7

ಕಸದಿಂದ ದುರ್ವಾಸನೆ: ಕ್ರಮಕ್ಕೆ ಆಗ್ರಹ

Published:
Updated:
ಕಸದಿಂದ ದುರ್ವಾಸನೆ: ಕ್ರಮಕ್ಕೆ ಆಗ್ರಹ

ವಿಜಯಪುರ: ಬೆಂಗಳೂರಿನಿಂದ ಕಸವನ್ನು ಸಾಗಾಣಿಕೆ ಮಾಡಿಕೊಂಡು ಬರುವ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಕಸದ ಲಾರಿಗಳು ರಸ್ತೆ ಉದ್ದಕ್ಕೂ ರಸ್ತೆ ಉಬ್ಬುಗಳಲ್ಲಿ ಕಸವನ್ನು ಬೀಳಿಸಿಕೊಂಡು ಹೋಗುತ್ತಿರುವುದರಿಂದ ಕಸದ ದುರ್ವಾಸನೆಯಿಂದ ಇಲ್ಲಿ ವಾಸ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರಾದ ಮುನೇಗೌಡ, ಅರುಣ್ ಕುಮಾರ್, ಸೋಮಶೇಖರ್ ಆರೋಪಿಸಿದರು.

ಶಿಡ್ಲಘಟ್ಟ ಕ್ರಾಸ್‌ನ ಸಮೀಪದಲ್ಲಿ ಬಹುತೇಕ ರಸ್ತೆ ಉಬ್ಬುಗಳ ಬಳಿಯಲ್ಲಿ ಲಾರಿಗಳಿಂದ ಕಸವನ್ನು ಬೀಳಿಸಿಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನಿಂದ ರಾತ್ರಿ ವೇಳೆಯಲ್ಲಿ ಲಾರಿಗಳಲ್ಲಿ ಕಸ ಸಾಗಾಣಿಕೆ ಮಾಡಿಕೊಂಡು ಬರುತ್ತಾರೆ ಎಂದು ದೂರಿದರು.

ಕೆಲವು ಲಾರಿಗಳ ಹಿಂಭಾಗದಲ್ಲಿ ಬಾಗಿಲು ಹಾಕಿರುವುದಿಲ್ಲ. ಟಾರ್ಪಲಿನ್‌ ಮುಚ್ಚಿಕೊಂಡು ಟನ್‌ ಗಟ್ಟಲೆ ಕಸ ತುಂಬಿಕೊಂಡು ವೇಗವಾಗಿ ಬರುತ್ತಾರೆ. ಬಂದು ಗ್ರಾಮಾಂತರ ಪ್ರದೇಶಗಳಲ್ಲಿನ ಪಾಳು ಬಾವಿಗಳಿಗೆ ತುಂಬಿಸಿ ಹೋಗುತ್ತಿದ್ದಾರೆ. ಇದರಿಂದ ಬಾವಿಗಳಲ್ಲಿ ಕೊಳೆಯುವಂತ ಕಸವು ವಿಷವಾಗುತ್ತಿದೆ. ಕೊಳವೆ ಬಾವಿಗಳಲ್ಲಿ ಬರುತ್ತಿರುವ ನೀರು ವಿಷವಾಗುತ್ತಿದೆ ಎಂದು ಆರೋಪಿಸಿದರು.

ಸ್ಥಳೀಯ ಪುರಸಭೆಯವರಿಗೆ ಈ ಬಗ್ಗೆ ದೂರು ಕೊಟ್ಟಿದ್ದೇವೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಲಾರಿಗಳಿಂದ ಬೀಳುತ್ತಿರುವ ಕಸದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಸುತ್ತಲಿನ ಅಂಗಡಿಗಳಲ್ಲಿ ನೆಮ್ಮದಿಯಿಂದ ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೆಂಗಳೂರು ಕಡೆಯಿಂದ ಬರುತ್ತಿರುವ ಕಸಕ್ಕೆ ಕಡಿವಾಣ ಹಾಕಬೇಕು. ಪಾಳುಬಾವಿಗಳಿಗೆ ಸುರಿದಿರುವ ಕಸವನ್ನು ತೆಗೆದು ಸ್ವಚ್ಚಗೊಳಿಸಿ, ವಿಷಕಾರಿಯಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

‘ಲಾರಿಗಳು ಬರುತ್ತಿರುವುದು ಗಮನಕ್ಕೆ ಬಂದಿದೆ. ಲಾರಿಗಳು ಕಸವನ್ನು ತುಂಬಿಕೊಂಡು ಬಂದಾಗ ನಾಗರಿಕರು ದೂರವಾಣಿ ಕರೆ ಮಾಡಿದರೆ ಅನುಕೂಲವಾಗುತ್ತದೆ. ಲಾರಿಗಳ ವಿರುದ್ಧ ಪೊಲೀಸ್ ದೂರು ನೀಡುತ್ತೇವೆ’ ಎಂದು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry