ಸೋಮವಾರ, ಡಿಸೆಂಬರ್ 9, 2019
25 °C

ಅಪಾಯ ಆಹ್ವಾನಿಸುತ್ತಿವೆ ತೆರೆದ ಚರಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಾಯ ಆಹ್ವಾನಿಸುತ್ತಿವೆ ತೆರೆದ ಚರಂಡಿ

ಚಾಮರಾಜನಗರ: ನಗರದ ವಿವಿಧೆಡೆ ರಸ್ತೆಗಳ ವಿಸ್ತರಣೆ ಕಾಮಗಾರಿ ನಡೆಯು ತ್ತಿದೆ. ಇಕ್ಕೆಲಗಳಲ್ಲಿ ಕಾಂಕ್ರೀಟ್‌ ಚರಂಡಿ ನಿರ್ಮಿಸಿದ ಬಳಿಕವೇ ಅಲ್ಲಿ ರಸ್ತೆ ಕಾರ್ಯ ಆರಂಭವಾಗುತ್ತಿದೆ. ಆದರೆ, ಅನೇಕ ಕಡೆ ಚರಂಡಿ ಪೂರ್ಣಗೊಂಡಿದ್ದರೂ, ಮುಚ್ಚುಗೆ ಹಾಕದ ಕಾರಣ ಅಪಾಯಕ್ಕೆ ಎಡೆಮಾಡಿಕೊಡುತ್ತಿವೆ.

ನಗರದ ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಅಂಗಡಿ ಬೀದಿ, ಜೋಡಿ ರಸ್ತೆ, ನ್ಯಾಯಾಲಯ ರಸ್ತೆ ಸೇರಿದಂತೆ ವಿವಿಧೆಡೆ ಕಾಮ ಗಾರಿಗಳು ಸಾಗುತ್ತಿವೆ. ಈ ಎಲ್ಲ ಕಾಮಗಾರಿಗಳಲ್ಲಿಯೂ ಚರಂಡಿ ನಿರ್ಮಿಸಿದ ಬಳಿಕವೇ ರಸ್ತೆ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಅನೇಕ ಕಡೆ ಇನ್ನೂ ಕಟ್ಟಡಗಳ ತೆರವು ಸಾಧ್ಯವಾಗದ ಕಾರಣ ಜಾಗ ಲಭ್ಯವಿರುವಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಅದರ ಬೆನ್ನಲ್ಲೇ ರಸ್ತೆ ಕಾಮಗಾರಿಯೂ ನಡೆಯುತ್ತಿದೆ. ಆದರೆ, ಜನ ಓಡಾಟ ಹೆಚ್ಚಿರುವ ಅನೇಕ ಪ್ರದೇಶಗಳಲ್ಲಿ ಚರಂಡಿಗಳಿಗೆ ಬೇಗನೆ ಮುಚ್ಚುಗೆಗಳನ್ನು ಹಾಕುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಚರಂಡಿಗಳನ್ನು ಎರಡೂವರೆ ಮೂರು ಅಡಿಗಳಷ್ಟು ಆಳದಲ್ಲಿ ನಿರ್ಮಿಸ ಲಾಗಿದೆ. ಇಲ್ಲಿ ಓಡಾಡುವ ಜನರು ತುಸು ಆಯ ತಪ್ಪಿದರೂ ಅದರೊಳಗೆ ಬೀಳುವ ಅಪಾಯವಿರುತ್ತದೆ. ಕೆಲವೆಡೆ ಚರಂಡಿಗಳನ್ನು ಮುಚ್ಚಿ ಜನರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ರಸ್ತೆಗಳು ಕೂಡುವ ಜಾಗದಲ್ಲಿ ಅವು ತೆರೆದುಕೊಂಡಿವೆ. ಕತ್ತಲಾದ ಬಳಿಕ ಈ ಜಾಗಗಳಲ್ಲಿ ಸಂಚರಿಸುವುದು ಅಪಾಯಕಾರಿ’ ಎಂದು ನಗರದ ನಿವಾಸಿ ರಾಕೇಶ್‌ ಹೇಳಿದರು.

ಮ್ಯಾನ್‌ಹೋಲ್‌ಗಳದ್ದೂ ಇದೇ ಸ್ಥಿತಿ: ನಗರದಲ್ಲಿ ಆರೇಳು ವರ್ಷಗಳ ಹಿಂದೆ ಪ್ರಾರಂಭವಾದ ಒಳಚರಂಡಿ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಇದಕ್ಕಾಗಿ ನಿರ್ಮಿಸಿರುವ ಮ್ಯಾನ್‌ಹೋಲ್‌ಗಳು ಸದಾ ಬಾಯ್ತೆರೆದುಕೊಂಡಿರುತ್ತವೆ. ಪ್ರಮುಖ ರಸ್ತೆಗಳ ಮಧ್ಯ ಭಾಗದಲ್ಲಿಯೇ ಮ್ಯಾನ್‌ಹೋಲ್‌ಗಳಿದ್ದು, ಹಲವೆಡೆ ಅವುಗಳಿಗೆ ಮುಚ್ಚಳಗಳನ್ನು ಅಳವಡಿಸಿಲ್ಲ. ಅಲ್ಲಿ ಮ್ಯಾನ್‌ಹೋಲ್‌ಗಳು ಇವೆ ಎಂಬ ಸೂಚನೆಯೂ ಇಲ್ಲ.

ನ್ಯಾಯಾಲಯ ರಸ್ತೆಯಲ್ಲೇ ಹತ್ತಾರು ಮ್ಯಾನ್‌ಹೋಲ್‌ಗಳಿದ್ದು, ಇವುಗಳಲ್ಲಿ ಹೆಚ್ಚಿನವುಗಳಿಗೆ ಮುಚ್ಚಳವಿಲ್ಲ. ವಾಹನ ಸವಾರರು ಹತ್ತಿರ ಸಮೀಪಿಸುವವರೆಗೂ ಅಲ್ಲಿ ಮ್ಯಾನ್‌ಹೋಲ್‌ ಇರುವುದೇ ಗೊತ್ತಾಗುವುದಿಲ್ಲ.

ಮತ್ತೆ ಮತ್ತೆ ಎತ್ತರಿಸುವ ಕೆಲಸ: ಒಳಚರಂಡಿ ಯೋಜನೆ ಆರಂಭವಾದ ವೇಳೆ ನಗರದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕಾಂಕ್ರೀಟ್‌ ರಸ್ತೆಗಳ ನಿರ್ಮಾಣವಾಗುವ ಮಾಹಿತಿ ಇರಲಿಲ್ಲ. ಹೀಗಾಗಿ ಆಗ ಅಸ್ತಿತ್ವದಲ್ಲಿದ್ದ ರಸ್ತೆಗಳ ಮಟ್ಟಕ್ಕೆ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗಿತ್ತು. ಈಗ ಪ್ರತಿ ರಸ್ತೆಯನ್ನೂ ಎತ್ತರಿಸುವ ಮತ್ತು ವಿಸ್ತರಿಸುವ ಕಾಮಗಾರಿಗಳು ನಡೆಯುತ್ತಿವೆ.

ನ್ಯಾಯಾಲಯ ರಸ್ತೆಯ ಎತ್ತರವನ್ನು ಹೆಚ್ಚಿಸಿ ಕಾಂಕ್ರೀಟ್‌ ಹಾಕುವ ಕಾರ್ಯ ಆರಂಭವಾದಾಗ ಮ್ಯಾನ್‌ಹೋಲ್‌ಗಳಿಗೆ ಗಾರೆ ಮಾಡಿ ಅವುಗಳ ಎತ್ತರವನ್ನು ತುಸು ಹೆಚ್ಚಿಸಲಾಯಿತು. ಆದರೆ, ರಸ್ತೆ ಎತ್ತರ ಇನ್ನೂ ಹೆಚ್ಚಿದ್ದರಿಂದ ಮತ್ತೊಮ್ಮೆ ಗಾರೆ ಮಾಡಲಾಯಿತು. ಉಳಿದ ರಸ್ತೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಮ್ಯಾನ್‌ಹೋಲ್‌ಗಳ ಎತ್ತರವನ್ನು ರಸ್ತೆಯ ಮಟ್ಟಕ್ಕೆ ಎತ್ತರಿಸಬೇಕಾಗಿದೆ. ಇದರಿಂದ ಕೆಲಸ ದುಪ್ಪಟ್ಟಾಗುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಸಂಪರ್ಕ ಸಿಕ್ಕಿಲ್ಲ: ಚರಂಡಿ ನಿರ್ಮಾಣ ಪೂರ್ಣಗೊಂಡಿರುವ ಕಡೆಗಳಲ್ಲಿ ಕೆಲವೆಡೆ ಮನೆಗಳಿಂದ ಬರುವ ಬಚ್ಚಲು ನೀರಿಗೆ ಚರಂಡಿ ಸಂಪರ್ಕಿಸಲಾಗಿದೆ. ಹಲವೆಡೆ ಅವುಗಳಿಗಿಂತ ಎತ್ತರದಲ್ಲಿ ಕಾಂಕ್ರೀಟ್‌ ಹಾಕಲಾಗಿದೆ. ಇದರಿಂದ ಚರಂಡಿಗಳು ತುಂಬಿಕೊಂಡು ನೀರು ಉಕ್ಕಿ ಅಕ್ಕಪಕ್ಕ ಹರಿಯುತ್ತಿವೆ.

ರಸ್ತೆ ಮತ್ತು ಚರಂಡಿ ಕಾಮಗಾರಿ ಯೊಂದಿಗೆ ಯುಜಿಡಿ ಕಾಮಗಾರಿಯಲ್ಲಿ ಸಮನ್ವಯತೆ ಹೊಂದಿಲ್ಲ. ಇದರಿಂದ ನಾವು ತೊಂದರೆ ಅನುಭವಿಸು ವಂತಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಪ್ರತಿಕ್ರಿಯಿಸಿ (+)