ಡಿಎಲ್ ಇಲ್ಲದ ಸವಾರಿ ಆಪತ್ತಿಗೆ ರಹದಾರಿ

7

ಡಿಎಲ್ ಇಲ್ಲದ ಸವಾರಿ ಆಪತ್ತಿಗೆ ರಹದಾರಿ

Published:
Updated:

ಕಿಕ್ಕೇರಿ: ಯಾವುದೇ ವಾಹನ ಚಾಲನೆ ಮಾಡಲು ಚಾಲನಾ ಪರವಾನಗಿ (ಡಿಎಲ್) ಕಡ್ಡಾಯವಾಗಿ ಬೇಕು ಎಂಬ ಅರಿವನ್ನು ಸವಾರರು ಇಟ್ಟುಕೊಂಡಲ್ಲಿ ಬಹುತೇಕ ಸಮಸ್ಯೆಗಳು ದೂರವಾಗಲಿವೆ ಎಂದು ಸಾರಿಗೆ ಇಲಾಖೆ ಮೈಸೂರು ವಿಭಾಗದ ಜಂಟಿ ಆಯುಕ್ತ ಸಿ.ಟಿ. ಮೂರ್ತಿ ಹೇಳಿದರು.

ಸಮೀಪದ ಮಾಕವಳ್ಳಿ ಗ್ರಾಮದಲ್ಲಿನ ಕೋರಮಂಡಲ್ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ನಡೆದ ರೈತ ಸಾರಥಿ ಯೋಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟ್ರ್ಯಾಕ್ಟರ್‌ಗಳಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ತಾಲ್ಲೂಕಿನಲ್ಲಿ ಶೇ 80ರಷ್ಟು ಟ್ರ್ಯಾಕ್ಟರ್‌ಗಳಿದ್ದರೂ ಸೂಕ್ತ ದಾಖಲೆ, ಚಾಲಕರಿಗೆ ಡಿಎಲ್ ಇಲ್ಲದೆ ಇರುವುದು ಪತ್ತೆಯಾಗಿದೆ. ಅಪಘಾತ ಸಂಭವಿಸಿದಲ್ಲಿ ಡಿಎಲ್ ಇಲ್ಲದ ಕಾರಣ ಯಾವುದೇ ಪರಿಹಾರ, ವಿಮೆ ಸಿಗಲಾರದು. ಸ್ವಂತ ಹಣದಿಂದ ಎಲ್ಲವನ್ನು ಭರಿಸಬೇಕಾಗುತ್ತದೆ. ಡಿಎಲ್ ಹೊಂದುವುದು, ವಾಹನಗಳ ದಾಖಲೆ ಸರಿಪಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ಇಲಾಖೆ ತಮ್ಮೊಂದಿಗೆ ಇದೆ ಎಂದರು.

ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಸಿ. ಪವನಕುಮಾರ್ ಮಾತನಾಡಿ, ರೈತ ಸಾರಥಿ ಯೋಜನೆ ರೈತರ ಮನೆಗೆ ತೆರಳಿ ಡಿಎಲ್, ವಾಹನ ದಾಖಲೆ ಸರಿಪಡಿಸಿಕೊಡುವ, ಮಾಹಿತಿ ನೀಡುವ ಸಂಜೀವಿನಿಯಾಗಿದೆ. ಕಬ್ಬು ಸರಬರಾಜು ಮಾಡುವ ಟ್ರ್ಯಾಕ್ಟರ್‌ಗಳ ಚಾಲಕರಿಗೆ ಡಿಎಲ್ ಕಡ್ಡಾಯ. ಕಾರ್ಖಾನೆ ತಮ್ಮೊಂದಿಗೆ ಇದ್ದು ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು. ಸ್ಥಳದಲ್ಲಿಯೇ ಸಾರಿಗೆ ಇಲಾಖೆ ಹಲವು ಅರ್ಹ ಚಾಲಕರಿಗೆ ತಾತ್ಕಾಲಿಕ ಡಿಎಲ್ ಪತ್ರ ನೀಡಿತು.

ರಸ್ತೆ ಸುರಕ್ಷತೆ ಕುರಿತು ಪ್ರತಿಜ್ಞಾವಿಧಿ ಬೋಧನೆ ಮಾಡಲಾಯಿತು. ಸಾರಿಗೆ ಇಲಾಖೆಯ ನಾಗಮಂಗಲ ವಿಭಾಗದ ಸಹಾಯಕ ಪ್ರಾದೇಶಿಕ ಅಧಿಕಾರಿ ಹನುಮಂತಪ್ಪ ಮಾತನಾಡಿದರು. ಕೆ.ಬಾಬುರಾಜ್, ಉತ್ತಪ್ಪ, ದತ್ತಾತ್ರೇಯ, ಪುಟ್ಟೇಗೌಡ, ಮೋಟಾರ್ ವಾಹನ ನಿರೀಕ್ಷಕ ಶಂಭುಶಂಕರ್, ಸಿಬ್ಬಂದಿ ನರಸಿಂಹೇಗೌಡ, ವಕೀಲ ನಾಗೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry