ಇಳಿಯಲು ಸಜ್ಜಾದರು. ಆದರೆ, ಬಾಗಿಲುಗಳು ತೆರೆಯಲಿಲ್ಲ. ನಂತರ ರೈಲು ಹಳಿ ಬದಲಾಯಿಸಿತು’ ಎಂದರು. 

ಹಳಿಯಲ್ಲಿ ದೋಷ ಕಾಣಿಸಿಕೊಂಡಿರುವ ಬಗ್ಗೆ ಈ ನಿಲ್ದಾಣದ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಇಡೀ ದಿನ ಒಂದೇ ಫ್ಲ್ಯಾಟ್‌ಫಾರ್ಮ್‌ ಬಳಸಿರುವುದನ್ನು ಒಪ್ಪಿಕೊಂಡರು. ಯಾವಾಗ ದೋಷ ಕಾಣಿಸಿಕೊಂಡಿತು. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ವಿವರ ನೀಡಲು ನಿರಾಕರಿಸಿದರು.

‘ಮೆಟ್ರೊ ಜಾಲದಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷ ಕಾಣಿಸಿಕೊಳ್ಳುವುದು ಮಾಮೂಲಿ. ಇದರಿಂದಾಗಿ ಪ್ರಯಾಣಿಕರಿಗೆ ಅನನುಕೂಲ ಆಗದಂತೆ ನಾವು ಎಚ್ಚರ ವಹಿಸುತ್ತೇವೆ. ಯಲಚೇನಹಳ್ಳಿ ನಿಲ್ದಾಣದ ಬಳಿ ದೋಷ ಕಾಣಿಸಿಕೊಂಡಿದ್ದರೂ, ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ’ ಎಂದು ನಿಗಮದ ಕಾರ್ಯಾಚರಣೆ ಹಾಗೂ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅದೃಷ್ಟವಶಾತ್‌ ಕೊನೆಯ ನಿಲ್ದಾಣದ ಬಳಿ ಹಳಿಯಲ್ಲಿ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಒಂದು ಹಳಿಯನ್ನು ಬಳಸಿ ರೈಲು ಸಂಚಾರವನ್ನು ಮುಂದುವರಿಸಲು ಸಾಧ್ಯವಾಗಿದೆ. ಮಾರ್ಗ ಮಧ್ಯದ ನಿಲ್ದಾಣಗಳ ಬಳಿ ಈ ರೀತಿ ಆಗುತ್ತಿದ್ದರೆ ರೈಲು ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇತ್ತು ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)