ಮಂಗಳವಾರ, ಡಿಸೆಂಬರ್ 10, 2019
26 °C

ಗುತ್ತಿಗೆ ನೌಕರರ ಕಾಯಂಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುತ್ತಿಗೆ ನೌಕರರ ಕಾಯಂಗೆ ಒತ್ತಾಯ

ಬೆಂಗಳೂರು: ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಗುತ್ತಿಗೆ–ಹೊರಗುತ್ತಿಗೆ ನೌಕರರ ಸಮನ್ವಯ ಸಮಿತಿಯ ಸಂಚಾಲಕಿ ಎಸ್‌.ವರಲಕ್ಷ್ಮಿ ಒತ್ತಾಯಿಸಿದರು.

ಸಮಿತಿ ಹಾಗೂ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿಐಟಿಯು) ಆಶ್ರಯದಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕಾಯಂ ಕೆಲಸ ನಮ್ಮ ಹಕ್ಕು’ ಕುರಿತ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಕಾರ್ಯಕ್ಷಮತೆ ಕ್ಷೀಣಿಸುತ್ತಿದ್ದು, ಇದಕ್ಕೆ ಗುತ್ತಿಗೆ–ಹೊರಗುತ್ತಿಗೆ ನೌಕರರೇ ಕಾರಣ. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂಬ ಕೂಗು ಎದ್ದಿದೆ. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿದರೆ ಲಕ್ಷಾಂತರ ಉದ್ಯೋಗಿಗಳ ಭವಿಷ್ಯ ಏನಾಗಲಿದೆ ಎಂಬುದರ ಕುರಿತೂ ಚಿಂತಿಸಬೇಕಿದೆ ಎಂದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಮೀನಾಕ್ಷಿ ಸುಂದರಂ, ‘ಸರ್ಕಾರ ಹಾಗೂ ನೌಕರರ ನಡುವೆ ಮಾಲೀಕ–ಕಾರ್ಮಿಕ ಸಂಬಂಧ ಇರ

ಬೇಕು. ಆದರೆ, ಅಂತಹ ಸಂಬಂಧ ಕಾಣುತ್ತಿಲ್ಲ. ಸೈನಿಕರು ದೇಶದ ಗಡಿ ಕಾಯುವ ರೀತಿಯಲ್ಲೇ ಗುತ್ತಿಗೆ ನೌಕರರು ಹೋರಾಟಕ್ಕೆ ಸನ್ನದ್ಧರಾಗಬೇಕು’ ಎಂದರು.

‘‍ಪಕೋಡ ಮಾರುವುದು ಒಂದು ಉದ್ಯೋಗ ಎಂದು ಹೇಳಿದವರ ತಲೆಯಲ್ಲಿ ಇರುವುದು ಸಗಣಿ. ಪಕೋಡ ಮಾರುವುದು ಕೆಲಸವಲ್ಲ, ಅದು ಕಸುಬು’ ಎಂದರು.

ಆಯುಷ್‌ ವೈದ್ಯ ಡಾ.ವಿಜಯ್‌ ಕುಮಾರ್‌, ‘ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್‌ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಯಂ, ವೇತನ ಹೆಚ್ಚಳ ಹಾಗೂ ಭತ್ಯೆ ಸೌಲಭ್ಯದಲ್ಲಿ ಅನ್ಯಾಯವಾಗುತ್ತಿದೆ’ ಅಳಲು ತೋಡಿಕೊಂಡರು.

* ಗುತ್ತಿಗೆ ನೌಕರರು ನದಿಯ ದಿಕ್ಕನ್ನೇ ಬದಲಿಸುವ ಹೆಬ್ಬಂಡೆಯಂತಾಗಬೇಕು. ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು

– ಉಮೇಶ್‌, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರ ಸಂಘ

* ರೈತ ಸಂಪರ್ಕ ಕೇಂದ್ರಗಳ ಅಕೌಂಟೆಂಟ್‌ಗಳಿಗೆ ಕೆಲಸದ ಒತ್ತಡ ಹೆಚ್ಚಿದೆ. ಕಸ ಗುಡಿಸುವುದರಿಂದ ಹಿಡಿದು ಎಲ್ಲ ಕೆಲಸವನ್ನೂ ಮಾಡಬೇಕಿದೆ

 – ಸತೀಶ್‌, ಅಕೌಂಟೆಂಟ್‌, ರೈತ ಸಂಪರ್ಕ ಕೇಂದ್ರ

* ನಮ್ಮ ಹೋರಾಟವನ್ನು ಹತ್ತಿಕ್ಕಲು ಶಿವಮೊಗ್ಗ ಭಾಗದ ಫ್ಯಾಸಿಸ್ಟ್‌ ಶಕ್ತಿಗಳು ಪ್ರಯತ್ನಿಸುತ್ತಿವೆ. ಮುಂದಿನ ವರ್ಷವೂ ಸೇವೆ ಮುಂದುವರಿಸುವ ಖಾತ್ರಿ ನೀಡಬೇಕು

– ನಾಗಣ್ಣ, ಅತಿಥಿ ಉಪನ್ಯಾಸಕರ ಸಂಘದ ಪ್ರತಿನಿಧಿ

* ನಮಗೆ ಸೇವಾ ಭದ್ರತೆಗಿಂತ ಜೀವ ಭದ್ರತೆ ಇಲ್ಲ. ಕೆಲಸಕ್ಕೆ ಹೋದರೆ ಮನೆಗೆ ಮರಳಿ ಬರುತ್ತೇವೆ ಎಂಬ ಖಾತ್ರಿ ಇಲ್ಲ

– ತಿಪ್ಪೇಸ್ವಾಮಿ, ಕೆಪಿಟಿಸಿಎಲ್‌ನ ಗುತ್ತಿಗೆ ನೌಕರರ ಸಂಘ

ಪ್ರತಿಕ್ರಿಯಿಸಿ (+)