ಶುಕ್ರವಾರ, ಡಿಸೆಂಬರ್ 6, 2019
25 °C

ಮಾರುಕಟ್ಟೆಗೆ ಲಗ್ಗೆ ಇಟ್ಟ ಕಲ್ಲಂಗಡಿ

ರಾಮರಡ್ಡಿ ಅಳವಂಡಿ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಗೆ ಲಗ್ಗೆ ಇಟ್ಟ ಕಲ್ಲಂಗಡಿ

ತುಮಕೂರು: ಶಿವರಾತ್ರಿ ಹೊತ್ತಿಗೆ ‘ಶಿವ ಶಿವ’ ಎನ್ನುವಷ್ಟು ಬಿಸಿಲು ಎಂಬಂತೆ ಬಿಸಿಲ ಧಗೆ ಪ್ರಾರಂಭವಾಗಿದೆ. ಈ ಬಿಸಿಲ ಧಗೆಯಲ್ಲಿ ಉದರ ಸೇರಿ ದೇಹ ತಂಪಾಗಿಸಲು ಹಾಗೂ ಶಿವರಾತ್ರಿ ಹಬ್ಬದ ಉಪವಾಸ ವ್ರತ ಮಾಡುವವರು ಸೇವಿಸಲು ಮಾರುಕಟ್ಟೆಗೆ ಕಲ್ಲಂಗಡಿ, ಕರ್ಬೂಜ ಹಣ್ಣುಗಳು ಧಾವಿಸಿವೆ.

ಶಿರಾ, ಪಾವಗಡ ಹಾಗೂ ಆಂಧ್ರಪ್ರದೇಶ, ತಮಿಳುನಾಡಿನಿಂದ ಕಲ್ಲಂಗಡಿ, ಕರ್ಬೂಜ ಮಾರುಕಟ್ಟೆಗೆ ಧಾವಿಸಿದೆ. ಪಪ್ಪಾಯಿ ಹಣ್ಣುಗಳು ಸ್ಥಳೀಯವಾಗಿಯೇ ಲಭ್ಯವಿದ್ದು, ವ್ಯಾಪಾರಸ್ಥರು ತೋಟಗಳಲ್ಲಿ ರೈತರಿಂದ ಖರೀದಿಸಿ ತಂದಿದ್ದಾರೆ.

ಕಲ್ಲಂಗಡಿ ಹಣ್ಣಿನಲ್ಲಿ ನಾಮಧಾರಿ, ಕಿರಣ್, ಸುಪ್ರಿತ್ ತಳಿಗಳಿವೆ. ಈ ಮೂರು ತಳಿಯ ಹಣ್ಣುಗಳದ್ದು ಒಂದೊಂದು ರೀತಿಯ ವಿಶೇಷ. ನಾಮಧಾರಿ ತಳಿ ಹಣ್ಣು ತಿಳಿ ಹಸಿರು ಮಿಶ್ರಿತ ಮತ್ತು ಗಾತ್ರ ದೊಡ್ಡದಾಗಿದ್ದರೆ, ಸುಪ್ರಿತ್ ತಳಿಯ ಹಣ್ಣು ತಿಳಿ ಹಸಿರು ಹೊಂದಿದ್ದು, ಮಧ್ಯಮ ಗಾತ್ರದಲ್ಲಿರುತ್ತದೆ. ಕಿರಣ್ ತಳಿಯು ಗಾತ್ರದಲ್ಲಿ ಚಿಕ್ಕದಾಗಿದ್ದು, ಕಡು ಹಸಿರಾಗಿರುತ್ತದೆ. ಈ ಕಡು ಹಸಿರು ಬಣ್ಣವೇ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಈ ಮೂರೂ ತಳಿಯ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಶಿವರಾತ್ರಿ ದಿನ ಉಪವಾಸ ವ್ರತ ಆಚರಿಸುವವರು ತಮಗಿಷ್ಟವಾದ ಹಣ್ಣು ಖರೀದಿಸಿ ಸವಿಯಬಹುದಾಗಿದೆ. ಕುಟುಂಬದಲ್ಲಿ ಬಹಳಷ್ಟು ಸದಸ್ಯರಿದ್ದರೆ ನಾಮಧಾರಿ ತಳಿಯ ಹಣ್ಣುಗಳನ್ನೇ ಖರೀದಿಸುತ್ತಾರೆ. ಚಿಕ್ಕ ಕುಟುಂಬಗಳಿದ್ದಲ್ಲಿ ಸ್ವಲ್ಪ ಬೆಲೆ ಹೆಚ್ಚಾದರೂ ಗಾತ್ರದಲ್ಲಿ ಚಿಕ್ಕದಾದರೂ ಕಿರಣ್ ತಳಿಯ ಹಣ್ಣುಗಳನ್ನೇ ಖರೀದಿಸಿಕೊಂಡು ಹೋಗುತ್ತಾರೆ ಎಂದು ಗ್ರಾಹಕರ ಮನೋಸ್ಥಿತಿಯನ್ನು ವ್ಯಾಪಾರಸ್ಥರು ವಿವರಿಸಿದರು.

ಶಿವರಾತ್ರಿ ಸಮೀಸುತ್ತಿದೆ ಎಂದರೆ ಕಲ್ಲಂಗಡಿ ಹಣ್ಣಿನ ಮಾರಾಟ ಶುರು ಆಯಿತೆಂದೇ ಅರ್ಥ. ಅದರಲ್ಲೂ ಶಿವರಾತ್ರಿ ದಿನ ವ್ಯಾಪಾರಸ್ಥರು ಎಷ್ಟೇ ದೂರದಲ್ಲಿದ್ದರೂ ಖರೀದಿಸಿ ತಂದು ಮಾರಾಟ ಮಾಡುತ್ತಾರೆ. ಅಂಗಡಿಯಲ್ಲಷ್ಟೇ ಅಲ್ಲ. ಸೀಸನ್ ವ್ಯಾಪಾರಸ್ಥರು ನಗರದ ಪ್ರಮುಖ ರಸ್ತೆ, ಪ್ರಮುಖ ವೃತ್ತ, ಜನಸಂದಣಿ ಪ್ರದೇಶ, ದೇವಸ್ಥಾನಗಳಿರುವ ಕಡೆಗ ಹೀಗೆ ಎಲ್ಲೆಂದರಲ್ಲಿ ಮಾರಾಟ ಮಾಡಿ ಒಂದೆರಡು ದಿನದಲ್ಲಿಯೇ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಾರೆ. ಹಬ್ಬದ ಮುನ್ನ ದಿನವಾದ ಸೋಮವಾರ, ಹಬ್ಬದ ದಿನವಾದ ಮಂಗಳವಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಹಣ್ಣಿನ ಆವಕ ಆಗಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ದ್ರಾಕ್ಷಿ ಕೆ.ಜಿಗೆ ₹ 70ಕ್ಕೆ, ಸೇಬು ₹ 150, ಕಿತ್ತಳೆ ₹ 70, ದಾಳಿಂಬೆ ₹ 80ಕ್ಕೆ, ಪೈನಾಪಲ್ ₹ 35ಕ್ಕೆ ಮಾರಾಟ ಆಗುತ್ತಿದೆ. ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಹಣ್ಣಿನ ಬೆಲೆ ಸ್ವಲ್ಪ ಹೆಚ್ಚಾಗುತ್ತಿದೆ ಎಂದು ವ್ಯಾಪಾರಸ್ಥರಾದ ಮುನೀರ್ ಹೇಳಿದರು.

ಸಾರಿಗೆ ವೆಚ್ಚವೇ ಬೆಲೆ ಹೆಚ್ಚಳಕ್ಕೆ ಕಾರಣ

‘ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ಹಣ್ಣು ಮಾರುಕಟ್ಟೆಗೆ ಧಾವಿಸುತ್ತಿದೆ. ಕಳೆದ ವರ್ಷ ಮಳೆ ಕೊರತೆಯಿಂದ ಹಣ್ಣು ಕಡಿಮೆ ಇತ್ತು.  ಕಿರಣ್ ತಳಿಯ ಹಣ್ಣು

ಎರಡೂವರೆಯಿಂದ ಮೂರು ಕೆ.ಜಿ ಇರುತ್ತದೆ. ಕೆ.ಜಿಗೆ ₹ 20ರಂತೆ ಮಾರಾಟ ಮಾಡುತ್ತೇವೆ. ನಾಮಧಾರಿ ತಳಿಯ ಹಣ್ಣು ಕೆ.ಜಿಗೆ ₹12–15ಕ್ಕೆ  ಮಾರಾಟ ಆಗುತ್ತದೆ’ ಎಂದು ವ್ಯಾಪಾರಸ್ಥರಾದ ಮಹಮ್ಮದ್ ದಸ್ತಗೀರ್ ’ಪ್ರಜಾವಾಣಿ’ಗೆ ತಿಳಿಸಿದರು.

’ಕರ್ಬೂಜಾ ಹಣ್ಣು ಕೆಜಿಗೆ ₹ 12ಕ್ಕೆ  ಮಾರಾಟ ಮಾಡಲಾಗುತ್ತಿದೆ. ಹಣ್ಣಿನ ಆವಕ ಹೆಚ್ಚಾದರೂ ಬೆಲೆ ಹೆಚ್ಚಳಕ್ಕೆ ಸಾರಿಗೆ ವೆಚ್ಚವೇ ಕಾರಣವಾಗಿದೆ’ ಎಂದು ಬೆಲೆ ಹೆಚ್ಚಳದ ಕಾರಣ ವಿವರಿಸಿದರು.

ತರಕಾರಿ ಬೆಲೆ ತಗ್ಗಿದರೂ ಹಣ್ಣಿನ ಬೆಲೆ ಹೆಚ್ಚಳ

’ಈಗ ಎಲ್ಲ ಹಣ್ಣಿನ ಬೆಲೆಯೂ ಹೆಚ್ಚಾಗಿದೆ. ತರಕಾರಿ ಬೆಲೆ ಬಿಟ್ಟರೆ ಎಲ್ಲವೂ ಹೆಚ್ಚಾಗಿದೆ. ತರಕಾರಿ  ಬೆಲೆ ಮಾತ್ರ ಕಡಿಮೆ ಇದೆ.  ಹಬ್ಬದ ಕಾರಣ ಬೆಲೆ ಹೆಚ್ಚಿದ್ದರೂ ಹಣ್ಣು ಖರೀದಿಸುತ್ತಿದ್ದೇವೆ’ ಎಂದು ಕೈದಾಳದ ಗೋಪಾಲಕೃಷ್ಣ ಹೇಳಿದರು.

ಪ್ರತಿಕ್ರಿಯಿಸಿ (+)