ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನೆಂಬೆ ನಾ...

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದೇವರು ಮತ್ತು ಮನುಷ್ಯರಲ್ಲಿ ಯಾರು ಯಾರನ್ನು ಸೃಷ್ಟಿಸಿದರು ಎಂಬುದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಚರ್ಚೆ. ಈ ಎರಡೂ ವಾದಗಳಿಗೆ ಪೂರಕವಾದಷ್ಟು ಮಾಹಿತಿ ಎಷ್ಟಾದರೂ ನೀಡಬಹುದು. ಅಂತಿಮವಾಗಿ ಯಾವ ನಿರ್ಣಯಕ್ಕೂ ಬರಲಾಗದೆ ಅವರವರ ವಾದದಲ್ಲಿ ನಿಲ್ಲಬಹುದು ಅಥವಾ ತೃಪ್ತಿಪಟ್ಟುಕೊಳ್ಳಬಹುದು. ಹಾಗೆಯೇ ಶಿವನ ವಿಷಯದಲ್ಲೂ.

ಶಿವ ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದಾನೆ (ಈ ಧರ್ಮದ ಅರ್ಥವ್ಯಾಪ್ತಿ ಬಗ್ಗೆ ಚರ್ಚೆ ಇಲ್ಲಿ ಪ್ರಸ್ತುತವಲ್ಲ). ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕ್ರಮವಾಗಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು(ಶಿವನನ್ನು) ಹೊಣೆಗಾರರನ್ನಾಗಿ ಮಾಡಲಾಗಿದೆ. ಇಲ್ಲಿ ಮಹೇಶ್ವರನ ಕಾರ್ಯ ಲಯ ಮಾಡುವುದು. ಅಂದರೆ ನಾಶ ಮಾಡುವುದು. ಹೀಗಾಗಿ ಶುಭಕರವಲ್ಲದ ಕಾರ್ಯವನ್ನು ಮಾಡುವವನು ಮಹೇಶ್ವರ. ಇವನನ್ನು ತ್ರಿನೇತ್ರ- ಮುಕ್ಕಣ್ಣನೆಂದೂ ರೂಪಿಸಲಾಗಿದೆ. ಈ ಲಯಕಾರನನ್ನು ಸೃಷ್ಟಿಸಿದವರು ಯಾರು? ಉತ್ತರಕ್ಕಾಗಿ ನಮ್ಮ ದೇಶದಲ್ಲಿ ಲಭ್ಯವಿರುವ ಧರ್ಮಾಧಾರಿತ ಗ್ರಂಥಗಳತ್ತ ಗಮನ ಹರಿಸಬೇಕಾದುದು ಅನಿವಾರ್ಯವಾಗುತ್ತದೆ.

ವೇದಗಳಿಂದ ಆರಂಭಿಸೋಣ. ಇಲ್ಲಿ ಎಲ್ಲಾದರೂ ದ್ರಾವಿಡ ಮೂಲದ ಶಿವ ಹೆಸರಿನ ಸೂಚನೆ ಇದೆಯೆ? ಇಲ್ಲ. ಶಿವ ಅಂದರೆ ಮಂಗಳಕರವಾದ, ಶುಭಕರವಾದ ಹೆಸರಿನ ಪ್ರಸ್ತಾಪವೇ ಇಲ್ಲ. ಋಗ್ವೇದದಲ್ಲಿ ರುದ್ರ ಎಂಬ ದೇವತೆಯ ಹೆಸರು ಅನೇಕ ಕಡೆ ಪ್ರಸ್ತಾಪಿತವಾಗಿದೆ. ಆದರೆ, ಅದು ಮಂಗಳಕರನಾದ ಶಿವ ಅಲ್ಲ. ಆದರೂ ದ್ರಾವಿಡ ಶಿವ ಮತ್ತು ಆರ್ಯ ರುದ್ರ ಹೇಗೆ ಒಂದೇ ಎಂಬಂತೆ ಸಮೀಕರಿಸಲಾಯಿತು?

ಕನ್ನಡ ಮತ್ತು ಭಾರತದ ತಲಸ್ಪರ್ಶಿ ಸಂಶೋಧಕರಾದ ಶಂಬಾ ಜೋಶಿ ಅವರತ್ತ ಗಮನ ಹರಿಸೋಣ. ಅವರ ಪ್ರಕಾರ ದ್ರಾವಿಡ ಮೂಲದ ಶಿವ ಶಿನ್‌ ಧಾತುವಿನಿಂದ ಹುಟ್ಟಿದೆ. ಅದರ ಅರ್ಥ ಕೆಂಪು ಎಂದು. ರುದ್ರ ಎಂದ ಪದವು ರುದ್ ಧಾತುವಿನಿಂದ ಜನ್ಯವಾಗಿದೆ. ಅದರ ಅರ್ಥ ಕೆಂಪು ಎಂದು. ಈ ಅರ್ಥವನ್ನು ಸಾಮಾನ್ಯವಾಗಿ ಪೌರ್ವಾತ್ಯ ಹಾಗೂ ಪಾಶ್ಚಾತ್ಯ ವೇದವಿದ್ವಾಂಸರು ಒಮ್ಮತಿಸಿದ್ದಾರೆ. ಹಾಗಾಗಿ ಶಿವ ಎಂದರೂ ಕೆಂಪು ಎಂದೇ ಅರ್ಥ. ರುದ್ರನು ಕೆಂಪು. ಆದುದರಿಂದ ರುದ್ರ ಮತ್ತು ಶಿವ ಎಂದರೆ ಬೇರೆ ಅಲ್ಲ. ರುದ್ರ ಎಂದರೆ ಶಿವ, ಶಿವ ಎಂದರೆ ರುದ್ರ(ಹೆಚ್ಚಿನ ವಿವರಗಳಿಗೆ ನೋಡಿ- ಶಿವ ರಹಸ್ಯ ಲೇ:ಶಂಬಾ ಜೋಶಿ). ಆದರೆ ಶಿವನಂತೆ ರುದ್ರನು ಮಂಗಳಕರನಲ್ಲ. ರುದ್ರನು ಸಂಹಾರಕಾರಿ, ಪ್ರಳಯದ ದೇವತೆ. ಆ ಮುಂದಿನ ದಿನಗಳಲ್ಲಿ ಶಿವ=ರುದ್ರ=ಮಹೇಶ್ವರ ಎಂದಾಗಿದೆ. ಇದರಂತೆ ಶಿವನು ದ್ರಾವಿಡ ಬಣದ ನಾಯಕನಾಗಿದ್ದನೆಂಬ ಇನ್ನೊಂದು ಅರ್ಥವಿನ್ಯಾಸವೂ ಇದೆ.

ಮೂಲದಲ್ಲಿ ಶಿವನು ದ್ರಾವಿಡ ನಾಯಕ ಅಥವಾ ದೇವರು ಆಗಿದ್ದನೆಂಬುದಕ್ಕೆ ಇಂದಿನ ದ್ರಾವಿಡ ಸಮುದಾಯಗಳಲ್ಲಿರುವ ಬೇರೆ ಬೇರೆ ಆಚರಣೆಗಳು, ಕಥೆಗಳು ಸಾಕಷ್ಟು ಮಾಹಿತಿಯನ್ನು ನೀಡುತ್ತವೆ. ದ್ರಾವಿಡದ ಒಂದು ಗುಂಪಾದ ಕನ್ನಡಿಗರನ್ನೇ ತೆಗೆದುಕೊಳ್ಳಿ. ಕನ್ನಡಿಗರಲ್ಲಿ ಥರಾವರಿ ಜಾತಿಗಳು ಇದ್ದೇ ಇವೆಯಲ್ಲ? ಥರಾವರಿ ಜಾತಿಯ ಜನರು(ಬಹುಪಾಲು)ಇಂದಿಗೂ ಶಿವನ ಆರಾಧಕರೇ ಅಲ್ಲವೆ?

ಇನ್ನು ಜನಪದ ಸಾಹಿತ್ಯದಲ್ಲಿ ಜನರಿಗಾಗಲಿ, ಪ್ರಾಣಿಗಾಗಲಿ ಕಷ್ಟ ಬಂದಾಗ ಅದನ್ನು ಪರಿಹರಿಸುವ ದೇವರು ಯಾರು? ಸಾಮಾನ್ಯವಾಗಿ, ಶಿವ ಮತ್ತು ಆತನ ಹೆಂಡತಿಯಾದ ಪಾರ್ವತಿ ಅಲ್ಲವೆ? ಹಾಗೆಯೇ ಪುರಾಣೇತಿಹಾಸಗಳನ್ನು ತೆಗೆದುಕೊಳ್ಳಿ. ಅಲ್ಲೆಲ್ಲ ರಾಕ್ಷಸ ಪಾತ್ರಧಾರಿಯಾದ ದ್ರಾವಿಡರು ಪೂಜಿಸುವುದು ಶಿವನನ್ನು ತಾನೆ? ಹೀಗೆ ದ್ರಾವಿಡರ ನಾಯಕನಾಗಿ (ದೇವರಾಗಿ) ಶಿವ ಕಾಣುತ್ತಾನೆ ಮತ್ತು ರಾಕ್ಷಸರ ವೈರಿ ವಿಷ್ಣುವೇ ಆಗಿರುತ್ತಾನೆ. ದುರಂತವೆಂದರೆ ಹಲವಾರು ರಾಕ್ಷಸರನ್ನು ಶಿವನೇ ಕೊಲ್ಲುತ್ತಾನೆ.

ಶಿವ ಪೂಜೆಯ ಕುರುಹುಗಳು ಎಲ್ಲಿ ಸಿಗುತ್ತವೆ?
ಋಗ್ವೇದದಲ್ಲಿ ರುದ್ರನ ಉಲ್ಲೇಖವಿದೆ. ಆದರೆ ಶಿವನಂತೂ ಅಲ್ಲ. ಉಪನಿಷತ್ತುಗಳಲ್ಲಿ ಮಹಾದೇವ ಪದದ ಉಲ್ಲೇಖವಿದೆ. ಆದರೆ, ಮಹಾದೇವ ಶಿವನೆ? ಗೊತ್ತಿಲ್ಲ. ಜೈನ ತೀರ್ಥಂಕರ ಮಹಾವೀರನ ಕಾಲದಲ್ಲಿ (ಕ್ರಿ.ಪೂ. 500) ಶಿವನ ಪೂಜೆ ಇತ್ತು ಎಂದು ಜೈನ ಗ್ರಂಥಗಳು ಹೇಳುತ್ತವೆ. ದೀಪ, ಧೂಪ, ಹೂಗಳಿಂದ ಜನರು ಪೂಜಿಸುತ್ತಿದ್ದರು. ಅಂದರೆ, ಆ ಹೊತ್ತಿಗೆ ಆತ ಸ್ಪಷ್ಟವಾಗಿ ದೇವರಾಗಿ ಪರಿವರ್ತನೆ ಹೊಂದಿದ್ದ. ಸಂಸ್ಕೃತದ ವ್ಯಾಕರಣಕಾರ ಪಾಣಿನಿಯ ಅಷ್ಟಾಧ್ಯಾಯದಲ್ಲಿ ಶರ್ವ, ಜವ, ರೂಢ, ಮೃಢ ಮೊದಲಾದ ಶಿವನ ಬೇರೆ ಬೇರೆ ಹೆಸರುಗಳು ಬಳಕೆಯಲ್ಲಿರುವುದು ಕಂಡುಬರುತ್ತದೆ.

ಸಂಸ್ಕೃತ ನಾಟಕಕಾರ ಭಾಸ ನಾಟಕಗಳಲ್ಲಿ ಶಿವಪೂಜೆಯನ್ನು ಹೆಸರಿಸಿದ್ದಾನೆ. ಅರ್ಧನಾರೀಶ್ವರ ಕಲ್ಪನೆ ಅಲ್ಲಿ ಕಂಡುಬರುತ್ತದೆ. ಆ ಮುಂದಿನ ವರ್ಷಗಳಲ್ಲಿ ಶಿವನೊಂದಿಗೆ ನಂದಿಯನ್ನೂ ಸೇರಿಸಲಾಗಿದೆ. ಆತ ಪಶುಗಳ ಪತಿ (ಅಂದರೆ ಹೆಚ್ಚು ದನಗಳ ಒಡೆಯ ಅಥವಾ ಪ್ರಾಣಿಗಳ ಒಡೆಯ ಅಂತನ್ನಬಹುದೆ?) ಆಗಿದ್ದರ ಪ್ರತೀಕವಾಗಿ ಈ ಹೆಸರು ಬಂದಿರಲು ಸಾಕು. ಇವನ್ನೆಲ್ಲ ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಸುಮಾರು 2500 ವರ್ಷಗಳಿಂದ ಭಾರತದಲ್ಲಿ ಶಿವನ ಆರಾಧನೆ ನಡೆಯುತ್ತಿದೆ ಎಂದು ಹೇಳಬಹುದಾಗಿದೆ.

ಯಾವಾಗ ಶಿವ ಒಬ್ಬ ದೇವರಾಗಿ ಪರಿವರ್ತನೆ ಹೊಂದಿದನೋ ಆಗ ಅನೇಕ ಬಗೆಯ ಕಥೆ, ಉಪಕಥೆಗಳು ಹುಟ್ಟಿಕೊಳ್ಳತೊಡಗಿದವು. ಕನ್ನಡ ಅಥವಾ ಯಾವುದೇ ಜನಪದ ಸಾಹಿತ್ಯದಲ್ಲೆಲ್ಲ ಈ ಪರಿಸ್ಥಿತಿಯನ್ನು ಕಾಣಬಹುದು. ನಾವು ಹಿಂದಕ್ಕೆ ಸರಿದಂತೆಲ್ಲ ಜನರ ವಿಶ್ವದ ಕಲ್ಪನೆ ಹಾಗೂ ಜ್ಞಾನದ ಹರಹು ಮಿತಗೊಳ್ಳುತ್ತಾ ಹೋಗುತ್ತದೆ. ಜ್ಞಾನ ಕಡಿಮೆಯಾದಂತೆಲ್ಲ ಭಾವುಕತನ, ಭ್ರಾಮಕತನ ಬೆಳೆಯುತ್ತವೆ!? ಅವುಗಳ ಮುಂದುವರಿಕೆಯೇ ಈಗಿನ ಪುರಾಣಗಳು, ಪುಣ್ಯಕಥೆಗಳು(ವೇದೋಪನಿಷತ್ತುಗಳು ಮತ್ತು ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಹಾಗಲ್ಲ. ಅವು ಮನುಷ್ಯನ ಅಂದಿನ ಜ್ಞಾನದ ತಿರುಳು ಮತ್ತು ಸೃಜನಾತ್ಮಕ ಕ್ರಿಯೆಗಳು).

ಆದರೂ, ನಮ್ಮ ದೇವರುಗಳಲ್ಲಿ ಮಾನವೀಯ ಸಂಬಂಧಗಳನ್ನು ಅನ್ವಯಿಸಿ ಲೀಲೆಗಳನ್ನು ಹೆಣೆದಿರುವುದರಿಂದ ಅವು ಪರೋಕ್ಷವಾಗಿ ಮನುಷ್ಯ ಸಂಬಂಧಗಳನ್ನೇ ಹೇಳುತ್ತವೆ. ಶಿವ- ಪಾರ್ವತಿಯರ ಸಂಬಂಧ, ಎರಡನೆಯ ಹೆಂಡತಿ ಗಂಗೆಯ ಆಗಮನ, ಕೆಲವು ಕಡೆ ಚಾಮುಂಡಿಯ ಪ್ರವೇಶ, ಶಿವ ಹೆಣ್ಣನ್ನು ಹುಡುಕಿಕೊಂಡು ಅಲೆಯುವುದು, ದಕ್ಷಯಜ್ಞ ಪ್ರಸಂಗ, ನಂಜನ್ನು ಉಂಡು ನಂಜುಂಡನಾದದ್ದು ಇಂಥ ಪ್ರಸಂಗಗಳಲ್ಲಿ ನಾವು ಮಾನವೀಯ ಎಳೆಗಳನ್ನು ಗುರುತಿಸಬಹುದು. ಆಪತ್ತಿನ ಕಾಲದಲ್ಲಿ ಶಿವನು ನಮ್ಮೆಲ್ಲರನ್ನು ಪೊರೆವನು ಎಂಬ ಬಲವಾದ ನಂಬಿಕೆಯೂ ಇದೆ. ಇಂಥ ಕಾರಣಗಳಿಗಾಗಿ ಶಿವನ ಬಗ್ಗೆ ಗೌರವ, ಭಕ್ತಿ, ಪ್ರೀತಿ ಇದೆ.

ಪರಮ ಪವಿತ್ರವಾದ ಶಿವಕ್ಷೇತ್ರಗಳೆಂದು ಹೆಸರಾದ ಸೌರಾಷ್ಟ್ರದ ಸೋಮನಾಥ, ಶ್ರೀಶೈಲದ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಳೇಶ್ವರ, ನರ್ಮದಾ ನದಿ ತೀರದ ಅಮಲೇಶ್ವರದಲ್ಲಿ ಓಂಕಾರೇಶ್ವರ, ಹಿಮವತ್ಪರ್ವತದಲ್ಲಿ ಕೇದಾರನಾಥ, ಡಾಕಿನಿಯಲ್ಲಿ ಭೀಮಾಶಂಕರ, ಕಾಶಿ ವಿಶ್ವೇಶ್ವರ, ಗೋದಾವರಿಯ ಉಗಮದ ತ್ರ್ಯಂಬಕೇಶ್ವರ, ಪರಳಿಯಲ್ಲಿ ವೈದ್ಯನಾಥ, ದಾರುಕಾವನದಲ್ಲಿನ ನಾಗೇಶ್ವರ, ತಮಿಳುನಾಡಿನ ರಾಮೇಶ್ವರ ಮತ್ತು ಶಿವಾಲಯದಲ್ಲಿನ ಘುಸ್ಮೇಶ್ವರ ಮೊದಲಾದ ಸ್ಥಳಗಳಲ್ಲಿಯೂ ಈಗ ಶಿವನಿರುವುದು ಲಿಂಗ ರೂಪದಲ್ಲಿಯೇ. ಇವೆಲ್ಲವನ್ನೂ ಜ್ಯೋತಿರ್ಲಿಂಗಳೆಂದು ಹೇಳುವುದು ವಾಡಿಕೆ. ವೇದಗಳಲ್ಲಿ ವರ್ಣಿತವಾದ ರುದ್ರ- ಶಿವನೂ ಜ್ಯೋತಿರ್ಮಯನೇ ಆಗಿದ್ದಾನೆ.

ಏನೇ ಆಗಲಿ ಶಿವನ ಆರಾಧನೆಗೆ ಭಾರತದಲ್ಲಿ ಮಹತ್ವದ ಸ್ಥಾನ ಇದೆ. ಶಿವ ಈ ದೇಶದ ಬಹುಸಂಖ್ಯಾತರ ನಾಯಕ(ದೇವರು). ಆ ನಾಯಕನನ್ನು ಪೂಜಿಸಿ ಗೌರವಿಸುತ್ತಿದ್ದೇವೆ. ಹಾಗಾಗಿಯೇ ಶಿವರಾತ್ರಿಯನ್ನು ಪ್ರತಿವರ್ಷ ಮಾಘ- ಕೃಷ್ಣ ಪಕ್ಷದ ಚತುರ್ದಶಿಯಂದು (ಈ ಬಾರಿ ತ್ರಯೋದಶಿಯಂದು) ಆಚರಿಸುವುದು ಜಾರಿಯಲ್ಲಿದೆ. ಅಮಾವಾಸ್ಯೆ ಹಿಂದಿನ ರಾತ್ರಿ ಪ್ರಕೃತಿಯಲ್ಲಿ ಉಂಟಾಗುವ ಪ್ರಚ್ಛನ್ನ ಪರಿವರ್ತನಾ ಶಕ್ತಿಯನ್ನು ಆದಿ ದೈವಿಕ, ಆದಿ ಭೌತಿಕ ಪ್ರಗತಿಗೆ ಬಳಸಿಕೊಳ್ಳುವ ವಿಶಿಷ್ಟ ಆಚರಣೆಗಳು ಈ ರಾತ್ರಿಯಲ್ಲಿರುವುದರಿಂದ ಆ ರಾತ್ರಿಯನ್ನು ಶಿವರಾತ್ರಿ ಎಂದು ಹೆಸರಿಸಿದ್ದಾರೆ. ಹಾಗೆ ನೋಡಿದರೆ ಎಲ್ಲ ರಾತ್ರಿಗಳೂ ಶಿವರಾತ್ರಿಗಳೇ. ಈ ಪರಿಕಲ್ಪನೆಯಲ್ಲೇ ಸತ್ಯವಾದದ್ದು ಶಿವವಾಗಿರುತ್ತದೆ(ಮಂಗಳಕರವಾಗಿರುತ್ತದೆ) ಹಾಗೂ ಸುಂದರವಾಗಿರುತ್ತದೆ. ‘ಸತ್ಯಂ ಶಿವಂ ಸುಂದರಂ’ ಎಂಬುದು ಭಾರತೀಯ ಜೀವನ ದೃಷ್ಟಿಕೋನವಾಗಿದೆ.

ಶಿವನಿಗೂ ಲಿಂಗಕ್ಕೂ ಏನು ಸಂಬಂಧ?
ಲಿಂಗಪೂಜೆಯ ಕಲ್ಪನೆ ಮತ್ತು ಆಚರಣೆ ಹಿಂದೆ ಇತ್ತು ಎಂಬುದು ದಿಟ. ಲೀಯತೇ ಗಮ್ಯ ಇತಿ ಲಿಂಗಃ ಅಂದರೆ ಭಾವಸಮಾಧಿಯಲ್ಲಿ ತನಗೆ ತಾನೆ ಲೀನವಾಗುವುದು. ಈ ಪ್ರತೀಕವಾಗಿ ಲಿಂಗ ಪರಿಕಲ್ಪನೆ ಮೂಡಿಬಂದಿರಬಹುದು. ಲಿಂಗ ಶಬ್ದವು ಅರ್ವಾಚೀನವಾದುದೆಂದು ತಿಳಿಸುತ್ತಾ ಶಂಬಾ ಜೋಶಿ ಅವರು ಶಿವನನ್ನು ಲಿಂಗವೆಂದು ಭಾವಿಸುವುದು ಅರ್ವಾಚೀನ ಎನ್ನುತ್ತಾರೆ.

ಹಿಂದೂ ದೇಶದೊಳಗಿನ ಆರ್ಯರೂ, ದ್ರಾವಿಡರೂ ಲಿಂಗ ದೇವರನ್ನು ಆಸ್ಟ್ರೋ-ಏಷಿಯಾಟಿಕ್ ಜನಾಂಗದವರಿಂದ ಸ್ವೀಕರಿಸಿರುವ ಸಂಭವವಿದೆ ಎಂಬ ಫ್ರಾನ್ಸಿನ ಸಂಶೋಧಕ ಪ್ರಿಲಿಸ್ಕಿ ಅಭಿಮತವನ್ನು ಮುಂದಿಡುತ್ತಾರೆ. ಅಲ್ಲದೆ ಲಿಂಗಪೂಜಕರಿಗೂ, ಆರ್ಯರಿಗೂ(ಇಂದ್ರನಿಗೂ) ಕಡು ವೈರತ್ವವಿತ್ತು ಎಂದು ಋಗ್ವೇದದ ಎರಡು ಉಲ್ಲೇಖಗಳನ್ನು ನೀಡುತ್ತಾರೆ.(ವಿವರಗಳಿಗೆ ನೋಡಿ- ಶಿವರಹಸ್ಯ- ಶಂಬಾ ಜೋಶಿ) ಲಿಂಗ-ಸೃಷ್ಟಿಯ ಕಾರಣವೂ ಹೌದು. ಶಿಶ್ನೋದೇವಾನ್ ಎಂಬಲ್ಲಿ ಈ ಅರ್ಥ ಧ್ವನಿತವಾಗಿದೆ. ಆದರೂ ಶಿವ-ಲಿಂಗ ಸಾಮರಸ್ಯ ನಿಜಕ್ಕೂ ಕುತೂಹಲಕಾರಿಯಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT