ಭಾನುವಾರ, ಡಿಸೆಂಬರ್ 8, 2019
24 °C

ಕಾಂಗ್ರೆಸ್ ವಿರುದ್ಧ ಪ್ರಧಾನಿ ಸುಳ್ಳು ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ವಿರುದ್ಧ ಪ್ರಧಾನಿ ಸುಳ್ಳು ಆರೋಪ

ಉಡುಪಿ: ರಾಜ್ಯ ಸರ್ಕಾರ ಅಭಿವೃದ್ಧಿಪರವಾಗಿರುವುದರಿಂದ ಚುನಾವಣೆ ಎದುರಿಸಲು ಯಾವುದೇ ವಿಷಯ ಇಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೂವರೆ ಕೋಟಿ ಜನರ ಕಾಂಗ್ರೆಸ್ ಸರ್ಕಾರವನ್ನು ನಂಗಾನಾಚ್ ಸರ್ಕಾರ ಎನ್ನುವ ಮೂಲಕ ಅಪಮಾನ ಮಾಡಿದ್ದಾರೆ. ಶೇ10ರಷ್ಟು ಕಮಿಷನ್ ಪಡೆಯುವ ಮೂಲಕ ಭ್ರಷ್ಟಾಚಾರದಲ್ಲಿ ನಿರತವಾಗಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಸಹ ದೂರಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಮಾಹಿತಿ ಇದ್ದರೆ ಕ್ರಮ ಕೈಗೊಳ್ಳಲಿ. ಮಾಹಿತಿ ಇದ್ದರೂ ಸಹ ಮುಚ್ಚಿಡುವುದು ಅಪರಾಧ ಎಂಬುದನ್ನು ಅವರು ತಿಳಿದುಕೊಳ್ಳಲಿ. ಕಾನೂನು ಸುವ್ಯವಸ್ಥೆ ಇಲ್ಲ ಎಂದಾರೆ ರಾಷ್ಟ್ರಪತಿ ಆಡಳಿತ ಹೇರಲಿ’ ಎಂದು ತಿರುಗೇಟು ನಿಡಿದರು.

ನಾಯಕತ್ವ ದಿವಾಳಿತನವನ್ನು ಬಿಜೆಪಿ ಎದುರಿಸುತ್ತಿದೆ. ಅದೇ ಕಾರಣಕ್ಕೆ ಚೆಕ್ ಮೂಲಕ ಲಂಚ ಪಡೆದ ಆರೋಪದಲ್ಲಿ ಜೈಲಿಗೆ ಹೋಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರು ದಲಿತರು, ಕೊಳೆಗೇರಿ ನಿವಾಸಿಗಳ ಮನೆಗೆ ಹೋಗಲಿಲ್ಲ. ಆದರೆ, ಚುನಾವಣೆ ಹತ್ತಿರ ಇರುವುದರಿಂದ ಅವರೆಲ್ಲರನ್ನೂ ನೆನಪು ಮಾಡಿಕೊಂಡಿದೆ ಎಂದರು.

ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದ್ದು ಜನ ಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜನರ ಆಶಯಗಳಿಗೆ ಸ್ಪಂದಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದು ಡೀಸೆಲ್– ಪೆಟ್ರೋಲ್‌ ₹25ಕ್ಕೆ ಲೀಟರ್ ನೀಡಬಹುದು. ಆದರೂ ಕಡಿಮೆ ಮಾಡಿಲ್ಲ ಎಂದರು.

ಕೃಷ್ಣ ಮಠಕ್ಕೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಭೇಟಿ ನೀಡುವರೇ ಎಂಬ ಪ್ರಶ್ನೆಗ ಪ್ರತಿಕ್ರಿಯಿಸಿದ ಅವರು, ‘ನಾನಂತೂ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ರಾಹುಲ್, ಸಿದ್ದರಾಮಯ್ಯ ಅವರು ಸಹ ಅವಕಾಶ ಇದ್ದಾಗ ಬರುವರು’ ಎಂದರು.

ಕೇಂದ್ರದ ರಫೇಲ್ ಹಗರಣ

ಕೇಂದ್ರ ಸರ್ಕಾರ ಯುದ್ಧ ವಿಮಾನ ‘ರಫೇಲ್’ ಖರೀದಿಯಲ್ಲಿ ದೊಡ್ಡ ಹಗರಣ ಮಾಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ₹560 ಕೋಟಿಗೆ ಒಂದು ವಿಮಾನ ಖರೀದಿ ಮಾಡಲು ಒಪ್ಪಂದವಾಗಿತ್ತು. ಬೆಂಗಳೂರಿನ ಎಚ್‌ಎಎಲ್ ಸಹಭಾಗಿ ಕಂಪೆನಿಯಾಗಿತ್ತು. ಆದರೆ, ಅದೇ ಯುದ್ಧ ವಿಮಾನವನ್ನು ಮೋದಿ ಅವರು ₹1,500 ಕೋಟಿಗೆ ಖರೀದಿ ಮಾಡಲು ಹೊರಟ್ಟಿದ್ದಾರೆ. ಕಂಪೆನಿಯನ್ನು ಬದಲಾಯಿಸಿದ್ದಾರೆ.

ಮಾಹಿತಿ ನೀಡಿ ಎಂದರೆ ಭದ್ರತಾ ವಿಷಯ ಬಹಿರಂಗ ಮಾಡುವುದಿಲ್ಲ ಎಂದು ಹೇಳುತ್ತಾರೆ. ಒಂದು ವಿಮಾನಕ್ಕೆ ನೀಡುತ್ತಿರುವ ಬೆಲೆ ಎಷ್ಟು ಎಂದು ಹೇಳಲು ಏಕೆ ಹಿಂಜರಿಕೆ ಎಂದು ಉಗ್ರಪ್ಪ ಪ್ರಶ್ನಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜನಾರ್ದನ ತೋನ್ಸೆ, ಪ್ರಧಾನ ಕಾರ್ಯದರ್ಶಿ ಕೆ. ನರಸಿಂಹಮೂರ್ತಿ ಇದ್ದರು.

ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾರ್ಕಳದಲ್ಲಿ ಮಾತ್ರ ಟಿಕೆಟ್‌ಗಾಗಿ ಪೈಪೋಟಿ ಇದೆ ಎಂದು ಕಾಂಗ್ರೆಸ್‌ನ ವೀಕ್ಷಕ ವಿ.ಎಸ್.ಉಗ್ರಪ್ಪ ಹೇಳಿದರು.

ಭಾನುವಾರ ಐದೂ ವಿಧಾನಸಭಾ ಕ್ಷೇತ್ರಗಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಶಾಸಕ ಕೆ.ಗೋಪಾಲ ಭಂಡಾರಿ, ಕಾಂಗ್ರೆಸ್ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಹಾಗೂ ಹರ್ಷ ಮೊಯಿಲಿ ಅವರ ಬೆಂಬಲಿಗರು ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಇಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಯಥಾವತ್ತಾಗಿ ಹೈಕಮಾಂಡ್‌ಗೆ ನೀಡಲಾಗುತ್ತದೆ. ಪಕ್ಷದ ದುಡಿಮೆ, ಗೆಲ್ಲುವ ಸಾಮರ್ಥ್ಯ, ಕಾರ್ಯಕರ್ತರ ಅಭಿಲಾಷೆ ಹಾಗೂ ಸಾಮಾಜಿಕ ನ್ಯಾಯದ ಮಾನದಂಡಗಳನ್ನು ಆಧರಿಸಿ ಟಿಕೆಟ್ ನೀಡಲಾಗುವುದು ಎಂದರು.

ಹರ್ಷ ಮೊಯಿಲಿ ಅವರಿಗೆ ಟಿಕೆಟ್ ನೀಡಬೇಕು ಎಂಬುದು ಅವರ ತಂದೆ ಸಂಸದ ವೀರಪ್ಪ ಮೊಯಿಲಿ ಅವರ ಅಭಿಲಾಷೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಭಿಪ್ರಾಯ ಸಂಗ್ರಹಿಸುವುದಷ್ಟೇ ನಮ್ಮ ಕೆಲಸ. ಮಿಕ್ಕಿದ್ದನ್ನು ಪಕ್ಷ ತೀರ್ಮಾನ ಮಾಡಲಿದೆ’ ಎಂದರು.

ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಅವರಿಗೆ ಕುಂದಾಪುರದಲ್ಲಿ ಟಿಕೆಟ್ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಆ ಕ್ಷೇತ್ರದಿಂದ ಇನ್ನೊಬ್ಬ ಆಕಾಂಕ್ಷಿ ಇಲ್ಲ ಎಂದರು.

ಉಳಿದಂತೆ ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್, ಕಾಪು ವಿನಲ್ಲಿ ವಿನಯ ಕುಮಾರ್‌ ಸೊರಕೆ ಹಾಗೂ ಬೈಂದೂರಿನಲ್ಲಿ ಕೆ. ಗೋಪಾಲ ಪೂಜಾರಿ ಅವರಿಗೆ ಟಿಕೆಟ್ ನೀಡ ಲಾಗುತ್ತದೆ ಎಂದು ತಿಳಿದು ಬಂದಿದೆ. ಐದೂ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಮತ್ತು ಮುಖಂಡರ ಹುಮ್ಮಸ್ಸು ನೋಡಿದರೆ, ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳೇ ಜಯಗಳಿಸುವ ಎಲ್ಲ ಸಾಧ್ಯತೆ ಇದೆ ಎಂದರು. ಇನ್ನೊಬ್ಬ ವೀಕ್ಷಕರಾದ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಪರ ವಾದ ವಾತಾವರಣ ಇದೆ ಎಂದರು.

ಪ್ರತಿಕ್ರಿಯಿಸಿ (+)