4

ಬಾಳಂಬೀಡ ಏತ ನೀರಾವರಿ ಯೋಜನೆ ಘೋಷಣೆಗೆ ಆಗ್ರಹ

Published:
Updated:

ಹಾನಗಲ್: ‘ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ತಾಲ್ಲೂಕಿನ ಬಾಳಂಬೀಡ ಏತ ನೀರಾವರಿ ಯೋಜನೆಯ ಘೋಷಣೆಯಾಗಬೇಕು. 103 ಕೆರೆಗಳಿಗೆ ನೀರು ತುಂಬಿಸುವ ಈ ಮಹತ್ತರ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮಿಸಲಿಡಲು ಸರ್ಕಾರಕ್ಕೆ ಒತ್ತಾಯಿಸಬೇಕು’ ಎಂದು ಆಗ್ರಹಿಸಿ ಶುಕ್ರವಾರ ರೈತ ಸಂಘದಿಂದ ಶಾಸಕ ಮನೋಹರ ತಹಸೀಲ್ದಾರ್‌ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

‘ತಾಲ್ಲೂಕಿನ ಬಮ್ಮನಹಳ್ಳಿ, ಬೆಳಗಾಲಪೇಟೆ ಭಾಗದಲ್ಲಿ ನದಿ ಹರಿದಿಲ್ಲ, ಇಲ್ಲಿ ನೀರಾವರಿ ಯೋಜನೆಗಳೂ ಇಲ್ಲ, ಹೀಗಾಗಿ, ವರದಾ ನದಿ ನೀರು ಬಳಸಿಕೊಂಡು ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸರ್ವೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಯೋಜನೆ ಅನುಷ್ಠಾನಕ್ಕೆ ತರಬೇಕು’ ಎಂದು ಮನವಿಯಲ್ಲಿ ಕೋರಲಾಗಿದೆ.

ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ‘ಎರಡು ತಿಂಗಳ ಹಿಂದೆ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಹಾನಗಲ್‌ಗೆ ಬಂದಿದ್ದ ಸಿ.ಎಂ ಸಿದ್ದರಾಮಯ್ಯ ಈ ಯೋಜನೆ ಅನುಷ್ಠಾನದ ಭರವಸೆ ನೀಡಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಅವರ ಘೋಷಣೆಯನ್ನು ನೆನಪಿಸಿ ಬಜೆಟ್‌ನಲ್ಲಿ ಯೋಜನೆ ಸೇರಿಸಬೇಕು’ ಎಂದು ಆಗ್ರಹಿಸಿದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿದರು.

ಮನವಿಪತ್ರ ಸ್ವಿಕರಿಸಿ ಮಾತನಾಡಿದ ಶಾಸಕ ಮನೋಹರ ತಹಸೀಲ್ದಾರ್‌, ‘ತಾಲ್ಲೂಕಿನ 55 ಗ್ರಾಮಗಳಿಗೆ ಅನುಕೂಲ ಆಗುವ ಉದ್ದೇಶಿತ ಬಾಳಂಬೀಡ ಏತ ನೀರಾವರಿ ಯೋಜನೆಗೆ ₹  244 ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ. ಬಹು ನಿರೀಕ್ಷಿತ ಈ ಯೋಜನೆ ಬಜೆಟ್‌ನಲ್ಲಿ ಘೋಷಣೆಯಾಗುವ ಭರವಸೆ ಇದೆ. ಇದು ಪ್ರತಿಷ್ಟೆಯ ಯೋಜನೆಯೂ ಆಗಿದ್ದು, ಅನುಷ್ಠಾನ ನಿಶ್ಚಿತ’ ಎಂದರು.

ಬೆಳೆವಿಮೆ: ನಂತರ ತಹಶೀಲ್ದಾರ್‌ ಶಕುಂತಲಾ ಚೌಗಲಾ ಅವರಿಗೆ ಮನವಿ ಸಲ್ಲಿಸಿದ ರೈತಸಂಘದವರು 2015–16 ಮತ್ತು 2016–17 ನೇ ಸಾಲಿನ ಬೆಳೆವಿಮೆ ಪರಿಹಾ ಮೊತ್ತ ರೈತರ ಖಾತೆಗೆ ಜಮೆ ಮಾಡದಿದ್ದರೆ ಪಟ್ಟಣ ಬಂದ್‌ ಮಾಡಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ, ವಾಸುದೇವ ಕಮಾಟಿ, ರುದ್ರಪ್ಪ ಹಣ್ಣಿ, ರಾಜು ದಾನಪ್ಪನವರ, ಶ್ರೀಕಾಂತ ದುಂಡಣ್ಣನವರ, ಮಹೇಶ ವಿರುಪಣ್ಣನವರ, ಸುರೇಂದ್ರ ಬಿದರಗಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry