ಉಪ್ಪು ನೀರು ಸಾಕು, ಸಿಹಿನೀರು ಬೇಕು...

7

ಉಪ್ಪು ನೀರು ಸಾಕು, ಸಿಹಿನೀರು ಬೇಕು...

Published:
Updated:
ಉಪ್ಪು ನೀರು ಸಾಕು, ಸಿಹಿನೀರು ಬೇಕು...

ಸಂತೇಮರಹಳ್ಳಿ: ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದಾಗ ಮುಖ ಅರಳುವುದು ಸಾಮಾನ್ಯ. ಆದರೆ, ತಳ್ಳನೂರು ಗ್ರಾಮದಲ್ಲಿ ಮಾತ್ರ ಅದಕ್ಕೆ ವಿರುದ್ಧ. ಏಕೆಂದರೆ, ಗ್ರಾಮದ ಯಾವುದೇ ಭಾಗದಲ್ಲಿ ಕೊಳವೆ ಬಾವಿ ಕೊರೆಸಿದರೂ ಅಲ್ಲಿ ಬರುವುದು ಉಪ್ಪು ನೀರು ಮಾತ್ರ.

ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಗೆ ಸೇರಿದ ತೆಳ್ಳನೂರು ಗ್ರಾಮದ ಜನರು ಅನೇಕ ವರ್ಷಗಳಿಂದಲೂ ಉಪ್ಪು ನೀರು ಸೇವಿಸುತ್ತಾ ಬದುಕುತ್ತಿದ್ದಾರೆ. ಇಂದಿಗೂ ಈ ಸ್ಥಿತಿ ಬದಲಾಗಿಲ್ಲ.

ಗ್ರಾಮದ ಯಾವುದೇ ಭಾಗದಲ್ಲಿ ತೆರೆದ ಬಾವಿಯಾಗಲಿ, ಕೊಳವೆ ಬಾವಿಯಾಗಲಿ ಕೊರೆದರೆ ಅದರಲ್ಲಿ ನೀರಿಗೇನು ಕೊರತೆ ಇರುವುದಿಲ್ಲ. ಆದರೆ, ಅದರಲ್ಲಿ ಉಪ್ಪಿನಾಂಶ ಇರುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

‘ಚಾಮರಾಜನಗರ ತಾಲ್ಲೂಕಿನಲ್ಲಿ ಈಚೆಗೆ ಉದ್ಘಾಟನೆಗೊಂಡ, 166 ಗ್ರಾಮಗಳಿಗೆ ಬಹುಗ್ರಾಮ ಕುಡಿ ಯುವ ನೀರಿನ ಯೋಜನೆಯೂ ಇಲ್ಲಿಗೆ ಇನ್ನೂ ತಲುಪಿಲ್ಲ. ಈ ಯೋಜನೆಯಲ್ಲಾದರು ಸಿಹಿನೀರು ಕುಡಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮದ ಕುಮಾರಸ್ವಾಮಿ, ಶಿವನಂಜಯ್ಯ.

ಗ್ರಾಮದಲ್ಲಿ 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ 5 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಗ್ರಾಮದ ಎಲ್ಲ ಬಡಾವಣೆಗಳಿಗೂ ಕಿರುನೀರು ಸರಬರಾಜು ಯೋಜನೆ ವತಿಯಿಂದ ತೊಂಬೆಗಳನ್ನು ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಆದರೆ, ಅನಿವಾರ್ಯವಾಗಿ ಕುಡಿಯಲು ಉಪ್ಪು ನೀರನ್ನೇ ಬಳಸಬೇಕಾಗಿದೆ.

ಗ್ರಾಮಕ್ಕೆ ಸಿಹಿನೀರು ದೊರಕಿಸಿಕೊಡ ಬೇಕು ಎಂಬ ಉದ್ದೇಶದಿಂದ ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಕೊಳ್ಳೇಗಾಲ ತಾಲ್ಲೂಕಿನ ಆಲಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿಯೊಂದನ್ನು ಕೊರೆಸಿ ಪೈಪ್‌ಲೈನ್ ಮೂಲಕ ಗ್ರಾಮಕ್ಕೆ ನೀರು ತರಲಾಗಿದೆ. ಆದರೆ, ನೀರನ್ನು ಗ್ರಾಮದ ಕೆಲವೇ ಬಡಾವಣೆಗೆ ಮಾತ್ರ ಸರಬರಾಜು ಮಾಡಲಾಗುತ್ತಿದೆ. ಉಳಿದ ಬಡಾವಣೆಗಳಿಗೆ ಆ ನೀರನ್ನು ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

‘ಗ್ರಾಮದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಪೈಪ್‌ಲೈನ್‌ ಅಳವಡಿಸಲು ವಿಳಂಬವಾಗಿದೆ. ಮುಂದಿನ ವಾರದಲ್ಲಿ ಪೈಪ್‌ಲೈನ್‌ ಅಳವಡಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರನ್ನು ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಿರಿಯ ಎಂಜಿನಿಯರ್‌ ಪುರುಷೋತ್ತಮ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry