ಬುಧವಾರ, ಡಿಸೆಂಬರ್ 11, 2019
17 °C

ಅಕಾಲಿಕ ಮಳೆ: ಬಾಳೆ ಬೆಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕಾಲಿಕ ಮಳೆ: ಬಾಳೆ ಬೆಳೆ ನಾಶ

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಶುಕ್ರವಾರ ಸಂಜೆ ಗುಡುಗು ಸಹಿತ ಜೋರಾಗಿ ಸುರಿದ ಮಳೆಯಿಂದ ಮಾಡ್ರಹಳ್ಳಿ ಗ್ರಾಮದಲ್ಲಿ ಬಾಳೆ ಬೆಳೆ ನಾಶವಾಗಿದೆ. ಗ್ರಾಮದ ನಾಗೇಂದ್ರ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ನೆಲಕ್ಕುರುಳಿದ್ದು, ಅಪಾರ ನಷ್ಟ ಉಂಟಾಗಿದೆ.

ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ಬಂಡೀಪುರ ಭಾಗದಲ್ಲಿ ಮತ್ತು ಗೋಪಾಲಸ್ವಾಮಿ ಬೆಟ್ಟದ ಪಾದದಲ್ಲಿರುವ ದೇವರಹಳ್ಳಿ, ಗೋಪಾಲಪುರ, ಬೇರಂಬಾಡಿ, ಕನ್ನೇಗಾಲ, ಚೆನ್ನಮಲ್ಲಿಪುರ, ಮದ್ದೂರು ಗ್ರಾಮಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.

ಹಂಗಳ ಹೋಬಳಿ ಭಾಗದಲ್ಲಿ ಮತ್ತು ಕಾಡಂಚಿನ ಗ್ರಾಮಗಳಾದ ಮಗುವಿನಹಳ್ಳಿ, ಮಂಗಲ, ಕಣಿಯನಪುರ ಗ್ರಾಮಗಳಲ್ಲಿ ಗುಡುಗು ಸಹಿತ ಸ್ವಲ್ಪಮಟ್ಟಿಗೆ ಮಳೆಯಾಗಿದೆ. ‘ಯುಗಾದಿಯ ಬಳಿಕ ಮಳೆಯಾಗಿ ದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಈ ಸಮಯದಲ್ಲಿ ಹಲವು ರೈತರು ಅರಿಸಿನವನ್ನು ಕಿತ್ತು ಬೇಯಿಸಿ ಒಣಗಿಸುವ ಹಂತದಲ್ಲಿದ್ದಾರೆ. ಅವರಿಗೆ ಮಳೆಯಿಂದ ನಷ್ಟವಾಗುತ್ತಿದೆ’ ಎಂದು ರೈತ ಮಹೇಶ್ ತಿಳಿಸಿದರು.

ಜಿಲ್ಲೆಯ ವಿವಿಧೆಡೆ ತುಂತುರು ಮಳೆ

ಜಿಲ್ಲೆಯ ವಿವಿಧೆಡೆ ದಿನವಿಡೀ ಮೋಡ ಮತ್ತು ಬಿಸಿಲಿನ ಆಟ ನಡೆದಿತ್ತು. ಸಂಜೆ ವೇಳೆ ದಟ್ಟ ಮೋಡ ಕವಿದು ಭಾರಿ ಮಳೆಯ ಸೂಚನೆ ನೀಡಿತ್ತು. ಕೊಳ್ಳೇಗಾಲದಲ್ಲಿ ಏಳು ಗಂಟೆ ಸುಮಾರಿಗೆ ಉತ್ತಮ ಮಳೆ ಸುರಿಯಿತು. ಚಾಮರಾಜನಗರ, ಯಳಂದೂರು, ಹನೂರು ಭಾಗಗಳಲ್ಲಿ ಕೆಲವು ಹನಿಗಳ ಸಿಂಚನವಾಯಿತು.

ಪ್ರತಿಕ್ರಿಯಿಸಿ (+)