ಬುಧವಾರ, ಡಿಸೆಂಬರ್ 11, 2019
26 °C

ಚುನಾವಣೆ ಮುಗಿಯುವವರೆಗೆ ಮಠದಲ್ಲೇ ಅಭ್ಯರ್ಥಿಗಳ ವಾಸ್ತವ್ಯ!

Published:
Updated:
ಚುನಾವಣೆ ಮುಗಿಯುವವರೆಗೆ ಮಠದಲ್ಲೇ ಅಭ್ಯರ್ಥಿಗಳ ವಾಸ್ತವ್ಯ!

ಚನ್ನಗಿರಿ: ಚುನಾವಣೆಯಲ್ಲಿ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಪ್ರಯೋಗ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಆಗರ ಬನ್ನಿಹಟ್ಟಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕೋಡಿ ಬಸವೇಶ್ವರಸ್ವಾಮಿ ದೇವಸ್ಥಾನದ ಪ್ರವೇಶೋತ್ಸವ ಹಾಗೂ ಸರ್ವ ಶರಣರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನೆರಡು ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳು ಈಗಾಗಲೇ ತಯಾರಿ ನಡೆಸಿದ್ದಾರೆ. ಮತದಾರರಿಗೆ ಯಾವ ರೀತಿ ಹಣ, ಹೆಂಡ ಹಂಚಬೇಕು ಎಂಬ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಯೋಗ ನಡೆಸುವ ಚಿಂತನೆಯಿದೆ. ಇದಕ್ಕೆ ಎಲ್ಲಾ ಅಭ್ಯರ್ಥಿಗಳು ಸ್ಪಂದಿಸಬೇಕು ಎಂದು ಕೇಳಿಕೊಂಡರು.

‘ನಮ್ಮ ಸಮ್ಮುಖದಲ್ಲಿ ಮಠದಲ್ಲಿ ಸಭೆ ನಡೆಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡುತ್ತಾರೆ ಎಂಬುದನ್ನು ಸಭೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಘೋಷಿಸಲಿ. ಮತದಾರರೂ ಅದನ್ನು ಕೇಳಿಸಿಕೊಳ್ಳಲಿ. ನಂತರ ಎಲ್ಲಾ ಅಭ್ಯರ್ಥಿಗಳನ್ನು ಚುನಾವಣೆ ಮುಗಿಯುವವರೆಗೆ ಮಠದಲ್ಲಿ ಇಟ್ಟುಕೊಳ್ಳುತ್ತೇವೆ. ಮತದಾರರು ಅವರಿಗೆ ಸರಿಯೆನಿಸಿದ ಅಭ್ಯರ್ಥಿಗಳಿಗೆ ಮತ ನೀಡಲಿ. ಇದರಿಂದ ಹಣ, ಹೆಂಡ ಹಂಚುವುದು ತಪ್ಪುತ್ತದೆ. ಅಭ್ಯರ್ಥಿಗಳು ಸಮ್ಮತಿಸಿದರೆ ಈ ಪ್ರಯೋಗ ನಡೆಸಲಾಗುವುದು’ ಎಂದರು.

‘ಭ್ರಷ್ಟಾಚಾರ ಆರಂಭವಾಗಿರುವುದೇ ಚುನಾವಣೆಗಳಿಂದ. ಅದರಲ್ಲೂ ‘ತೀರ್ಥಯಾತ್ರೆ’ (ಹೆಂಡ ಹಂಚುವುದು) ಶುರುವಾಗಿದ್ದು ಗ್ರಾಮ ಪಂಚಾಯ್ತಿ ಚುನಾವಣೆಗಳಿಂದ. ನಾವು ರಾಜಕೀಯ ಕಲುಷಿತವಾಗಿದೆ ಎಂದು ಮಾತನಾಡಿ ಸುಮ್ಮನಾದರೆ ಆಗುವುದಿಲ್ಲ. ಹೀಗಾಗಿ ಪ್ರಯೋಗ ನಡೆಸಲಾಗುವುದು’ ಎಂದು ಹೇಳಿದರು.

ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರೂ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚನ್ನಗಿರಿ ಕ್ಷೇತ್ರದ ಜೆಡಿಎಸ್‌ ಟಿಕೆಟ್ ಆಕಾಂಕ್ಷಿ ಹೊದಿಗೆರೆ ರಮೇಶ್ ಪದೇ ಪದೇ ಫೋನ್ ಮಾಡಿದರೂ ಪ್ರತಿಕ್ರಿಯೆಗೆ ಸಿಗಲಿಲ್ಲ.

ಒಪ್ಪಿದ ಇಬ್ಬರು ನಾಯಕರು

ಇದಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಸಮ್ಮತಿ ಸೂಚಿಸಿದರು.

‘ಸ್ವಾಮೀಜಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದು ಘೋಷಿಸಿದರು.

* ಇದರಿಂದ ಹಣ, ಹೆಂಡ ಹಂಚುವುದು ತಪ್ಪುತ್ತದೆ. ಅಭ್ಯರ್ಥಿಗಳು ಸಮ್ಮತಿಸಿದರೆ ಈ ಪ್ರಯೋಗ ನಡೆಸಲಾಗುವುದು

–ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ತರಳಬಾಳು ಮಠ

* ಸ್ವಾಮೀಜಿ ಪ್ರಯೋಗಕ್ಕೆ ನನ್ನ ಒಪ್ಪಿಗೆ ಸೂಚಿಸಿದ್ದೇನೆ. ಆದರೆ, ಇದು ಸುಲಭವಲ್ಲ. ಎಲ್ಲಾ ಆಕಾಂಕ್ಷಿಗಳೂ ಒಪ್ಪಬೇಕು. ಷರತ್ತಿಗೆ ಬದ್ಧರಾಗಿ ನಡೆದುಕೊಳ್ಳಬೇಕು.

–ವಡ್ನಾಳ್‌ ರಾಜಣ್ಣ, ಕಾಂಗ್ರೆಸ್‌ ಶಾಸಕ

ಮುಖ್ಯಾಂಶಗಳು

* ಮಠದ ಸಮ್ಮುಖದಲ್ಲಿ ಸಭೆ

* ಮತದಾನ ಮುಗಿಯುವ ತನಕ ಮಠದಲ್ಲಿಯೇ ಇರಿಸಿಕೊಳ್ಳುವ ಸಾಧ್ಯತೆ

* ಗ್ರಾ.ಪಂ ಚುನಾವಣೆಗಳಿಂದ ‘ಹೆಂಡ’ದ ಯಾತ್ರೆ ಶುರು

ಪ್ರತಿಕ್ರಿಯಿಸಿ (+)