ಮಂಗಳವಾರ, ಡಿಸೆಂಬರ್ 10, 2019
20 °C

ಕಲಾಕೃತಿಗಳಲ್ಲಿ ಜೀವನ ದರ್ಶನ...

Published:
Updated:
ಕಲಾಕೃತಿಗಳಲ್ಲಿ ಜೀವನ ದರ್ಶನ...

ಹುಟ್ಟಿದ ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ತನಗೆ ಸಿಕ್ಕ ಅವಕಾಶ ಸಮರ್ಥವಾಗಿ ಬಳಸಿಕೊಂಡಾಗ ಒಬ್ಬ ಕಲಾವಿದ, ಸಂಗೀತಗಾರ, ನೃತ್ಯಪಟು, ವಿನ್ಯಾಸಕಾರ ಆಗಬಹುದು. ಈ ಹಾದಿಯಲ್ಲಿ ಬೆಳದವರು ಹಿರಿಯ ಚಿತ್ರಕಲಾವಿದ ಬಾಲನ್ ನಂಬಿಯಾರ್. ಅವರ ಕಲಾಕುಂಚದಲ್ಲರಳಿದ ಚಿತ್ರಗಳ ಪ್ರದರ್ಶನ ನಗರದಲ್ಲಿ ನಡೆಯುತ್ತಿದ್ದು ಮಾರ್ಚ್‌ 3ರವರೆಗೆ ಇರಲಿದೆ.

ಅವರ ಆರು ದಶಕದ ವೃತ್ತಿ ಜೀವನದ ಮಹತ್ವದ ನೆನಪುಗಳು ಕಲಾಕೃತಿ ರೂಪದಲ್ಲಿ ಮೈದಾಳಿವೆ. ‘ಕಲಾವಿದನ ಕಲೆಗೆ ಬದುಕಿದ ಪರಿಸರವೇ ಸ್ಫೂರ್ತಿ. ಅನುಭವ ಮತ್ತು ಬದ್ಧತೆ ಅವರಿಂದ ಶ್ರೇಷ್ಠ ಕಲಾಕೃತಿ ಸೃಷ್ಟಿಸುವಂತೆ ಮಾಡುತ್ತದೆ’ ಎನ್ನುವ ಜೀವಾನುಭವ ಬಾಲನ್ ಅವರ ಕಲಾಕೃತಿಗಳಲ್ಲಿ ಕಾಣಬಹುದು.

ಜಲವರ್ಣ, ತೈಲವರ್ಣ ಮತ್ತು ಕ್ಯಾನ್‌ವಾಸ್‌ ಕಲಾಕೃತಿಗಳು ಆಕರ್ಷಿಸುತ್ತವೆ. ಪ್ರತಿ ಕಲಾಕೃತಿಯಲ್ಲೂ ವಸ್ತು ವಿಷಯ, ಮಾಧ್ಯಮ, ಕಲಾವಿದನ ದೃಷ್ಟಿಕೋನದ ವೈವಿಧ್ಯತೆ ಅಡಗಿದೆ. ಅವರ ಉಕ್ಕಿನ ಕಲಾಕೃತಿಗಳು ಏಕತಾನತೆಯನ್ನೂ ಮುರಿದಿವೆ.

ಕೇರಳದ ಒಂದು ಪ್ರಕಾರದ ಆರಾಧನಾ ಕಲೆ ತೆಯ್ಯಂ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಭೂತಾರಾಧನೆ ಕುರಿತು ಸಂಶೋಧನೆ ನಡೆಸಿ ಅವರು ಸೆರೆ ಹಿಡಿದ ಅಪರೂಪದ ಛಾಯಾಚಿತ್ರ‌ಗಳು ಪ್ರದರ್ಶನಗೊಂಡಿರುವುದು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ.

ನಂಬಿಯಾರ್ ಅವರು ಮೂಲತಃ ಕೇರಳದವರು. ದಶಕಗಳಿಂದ ಬೆಂಗಳೂರು ನಿವಾಸಿ. ವಿದ್ಯಾರ್ಥಿಯಾಗಿದ್ದಲೇ ಕಲೆಗೆ ಮಾರುಹೋದ ಅವರು, ಗೆರೆಗಳನ್ನು ಗೀಚಿಲು ಆರಂಭಿಸಿದರು.

1957ರಲ್ಲಿ ಬಾಲನ್ ಅವರ ಕಲಾಕೃತಿಗಳ ಮೊದಲ ಪ್ರದರ್ಶನ ನಡೆದಿತ್ತು. ಅವರ ಕಲಾ ಸಾಧನೆಗೆ 1980ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1981ರಲ್ಲಿ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಂದಿದೆ. ಸತತ 40 ವರ್ಷದಿಂದ ಮಕ್ಕಳಿಗೆ ಉಚಿತ ಚಿತ್ರಕಲೆ ಕಾರ್ಯಾಗಾರ ನಡೆಸುತ್ತಾ ಕಲಾ ಪೋಷಣೆಯಲ್ಲೂ ಅವರು ನಿರತರಾಗಿದ್ದಾರೆ.

ದೆಹಲಿ ಲಲಿತಕಲಾ ಅಕಾಡೆಮಿ‌ ಅಧ್ಯಕ್ಷರಾಗಿ, ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆನ್ ಕಲ್ಚರ್‌ನ ಸದಸ್ಯರೂ ಆಗಿ ಕೆಲಸ ಮಾಡಿದ್ದಾರೆ.

‘ವಿರಳಿ ಪಾಟ್ಟು’, ‘ವಲಂಪಿರಿ ಶಂಕ’ ಮತ್ತು ‘ಕನ್ನಾಡಿ ಬಿಂಬಂ’ ಮುಂತಾದ ಕೃತಿಗಳನ್ನು ಮಲಯಾಳಂ ಭಾಷೆಯಲ್ಲಿ ಬರೆದಿದ್ದಾರೆ.

ಪ್ರತಿಕ್ರಿಯಿಸಿ (+)