ಮಂಗಳವಾರ, ಡಿಸೆಂಬರ್ 10, 2019
19 °C

‘ಪುಟ್ಟರಾಜು’ ಪ್ರೇಮ ಕಹಾನಿ

Published:
Updated:
‘ಪುಟ್ಟರಾಜು’ ಪ್ರೇಮ ಕಹಾನಿ

ಕೊಕ್ಕೊ ದೇಸಿ ಕ್ರೀಡೆ. ಇಂದಿಗೂ ಶಾಲಾ– ಕಾಲೇಜುಗಳ ಕ್ರೀಡಾಕೂಟದ ಅವಿಭಾಜ್ಯ ಅಂಗವಾಗಿದೆ. ಈ ಕ್ರೀಡೆ ಮೂಲಕ ಚಂದನವನದಲ್ಲಿ ಪ್ರೇಮ ಕಹಾನಿ ಹೇಳಲು ಹೊರಟಿದ್ದಾರೆ ನಿರ್ದೇಶಕ ಸಹದೇವ್.

‘ಪುಟ್ಟರಾಜು’ ಶೀರ್ಷಿಕೆಯಡಿ ‘ಲವರ್ ಆಫ್‌ ಶಶಿಕಲಾ’ ಅಡಿಬರಹ ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ಕಾಲು ಭಾಗದಷ್ಟು ಮುಗಿದಿದೆ. ಚಿಕ್ಕಮಗಳೂರು ಮತ್ತು ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲೆಂದೇ ಸುದ್ದಿಗೋಷ್ಠಿ ಕರೆದಿತ್ತು.

‘ಕೊಕ್ಕೊ ಕ್ರೀಡೆ ಆಧರಿಸಿರುವ ಚಿತ್ರ ಇದು. ತುಮಕೂರಿನಲ್ಲಿ ನಡೆದ ಸತ್ಯ ಘಟನೆ ಸುತ್ತ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿರುವ ಎಲ್ಲರೂ ಹೊಸಬರು. ಅವರಿಗೆ ತರಬೇತಿ ನೀಡಿದ ಬಳಿಕವಷ್ಟೇ ಶೂಟಿಂಗ್‌ ಮಾಡಿದ್ದೇವೆ’ ಎಂದರು ನಿರ್ದೇಶಕ ಸಹದೇವ್.

ಚಿತ್ರದಲ್ಲಿ ಬಾಳಿನ ಮುಸ್ಸಂಜೆಯಲ್ಲಿರುವ ವೃದ್ಧರ ಪ್ರೇಮ ಕಥೆಯೂ ಇದೆಯಂತೆ. ಮುಗ್ಧ ಮನಸ್ಸುಗಳ ಸುತ್ತ ಕಥೆ ಹೆಣೆಯಲಾಗಿದೆ. ಪ್ರೀತಿ ಮತ್ತು ಪ್ರೇಮಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದು ಚಿತ್ರತಂಡದ ಹೇಳಿಕೆ.

ನಾಯಕಿ ರಾಜ್ಯಮಟ್ಟದ ಕೊಕ್ಕೊ ಕ್ರೀಡಾಪಟು. ಅವಳ ಪ್ರೀತಿಗೆ ಬಿದ್ದ ನಾಯಕ ಕೊಕ್ಕೊ ಆಡಲು ಹೋಗುತ್ತಾನೆ. ತರಬೇತುದಾರನಿಂದ ಅಪಮಾನಕ್ಕೀಡಾಗುತ್ತಾನೆ. ಕೊನೆಗೆ, ಕೊಕ್ಕೊ ಕಲಿತು ಹೇಗೆ ಪ್ರೀತಿ ಜಯಿಸುತ್ತಾನೆ ಎಂಬುದೇ ಕಥಾಹಂದರ.

ಚಿಕ್ಕಮಗಳೂರು ಮೂಲದ ಅಮಿತ್‌ಗೆ ಇದು ಮೊದಲ ಚಿತ್ರ. ‘ನನಗೆ ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ನಿರ್ದೇಶಕರೇ ತರಬೇತಿ ನೀಡಿದ್ದಾರೆ. ಚಿತ್ರದಲ್ಲಿ ಪ್ರೇಮದ ಜೊತೆಗೆ ಕಾಮಿಡಿಯೂ ಇದೆ. ಇದೊಂದು ನವೀರಾದ ಪ್ರೇಮ ಕಥಾನಕ’ ಎಂದರು.

ನಾಯಕಿ ಸುಷ್ಮಿತಾ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಪ್ರೌಢಶಾಲಾ ಹಂತದಲ್ಲಿ ಅವರು ಕ್ರೀಡಾಪಟುವಾಗಿದ್ದರಂತೆ. ಎಂಜಿನಿಯರಿಂಗ್‌ಗೆ ಪ್ರವೇಶ ‍ಪಡೆದ ಬಳಿಕ ಕ್ರೀಡಾ ಚಟುವಟಿಕೆಯಿಂದ ದೂರ ಉಳಿಯಬೇಕಾಯಿತಂತೆ. ‘ಚಿತ್ರದ ಮೂಲಕ ನಾನು ಮತ್ತೆ ಕ್ರೀಡಾಪಟುವಾಗಿರುವುದು ಖುಷಿ ಕೊಟ್ಟಿದೆ. ನನ್ನ ಶಾಲಾ ದಿನಗಳನ್ನು ನೆನೆಪಿಸಿದ ನಿರ್ದೇಶಕರಿಗೆ ನಾನು ಆಭಾರಿ’ ಎಂದು ಹೊಗಳಿದರು.

ಉಪೇಂದ್ರ ಅವರ ಸಿನಿಮಾಗಳಲ್ಲಿ ನಟಿಸಿದ್ದ ಸರೋಜಮ್ಮ ಅಲಿಯಾಸ್‌ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಕೂಡ ಈ ಚಿತ್ರದ ಮತ್ತೊಬ್ಬ ನಾಯಕಿ. ‘ನಮ್ಮ ಕುಟುಂಬದಲ್ಲಿ ಯಾರಾದರೊಬ್ಬರು ಸಿನಿಮಾ ರಂಗಕ್ಕೆ ಪ್ರವೇಶಿಸಬೇಕೆಂಬುದು ಅಜ್ಜಿಯ ಆಸೆಯಾಗಿತ್ತು. ಅದನ್ನು ಈಡೇರಿಸಿದ ಖುಷಿ ಇದೆ’ ಎಂದರು.

ಶ್ರೀರಾಮ್‌ ಗಂಧರ್ವ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ರಾಜು ಶಿರಾ ಛಾಯಾಗ್ರಹಣ ಇದೆ. ಕೃಷ್ಣಪ್ಪ, ಬಾಲಣ್ಣ ಮತ್ತು ನಾಗರಾಜು ಬಂಡವಾಳ ಹೂಡಿದ್ದಾರೆ.

ಪ್ರತಿಕ್ರಿಯಿಸಿ (+)