ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ದಾಳಿ: ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ನಗರದ ಹೊರವಲಯದಲ್ಲಿರುವ ಸುಂಜುವಾನ್ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣದಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಇಬ್ಬರು ಕಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು ಐವರು ಯೋಧರು ಮತ್ತು ಒಬ್ಬ ನಾಗರಿಕ ಮೃತಪ‍ಟ್ಟಿದ್ದಾರೆ.

ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ  ನಾಲ್ವರು ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ. ದಾಳಿಯಲ್ಲಿ ಯೋಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 11 ಮಂದಿ ಗಾಯಗೊಂಡಿದ್ದಾರೆ.

ಹುತಾತ್ಮರಾದವರನ್ನು ಸುಬೇದಾರ್‌ ಮದನ್‌ಲಾಲ್ ಚೌಧರಿ, ಸುಬೇದಾರ್ ಮೊಹಮ್ಮದ್ ಆಶ್ರಫ್ ಮಿರ್, ಹವಾಲ್ದಾರ್‌ ಹಬೀಬುಲ್ಲಾ ಖುರೇಷಿ ಹಾಗೂ ಮಸ್ಸೂರ್ ಅಹ್ಮದ್ ಮತ್ತು ಮೊಹಮದ್ ಇಕ್ಬಾಲ್ ಎಂದು ಗುರುತಿಸಲಾಗಿದೆ. ಮೊಹಮದ್ ಇಕ್ಬಾಲ್ ಅವರ ತಂದೆಯೂ ಸತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶನಿವಾರ ಬೆಳಗಿನ ಜಾವ 4.55ರ ವೇಳೆಗೆ ಶ್ರೀನಗರ– ಜಮ್ಮು– ಪಠಾಣ್‌ಕೊಟ್ ಹೆದ್ದಾರಿಯ ಆಯಕಟ್ಟಿನ ಸ್ಥಳದಲ್ಲಿರುವ ಈ ಶಿಬಿರದ ಮೇಲೆ ಜೈಷ್‌ ಇ ಮೊಹಮ್ಮದ್‌ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. ಸೇನಾ ಶಿಬಿರದ ಹಿಂಭಾಗದಿಂದ ಸಿಬ್ಬಂದಿ ವಸತಿ ಸಮುಚ್ಚಯಕ್ಕೆ ನುಗ್ಗಿದ್ದ ಉಗ್ರರು ಮನೆಯೊಳಗೂ ಸೇರಿಕೊಂಡಿದ್ದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮತ್ತು ಮೂವರು ಉಗ್ರರು ಸಾವಿಗೀಡಾಗಿದ್ದರು.

ಶನಿವಾರ ರಾತ್ರಿ ಸ್ಥಗಿತಗೊಳಿಸಲಾಗಿದ್ದ ಕಾರ್ಯಾಚರಣೆಯನ್ನು ಭಾನುವಾರ ಬೆಳಿಗ್ಗೆ ಮುಂದುವರಿಸಲಾಯಿತು. ಇದರಲ್ಲಿ ಇನ್ನೊಬ್ಬ ಭಯೋತ್ಪಾದಕ ಹತನಾದ. ನಂತರ ಮಧ್ಯಾಹ್ನದ ವೇಳೆಗೆ ಗುಂಡಿನ ಸದ್ದು ನಿಂತಿದೆ. ಆದರೆ, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹತರಾದ ಉಗ್ರರಿಂದ ಎಕೆ–56 ರೈಫಲ್‌ಗಳು, ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಳಿದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಭಾರತೀಯ ವಾಯುಪಡೆಯ ಪ್ಯಾರಾ ಕಮಾಂಡೊಗಳನ್ನು ನಿಯೋಜಿಸಲಾಗಿದೆ. ಜತೆಗೆ ಸೇನಾ ಟ್ಯಾಂಕರ್‌ಗಳನ್ನು ಸಹ ಬಳಸಲಾಗುತ್ತಿದೆ.

ವಸತಿಸಮುಚ್ಛಯದಲ್ಲಿರುವ ಯಾವುದೇ ಶಸ್ತ್ರಾಸ್ರಗಳನ್ನು ಹೊಂದಿರದ ಸೈನಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ, ಉಗ್ರರು ಯಾರನ್ನೂ ಒತ್ತೆಯಾಗಿರಿಸಿಕೊಂಡಿಲ್ಲ’ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ‘ವಸತಿ ಸಮುಚ್ಛಯದ 150 ಮನೆಗಳಲ್ಲಿದ್ದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ’ ಎಂದರು.

ಕಳೆದ 15 ವರ್ಷಗಳಲ್ಲಿ ಸುಂಜುವಾನ್ ಸೇನಾ ಶಿಬಿರದ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.

ಬಿಪಿನ್ ರಾವತ್ ಭೇಟಿ: ಸುಂಜುವಾನ್ ಸೇನಾ ಶಿಬಿರಕ್ಕೆ ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ನಿಷೇಧಾಜ್ಞೆ: ಜಮ್ಮು ಕಾಶ್ಮೀರ ವಿಮೋಚನಾ ರಂಗದ ಸಂಸ್ಥಾಪಕ ಮಕ್ಬೂಲ್ ಭಟ್‌ನನ್ನು ಗಲ್ಲಿಗೇರಿಸಿದ ದಿನವಾದ ಭಾನುವಾರ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸದಂತೆ ಶ್ರೀನಗರ ಪಟ್ಟಣ ಸೇರಿದಂತೆ ಕಾಶ್ಮೀರ ಕಣಿವೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು. ಮಕ್ಬೂಲ್ ಭಟ್‌ನನ್ನು 1984ರ ಫೆ.11ರಂದು ಗಲ್ಲಿಗೇರಿಸಲಾಗಿತ್ತು.

ಪಾಕ್‌ ದಾಳಿ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ವಲಯದ ಮೇಲೆ ಪಾಕಿಸ್ತಾನದ ಸೈನಿಕರು ನಡೆಸಿದ ದಾಳಿಯಲ್ಲಿ ಸುಮಾರು 65 ವರ್ಷ ವಯಸ್ಸಿನ ಮಹಿಳೆ ಮೃತಪಟ್ಟಿದ್ದಾಳೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಗುವಿಗೆ ಜನ್ಮ
ಜಮ್ಮು:
ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ‘ತೀವ್ರ ಗಾಯಗೊಂಡಿದ್ದ ಮಹಿಳೆಯ ಜೀವ ಉಳಿಸಲು ಸೇನೆಯ ವೈದ್ಯರು ಇಡೀ ರಾತ್ರಿ ಶ್ರಮಿಸಿದ್ದಾರೆ. ಬಂದೂಕಿನ ಗುಂಡುಗಳು ಅವರಿಗೆ ತಗುಲಿದ್ದವು’ ಎಂದು ಸೇನೆಯ ಅಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ದೇವೇಂದ್ರ ಆನಂದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT