ರವಿಯ ಕಥೆ ಹೇಳುವ ಚಂದ್ರ!

7

ರವಿಯ ಕಥೆ ಹೇಳುವ ಚಂದ್ರ!

Published:
Updated:
ರವಿಯ ಕಥೆ ಹೇಳುವ ಚಂದ್ರ!

‘ಚಂದನವನ’ದ ಇಬ್ಬರು ಚಂದ್ರರು ಜೊತೆಸೇರಿ ರವಿಯ ಕಥೆ ಹೇಳಲು ಹೊರಟಿದ್ದಾರೆ. ಈ ಸಿನಿಮಾಕ್ಕೆ ‘ರವಿ ಹಿಸ್ಟರಿ’ ಎಂದು ಅವರು ಹೆಸರಿಟ್ಟಿದ್ದಾರೆ. ಇಬ್ಬರು ಚಂದ್ರರು ಅಂದರೆ ಕಾರ್ತಿಕ್ ಚಂದ್ರ ಮತ್ತು ಮಧುಚಂದ್ರ. ಕಾರ್ತಿಕ್ ಚಂದ್ರ ಅವರು ಸಿನಿಮಾಕ್ಕೆ ಹಣ ಹೂಡಿದ್ದಾರೆ, ಮಧುಚಂದ್ರ ಅವರು ಆ್ಯಕ್ಷನ್–ಕಟ್ ಹೇಳಿದ್ದಾರೆ.

ಸಿನಿಮಾದ ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಕೆಲವು ಮಾಹಿತಿಯನ್ನು ಸುದ್ದಿಗಾರರಿಗೆ ನೀಡಿದೆ. ‘ರವಿ ಎಂಬುದು ಬಹಳ ಸರಳವಾದ ಹೆಸರು. ನಮ್ಮಲ್ಲಿ ಸಾಕಷ್ಟು ಜನರಿಗೆ ಈ ಹೆಸರು ಇಡುತ್ತಾರೆ. ಹಾಗೆಯೇ ಸಾಹಿತ್ಯದಲ್ಲೂ ರವಿ ಎಂಬ ಹೆಸರು ವಿಪುಲವಾಗಿ ಬಳಕೆಯಾಗಿದೆ’ ಎಂದು ಮಾತಿಗೆ ಕುಳಿತರು ಮಧುಚಂದ್ರ.

‘ಸಿನಿಮಾ ಹೆಸರು ಕೇಳಿದ ಕೆಲವರು ಇದು ಡಿ.ಕೆ. ರವಿ, ರವಿ ಪೂಜಾರಿ, ರವಿ ಬೆಳಗೆರೆ ಅಥವಾ ರವಿಚಂದ್ರನ್ ಕುರಿತ ಚಿತ್ರವೇ ಎಂದು ಪ್ರಶ್ನಿಸಿದ್ದರು. ಆದರೆ ಇದು ಅವರ ಕುರಿತ ಸಿನಿಮಾ ಅಲ್ಲ. ರವಿ ಎಂಬ ಯುವಕನ ಜೀವನ ಪಯಣದ ಬಗೆಗಿನ ಸಿನಿಮಾ ಇದು. ಅವನು ತನ್ನ ಕನಸುಗಳನ್ನು ಸಾಕಾರ ಮಾಡಿಕೊಳ್ಳುವ ಪ್ರಯಾಣದಲ್ಲಿ ಏನಾಗುತ್ತದೆ ಎಂಬುದನ್ನು ಸಿನಿಮಾ ರೂಪದಲ್ಲಿ ತೋರಿಸುತ್ತೇವೆ. ಇದೊಂದು ಕಾಲ್ಪನಿಕ ಕಥೆ’ ಎಂದು ಮಧುಚಂದ್ರ ಸ್ಪಷ್ಟಪಡಿಸಿದರು.

ಈ ಸಿನಿಮಾದಲ್ಲಿ ರವಿಯನ್ನು ವಿವಿಧ ಶೆಡ್‌ಗಳಲ್ಲಿ ತೋರಿಸಲಾಗುತ್ತದೆಯಂತೆ. ಗ್ಯಾಂಗ್‌ಸ್ಟರ್‌ ವೇಷದಲ್ಲಿ, ಎಂಜಿನಿಯರಿಂಗ್‌ ವಿದ್ಯಾರ್ಥಿಯ ರೂಪದಲ್ಲಿ ರವಿ ಕಾಣಿಸಿಕೊಳ್ಳುತ್ತಾನಂತೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ನೀನಾಸಂ, ರಂಗಾಯಣದಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆದವರು ಈ ಸಿನಿಮಾ ತಂಡದಲ್ಲಿ ಇದ್ದಾರಂತೆ.

ಈ ಚಿತ್ರದಲ್ಲಿ ಪಲ್ಲವಿ ರಾಜು ಮತ್ತು ಐಶ್ವರ್ಯಾ ರಾವ್ ಅವರು ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ‘ನನಗೆ ಇದು ಮೂರನೆಯ ಸಿನಿಮಾ. ನಾನು ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ಪಲ್ಲವಿ. ಚಿತ್ರದ ನಾಯಕನ ಪಾತ್ರ ನಿಭಾಯಿಸಿರುವವರು ಕಾರ್ತಿಕ್. ವಿಜೇತ್ ಮತ್ತು ಸೂರಜ್ ಸರ್ಜಾ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry