ಯಡಿಯೂರಪ್ಪನವರ ಕೊಳೆಗೇರಿ ವಾಸ್ತವ್ಯ ಕೇವಲ ಚುನಾವಣಾ ಗಿಮಿಕ್: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯುಡಿಯೂರಪ್ಪ ಅವರು ಕೈಗೊಂಡಿರುವ ಕೊಳೆಗೇರಿ ವಾಸ್ತವ್ಯ ಕೇವಲ ಚುನಾವಣಾ ಗಿಮಿಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ‘ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದ ನಾಯಕರು ಕೊಳೆಗೇರಿಗಳಲ್ಲಿ ವಾಸ್ತವ್ಯ ಹೂಡುತ್ತಿರುವುದು ಕೇವಲ ಚುನಾವಣಾ ಗಿಮಿಕ್ ಆಗಿದೆ. ದಲಿತರ ಮನೆಗೆ ಹೋಗುವುದಕ್ಕೂ ಮೊದಲು ಬಿಜೆಪಿಯವರು ದಲಿತರಿಗಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸುವ ಧೈರ್ಯ ಮಾಡಬಹುದಾ?’ ಎಂದು ಪ್ರಶ್ನಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪಕ್ಷದವರ ಸ್ಲಂ ವಾಸ್ತವ್ಯ ಕೇವಲ ಚುನಾವಣಾ ಸ್ಟಂಟ್. ದಲಿತರ ಮನೆಗೆ ಹೋಗುವ ಇವರು, ಮೊದಲು ದಲಿತರಿಗೇನು ಮಾಡಿದ್ದಾರೆ ಎಂದು ತಿಳಿಸುವ ಧೈರ್ಯ ಮಾಡಬಹುದಾ?
— Siddaramaiah (@siddaramaiah) February 10, 2018
ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಇಲ್ಲಿನ ಗಾಂಧಿ ನಗರದ ಕೊಳೆಗೇರಿಯಲ್ಲಿ ಶನಿವಾರ (ಫೆ.10) ವಾಸ್ತವ್ಯ ಹೂಡುವುದಾಗಿ ತಿಳಿಸಿದ್ದರು.
ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರ ಕೊಳೆಗೇರಿ, ಕೆ.ಎಸ್. ಈಶ್ವರಪ್ಪ ಶಿವಮೊಗ್ಗದ ಎನ್.ಟಿ. ರಸ್ತೆಯ ಮಂಡಲಿ ಕೊಳೆಗೇರಿ, ಶಾಸಕ ಗೋವಿಂದ ಕಾರಜೋಳ ವಿಜಯಪುರದ ಸಮಗಾರ ಓಣಿ, ಸಂಸದೆ ಶೋಭಾ ಕರಂದ್ಲಾಜೆ ಮೈಸೂರಿನ ಕ್ಯಾತಮಾರನಹಳ್ಳಿ ಕೊಳೆಗೇರಿಯಲ್ಲಿ ವಾಸ್ತವ್ಯ ಮಾಡುವರು.
ಕೊಳೆಗೇರಿ ನಿವಾಸಿಗಳ ಬಗ್ಗೆ ತಮ್ಮ ಬದ್ಧತೆ ಸಾರಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ರಾತ್ರಿ ಕೊಳೆಗೇರಿಗಳಲ್ಲಿನ ಒಂದು ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಎನ್. ರವಿಕುಮಾರ್ ತಿಳಿಸಿದ್ದರು.